ಕರ್ನಾಟಕದಲ್ಲಿ 7 ತಿಂಗಳಾದರೂ ಏರಿಕೆ ಆಗದ ಮದ್ಯ ಮಾರಾಟ: ಡ್ರಗ್ಸ್‌ ಬಳಕೆ ಏರಿಕೆ ಕಾರಣವೇ?

Published : Nov 25, 2025, 05:59 AM IST
Liquor Sales

ಸಾರಾಂಶ

2024ನೇ ಸಾಲಿಗೆ ಹೋಲಿಸಿದರೆ ಕಳೆದ ಏಳು ತಿಂಗಳಲ್ಲಿ ರಾಜ್ಯದ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಅದರಲ್ಲೂ ಬಿಯರ್‌ ಮಾರಾಟವಂತೂ ಪಾತಾಳಕ್ಕೆ ಕುಸಿದಿದೆ. ಗಾಂಜಾ, ಅಫೀಮು ಹಾವಳಿ ಮದ್ಯ ಮಾರಾಟಕ್ಕೆ ಹೊಡೆತ ನೀಡುತ್ತಿದೆ.

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ನ.25): 2024ನೇ ಸಾಲಿಗೆ ಹೋಲಿಸಿದರೆ ಕಳೆದ ಏಳು ತಿಂಗಳಲ್ಲಿ ರಾಜ್ಯದ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಅದರಲ್ಲೂ ಬಿಯರ್‌ ಮಾರಾಟವಂತೂ ಪಾತಾಳಕ್ಕೆ ಕುಸಿದಿದೆ. ಗಾಂಜಾ, ಅಫೀಮು ಹಾವಳಿ ಮದ್ಯ ಮಾರಾಟಕ್ಕೆ ಹೊಡೆತ ನೀಡುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. 2024ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೂ ವಿಸ್ಕಿ, ಬ್ರಾಂದಿ, ರಮ್, ಜಿನ್‌ ಸೇರಿ 407.40 ಲಕ್ಷ ಬಾಕ್ಸ್‌ (ಒಂದು ಬಾಕ್ಸ್‌ಗೆ 8.64 ಲೀಟರ್‌) ಐಎಂಎಲ್ ಮದ್ಯ ಮಾರಾಟವಾಗಿದ್ದರೆ, ಪ್ರಸಕ್ತ ಸಾಲಿನ ಇದೇ ಅವಧಿಯಲ್ಲಿ 403.04 ಲಕ್ಷ ಬಾಕ್ಸ್‌ ಐಎಂಎಲ್‌ ಮದ್ಯ ಮಾರಾಟವಾಗಿ 4.36 ಲಕ್ಷ ಬಾಕ್ಸ್‌ ಕೊರತೆ ಕಂಡುಬಂದಿದೆ.

2023ರಲ್ಲಿ ಈ ಪ್ರಮಾಣ 410.78 ಲಕ್ಷ ಬಾಕ್ಸ್‌ ಇತ್ತು ಎಂಬುದು ಗಮನಾರ್ಹ. ಕಳೆದ ಮೂರು ವರ್ಷದ ಅಂಕಿ-ಅಂಶಗಳನ್ನು ಗಮನಿಸುವುದಾದರೆ, ವರ್ಷದಿಂದ ವರ್ಷಕ್ಕೆ ಐಎಂಎಲ್‌ ಮದ್ಯ ಮಾರಾಟ ಕಡಿಮೆಯಾಗುತ್ತಾ ಬರುತ್ತಿದೆ. ಆಗಾಗ್ಗೆ ಮದ್ಯದ ಬೆಲೆ ಹೆಚ್ಚಳವೂ ಮಾರಾಟ ಕಡಿಮೆಯಾಗಲು ಪ್ರಮುಖ ಕಾರಣ. ಗಾಂಜಾ, ಅಫೀಮು ಮಾರಾಟದಿಂದಾಗಿಯೂ ಮದ್ಯ ಮಾರಾಟಕ್ಕೆ ಹೊಡೆತ ಬಿದ್ದಿದೆ. ಸರ್ಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಬಿಯರ್‌ ಮಾರಾಟ ಭಾರೀ ಕುಸಿತ: ಇನ್ನು ಬಿಯರ್‌ ವಿಷಯಕ್ಕೆ ಬರುವುದಾದರೆ, ಬಿಯರ್‌ ಮಾರಾಟದಲ್ಲಿ ಭಾರೀ ಕುಸಿತ ಕಂಡುಬಂದಿದೆ. ಪ್ರಸಕ್ತ ವರ್ಷದಲ್ಲಿ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೂ ಒಂದೇ ಒಂದು ತಿಂಗಳಲ್ಲೂ ಕಳೆದ ಸಾಲಿನ ತಿಂಗಳಿಗೆ ಹೋಲಿಸಿದರೆ ಅಧಿಕ ಪ್ರಮಾಣದಲ್ಲಿ ಬಿಯರ್‌ ಮಾರಾಟವಾಗಿಲ್ಲ. 2024ರಲ್ಲಿ 278.79 ಲಕ್ಷ ಬಾಕ್ಸ್‌ (ಒಂದು ಬಾಕ್ಸ್‌ನಲ್ಲಿ 7.80 ಲೀಟರ್‌) ಬಿಯರ್‌ ಮಾರಾಟವಾಗಿದ್ದರೆ, 2025ರಲ್ಲಿ ಇದು 227.62 ಲಕ್ಷ ಬಾಕ್ಸ್‌ಗೆ ಕುಸಿದಿದೆ. ಅಂದರೆ ಬರೋಬ್ಬರಿ 51.17 ಲಕ್ಷ ಬಾಕ್ಸ್‌ ಬಿಯರ್‌ ಮಾರಾಟ ಕಡಿಮೆಯಾಗಿದೆ.

ಗಾಂಜಾ, ಅಫೀಮು ಹಾವಳಿ: ಲೋಕೇಶ್‌
‘ಗಾಂಜಾ, ಅಫೀಮು ಹೆಚ್ಚಾಗಿ ಮಾರಾಟವಾಗುತ್ತಿರುವುದರಿಂದ ಮದ್ಯ ಮಾರಾಟ ಕಡಿಮೆಯಾಗಿದೆ. ಸರ್ಕಾರ ಡ್ರಗ್ಸ್‌ ತಯಾರಿಕೆ, ಮಾರಾಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಬೆಂಗಳೂರು ನಗರ ಜಿಲ್ಲಾ ಮದ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಲೋಕೇಶ್‌ ಒತ್ತಾಯಿಸಿದ್ದಾರೆ. ‘ಗಾಂಜಾ, ಡ್ರಗ್ಸ್‌ ವಶ ಎಂದು ದಿನ ಬೆಳಗಾದರೆ ಮಾಧ್ಯಮಗಳಲ್ಲಿ ವರದಿಯಾಗುತ್ತದೆ. ಸರ್ಕಾರ ಡ್ರಗ್ಸ್‌ ತಯಾರಿಕೆ ಮತ್ತು ಮಾರಾಟಕ್ಕೆ ಕಡಿವಾಣ ಹಾಕದಿರುವುದರಿಂದ ಯುವ ಜನತೆ ಡ್ರಗ್ಸ್‌ ಉಪಯೋಗಿಸುತ್ತಿದ್ದಾರೆ. ಮತ್ತೊಂದೆಡೆ, ಬಿಯರ್‌ ಮೇಲಿನ ಸುಂಕವನ್ನು ವರ್ಷದಲ್ಲಿ ಎರಡು ಬಾರಿ ಶೇ.50 ರಷ್ಟು ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ 100 ರಿಂದ 150 ರು.ಗೆ ಮಾರಾಟವಾಗುತ್ತಿದ್ದ ಬಿಯರ್‌ ದರ 200 ರಿಂದ 250 ರು.ಗೆ ಹೆಚ್ಚಳವಾಗಿದೆ. ಇದೂ ಸಹ ಬಿಯರ್‌ ಮಾರಾಟಕ್ಕೆ ಹೊಡೆತ ನೀಡಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಬಿಯರ್ ಮಾರಾಟ (ಲಕ್ಷ ಬಾಕ್ಸ್‌ಗಳಲ್ಲಿ)

ತಿಂಗಳು 2024 2025 ವ್ಯತ್ಯಾಸ
ಏಪ್ರಿಲ್ 49.72 41.60 -8.12
ಮೇ 50.71 37.10 -13.61
ಜೂನ್ 37.06 31.94 -5.12
ಜುಲೈ 36.06 27.93 -8.13
ಆಗಸ್ಟ್ 34.36 26.23 -8.13
ಸೆಪ್ಟೆಂಬರ್ 34.82 30.47 -4.35
ಅಕ್ಟೋಬರ್‌ 36.06 32.35 -3.71
ಒಟ್ಟು 278.79 227.62 -51.17

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್