ಪಿಎಸ್‌ಐ ಅಷ್ಟೇ ಅಲ್ಲ ಎಫ್‌ಡಿಎ, ಜೆಇ, ಕಾನ್ಸಟೇಬಲ್‌ ನೇಮಕಾತಿಯಲ್ಲೂ ಅಕ್ರಮ..!

By Kannadaprabha News  |  First Published Nov 4, 2022, 12:30 PM IST

ಚಾರ್ಜ್‌ಶೀಟ್‌ ಸಲ್ಲಿಸಿದ ಬಳಿಕವೂ ಸಹ, ಕೆಲವೆಡೆ ಆರೋಪಿಗಳ ವಶಕ್ಕೆ ಪಡೆದಿರುವುದು ಹಾಗೂ ಸಂಶಯಾಸ್ಪದರ ವಿರುದ್ಧ ಸಾಕ್ಷಿ ಸಂಗ್ರಹದಲ್ಲಿ ತೊಡಗಿರುವ ಸಿಐಡಿ 


ಆನಂದ್‌ ಎಂ. ಸೌದಿ

ಯಾದಗಿರಿ(ನ.04): ಪಿಎಸೈ ಅಷ್ಟೇ ಅಲ್ಲ, ಎಸ್‌ಡಿಎ, ಎಫ್‌ಡಿಎ, ಜೆಇ ಹಾಗೂ ಕಾನ್ಸಟೇಬಲ್‌ ಸೇರಿದಂತೆ ಇತರೆ ಇಲಾಖೆಗಳ ಸ್ಪರ್ಧಾತ್ಕ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಹಲವು ರೀತಿಯ ಅಕ್ರಮಗಳು ನಡೆದಿದ್ದು, ಅಕ್ರಮದ ಮೂಲ ಪತ್ತೆ ಹಚ್ಚಲು ತನಿಖೆ ಮುಂದುವರೆಯುವುದು ಅಗತ್ಯ ಎಂದು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ನಿವೇದಿಸಿಕೊಂಡಿದ್ದಾರೆ.

Tap to resize

Latest Videos

undefined

ಪಿಎಸೈ ಅಕ್ರಮ ಕುರಿತು ಸಿಐಡಿ ಅಧಿಕಾರಿಗಳು ಮೊನ್ನೆ ಅ.31 ರಂದು ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್‌ಶೀಟ್‌ಗಳ ಪೈಕಿ, ಕಲಬುರಗಿಯ ಶ್ರೀಶರಣಬಸವೇಶ್ವರ ಕಾಲೇಜ್‌ ಆಫ್‌ ಕಾಮರ್ಸ್‌ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮದ ಕುರಿತು ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣದ (0097/2022) ಕುರಿತು ವಿವರದಲ್ಲಿ ಈ ಪಿಎಸೈ ಜೊತೆಗೆ ಇನ್ನುಳಿದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳ ಬಗ್ಗೆಯೂ ಉಲ್ಲೇಖಿಸಿರುವುದು ಗಮನಾರ್ಹ.
ಚಾರ್ಜ್‌ಶೀಟ್‌ಗಳ ಸಲ್ಲಿಸಿದ ಬಳಿಕವೂ ಸಹ, ಕೆಲವೆಡೆ ಆರೋಪಿಗಳ ವಶಕ್ಕೆ ಪಡೆದಿರುವುದು ಹಾಗೂ ಸಂಶಯಾಸ್ಪದರ ವಿರುದ್ಧ ಸಾಕ್ಷಿ ಸಂಗ್ರಹದಲ್ಲಿ ತೊಡಗಿರುವ ಸಿಐಡಿ, ಪಿಎಸೈ ಅಕ್ರಮದ ತನಿಖೆಯ ಜೊತೆ ಜೊತೆಗೆ ಇನ್ನುಳಿದ ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮವನ್ನೂ ಬಯಲಿಗೆಳೆಯಲು ಸಿದ್ಧತೆ ನಡೆಸಿದಂತಿದೆ.

ಪಿಎಸ್‌ಐ ಅಕ್ರಮ: ಕಲ್ಯಾಣ ಕರ್ನಾಟಕದ ಮೊದಲ ರ‍್ಯಾಂಕ್‌ ವಿಜೇತೆ ಸೆರೆ

ಅರ್ಹ ಅಭ್ಯರ್ಥಿಗಳಿಗೆ ಸಿಗಬೇಕಿದ್ದ ಹುದ್ದೆ ಅನರ್ಹರಿಗೆ:

ಕನ್ನಡಪ್ರಭಕ್ಕೆ ಲಭ್ಯ, ದೋಷಾರೋಪಣ ಪಟ್ಟಿಯಲ್ಲಿ, ಆರೋಪಿ- ಜ್ಞಾನಜ್ಯೋತಿ ಇಂಗ್ಲೀಷ್‌ ಮೀಡಿಯಂ ಶಾಲೆಯ ಹೆಡ್‌ಮಾಸ್ಟರ್‌ ಕಾಶೀನಾಥ್‌ ಚಿಳ್ಳ ಬಗ್ಗೆ ವರದಿ ಉಲ್ಲೇಖಿಸಿರುವ ಸಿಐಡಿ, ಈ ಹಿಂದೆ ನಡೆದ ಎಸ್‌.ಡಿ.ಎ. (ದ್ವಿತೀಯ ದರ್ಜೆ ಸಹಾಯಕ), ಎಫ್‌.ಡಿ.ಎ. (ಪ್ರಥಮ ದರ್ಜೆ ಸಹಾಯಕ) ಜೆ.ಇ. (ಜ್ಯೂನಿಯರ್‌ ಎಂಜಿನೀಯರ್‌) ಮತ್ತು ಪಿಸಿ (ಪೊಲೀಸ್‌ ಕಾನ್ಸಟೇಬಲ್‌) ಲಿಖಿರ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದಂತೆ, ಇಲ್ಲಿಯೂ (545 ಪಿಎಸೈ) ಎಲ್ಲಾ ಸರಣಿಗಳ ಪ್ರಶ್ನೆಪತ್ರಿಕೆಗಳ ಸೋರಿಕೆ ಮಾಡಿ ರಾಜ್ಯಾದ್ಯಂತ ಬೇರೆ ಬೇರೆ ಪರೀಕ್ಷಾ ಕೇಂದ್ರಗಳಲ್ಲಿ ಡೀಲ್‌ ಮಾಡಿಕೊಂಡ ಅಭ್ಯರ್ಥಿಗಳಿಗೆ ಉತ್ತರಗಳ ರವಾನಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿದ್ದ ಅರ್ಹ ಅಭ್ಯರ್ಥಿಗಳಿಗೆ ಸಲ್ಲಿಬೇಕಾಗಿದ್ದ ಪಿಎಸೈ ಹುದ್ದೆಯನ್ನು ಅಕ್ರಮವಾಗಿ ಅರ್ಹರಲ್ಲದ ಅಭ್ಯರ್ಥಿಗಳಿಗೆ ಪಡೆಯುವಂತೆ ಮಾಡಿ, ಸರ್ಕಾರಕ್ಕೆ ಹಾಗೂ ಇತರೆ ಅಭ್ಯರ್ಥಿಗಳಿಗೆ ನಂಬಿಕೆ ದ್ರೋಹವೆಸಗಿ, ಒಳಸಂಚು ರೂಪಿಸಿ, ತಾಂತ್ರಿಕ ಸಾಕ್ಷ್ಯಾಧಾರಗಳು ಮತ್ತು ದಾಖಲಾತಿಗಳ ತನಿಖೆಗೆ ಸಾಕ್ಷಿ ಸಿಗದಂತೆ ನಾಶಪಡಿಸಿ ವಂಚನೆ ಮಾಡಿದ್ದಾರೆ. ತನಿಖೆಯ ವೇಳೆ ಸಂಗ್ರಹಿಸಿದ ಸಾಕ್ಷ್ಯಾಧಾರಗಳಿಂದ ಹಾಗೂ ಸೈಬರ್‌ ಕ್ರೈಂ ವಿಭಾಗದ ತಾಂತ್ರಿಕ ವಿಶ್ಲೇಷಣೆ ವರದಿಯಿಂದ ದೃಢಪಟ್ಟಿದೆ ಎಂದು ಸಿಐಡಿ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.

ಪತ್ರಿಕೆ-1 ರಲ್ಲೂ ಅಕ್ರಮ : ಮೌಲ್ಯಮಾಪಕರತ್ತ ಸಿಐಡಿ ಚಿತ್ತ!

ಪಿಎಸೈ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ-1 (ಓಎಂಆರ್‌ ಶೀಟ್‌) ತಿರುಚುವಿಕೆ, ಬ್ಲೂಟೂತ್‌ ದುರ್ಬಳಕೆಯ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಇದೀಗ ಪತ್ರಿಕೆ-1 ರಲ್ಲೂ (ಪ್ರಬಂಧ ಬರಹ- ಭಾಷಾಂತರ ರಚನೆ) ಅಕ್ರಮದ ಸುಳಿವು ಹಿನ್ನೆಲೆಯಲ್ಲಿ ಅದರ ಮೌಲ್ಯಮಾಪಕರ ಮಾಹಿತಿ ಸಂಗ್ರಹಣೆ ಹಾಗೂ ಪ್ರಶ್ನೆ ಪತ್ರಿಕೆಯ ಸೋರಿಕೆಯಾದ ಬಗ್ಗೆ ವಿಚಾರಣೆಗೆ ಮುಂದಾಗಿದೆ.

ಪಿಎಸೈ ಅಕ್ರಮ ಕುರಿತು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಕರಣಗಳ ಚಾಜ್‌ರ್‍ಶೀಟ್‌ನಲ್ಲಿ ಇಂತಹ ಬಗ್ಗೆ ತಿಳಿಸಿದ್ದಾರೆ. ಕಲಬುರಗಿಯ ಶ್ರೀಶರಣಬಸವೇಶ್ವರ ಕಾಲೇಜ್‌ ಆಫ್‌ ಕಾಮರ್ಸ್‌ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದ ಅಕ್ರಮದ ಕುರಿತು ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣದ (0097/2022) ಕುರಿತ ಚಾಜ್‌ರ್‍ಶೀಟ್‌ ವಿವರಣೆಯಲ್ಲಿ ನ್ಯಾಯಾಲಯಕ್ಕೆ ನಿವೇದನೆ ಮಾಡಿಕೊಂಡಿರುವ ಸಿಐಡಿ ಡಿವೈಎಸ್ಪಿ ಹಾಗೂ ತನಿಖಾಧಿಕಾರಿ ಶಂಕರಗೌಡ ಪಾಟೀಲ್‌, ಅಕ್ರಮದ ಮೂಲ ಪತ್ತೆ ಹಚ್ಚಲು ತನಿಖೆ ಮುಂದುವರೆಸುವುದು ಅವಶ್ಯ ಎಂದಿದ್ದಾರೆ.

ಮೊದಲ ಪತ್ರಿಕೆಯಲ್ಲೂ ಅಕ್ರಮವಾದ ಮಾಹಿತಿಯಿದ್ದು, ಅದರ ಮೌಲ್ಯಮಾಪನ ಮಾಡಿದವರ ಮಾಹಿತಿ ಸಂಗ್ರಹಣೆ -ವಿಚಾರಣೆಯ ಅವಶ್ಯಕತೆ ಹಿನ್ನೆಲೆಯಲ್ಲಿ ತನಿಖೆಯನ್ನು ಮುಂದುವರೆಸುವುದು ಅಗತ್ಯ ಎಂದು ತಿಳಿಸಲಾಗಿದೆ.
ಚಾರ್ಜ್‌ಶೀಟ್‌ಗಳ ಸಲ್ಲಿಸಿದಾಕ್ಷಣ ತನಿಖೆ ಮುಗಿಯಿತೇನೋ ಎಂದು ಭಾವಿಸುವವರಿಗೆ ಈ ಮೂಲಕ ಸೂಚ್ಯವಾಗಿ ತಿಳಿಸಿರುವ ಸಿಐಡಿ, ಈ ನಂತರವೂ ಇನ್ನೂ ಪತ್ತೆಯಾಗದ ಶಂಕಾಸ್ಪದರ ವಿರುದ್ಧ ಸಾಕ್ಷಿಗಳ ಸಂಗ್ರಹಿಸಿ ಹೆಡೆಮುರಿ ಕಟ್ಟಲಾಗುವುದು ಎಂದು ಹೇಳಿದಂತಿದೆ. ಚಾರ್ಜ್‌ಶೀಟ್‌ ಸಲ್ಲಿಸಿದ ಬಳಿಕವೂ ಅಕ್ರಮ ಆರೋಪಿಗಳನ್ನು ವಶಕ್ಕೆ ಪಡೆದ ಉದಾಹರಣೆಗಳಿವೆ.

ಅಕ್ರಮದ ಮೂಲ ಪತ್ತೆಗೆ ತನಿಖೆ ಅವಶ್ಯಕ :

ಪ್ರಕರಣ ಸಂಖ್ಯೆ 97/2022 ರ ಬಗ್ಗೆ 1318 ಪುಟಗಳ ಬಗ್ಗೆ ಚಾಜ್‌ರ್‍ಶೀಟ್‌ ಸಲ್ಲಿಸಿರುವ ಸಿಐಡಿ ಅಧಿಕಾರಿಗಳು, ಕಲಂ 173 (8) ದಂಡ ಪ್ರಕ್ರಿಯೆ ಸಂಹಿತೆ-1973 ರಂತೆ ತನಿಖೆ ಪ್ರಗತಿಯಲ್ಲಿದ್ದು, ವಿಚಾರಣೆ ಮುಂದುವರೆದಿರುತ್ತದೆ. ಮತ್ತು ಹೆಚ್ಚಿನ ಸಾಕ್ಷ್ಯಾಧಾರಗಳು ದೊರೆತಲ್ಲಿ ಘನ ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪಣೆ ಪಟ್ಟಿ ಮೂಲಕ ಸಲ್ಲಿಸಲಾಗುವುದು ಎಂದು ನಿವೇದಿಸಿದ್ದಾರೆ.

PSI Recruitment Scam: ಕಲಬುರಗಿ ವ್ಯಾಪ್ತಿಯ ಎಲ್ಲ 8 ಕೇಸಲ್ಲೂ ಚಾರ್ಜ್‌ಶೀಟ್

ನಿವೇದನೆಯ ಪ್ರಮುಖ ಅಂಶಗಳು :

ಆರೋಪಿಗಳ ಬೆರಳುಮುದ್ರೆಗಳ ಹಾಗೂ ಓಎಂಆರ್‌ ಅಸಲಿನ ಎಫ್‌ಎಸ್‌ಎಲ್‌ ವರದಿ, ಮತ್ತಷ್ಟೂಸಿಬ್ಬಂದಿಗಳ, ಮಧ್ಯವರ್ತಿಗಳ ಹಾಗೂ ಶಂಕಾಸ್ಪದ ಅಭ್ಯರ್ಥಿಗಳ ವಿಚಾರಣೆ, ಬ್ಲೂಟೂತ್‌ ಯಾರು ಹಾಗೂ ಎಲ್ಲಿ ತಯಾರಿಸಿ, ಸರಬರಾಜು ಮಾಡಿದರು? ಪ್ರಶ್ನೆ ಪತ್ರಿಕೆಗಳ ಸೋರಿಕೆಯಾದ ನಂತರ ಸರಣಿ ಉತ್ತರಗಳನ್ನು ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಯಾರು ಹೇಳಿದರು? ಹಣ ವರ್ಗಾವಣೆ ಹಾಗೂ ಹಣದ ಮೂಲ ಮತ್ತು ಹಣದ ಮೂಲದ ತನಿಖೆಯನ್ನು ಮುಂದುವರೆಸುವುದು ಅಗತ್ಯ ಎಂದು ನ್ಯಾಯಾಲಯಕ್ಕೆ ಸಿಐಡಿ ನಿವೇದನೆ ಮಾಡಿಕೊಂಡಿದ್ದಾರೆ.

ಪತ್ರಿಕೆ-1ರಲ್ಲೂ ಅಕ್ರಮ : ಕನ್ನಡಪ್ರಭ ವರದಿ

ಪತ್ರಿಕೆ-1 ರಲ್ಲೂ ಕೂಡ ಅಕ್ರಮ ನಡೆದಿರುವ ಬಗ್ಗೆ ಕನ್ನಡಪ್ರಭ ವರದಿ ಮಾಡಿತ್ತು. ಹಗರಣ ಬಯಲಿಗೆಳೆದ ಕನ್ನಡಪ್ರಭದ ಹಲವಾರು ವರದಿಗಳಲ್ಲಿ, ವಿವಿಧ ಆಯಾಮಗಳಲ್ಲಿ ಅಕ್ರಮ ನಡೆದಿರುವ ಸಾಧ್ಯಾಸಾಧ್ಯತೆ ಬಗ್ಗೆ ವರದಿ ಪ್ರಕಟಿಸಲಾಗಿತ್ತು.
 

click me!