
ದಾವಣಗೆರೆ (ನ.24): ರಾಮಾಯಣದಲ್ಲಿ ಬರುವ ಶ್ರೀರಾಮ, ಲಕ್ಷ್ಮಣ ಹಾಗೂ ರಾವಣ ಆದರ್ಶ ವ್ಯಕ್ತಿಗಳಲ್ಲ, ಕ್ರೂರಿಗಳು ಎಂದು ಬಂಡಾಯ ಸಾಹಿತಿ ಬಿ.ಟಿ.ಲಲತಾ ನಾಯಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದ ಎ.ವಿ.ಕೆ.ಮಹಿಳಾ ಕಾಲೇಜು ಸಭಾಂಗಣದಲ್ಲಿ ಭಾನುವಾರ ನಡೆದ ವಿಚಾರ ಸಂಕಿರಣದ ಸಮಾರೋಪದಲ್ಲಿ ಅವರು ಮಾತನಾಡಿದರು. ಎಲ್ಲರೂ ಪೂಜಿಸುವ ಶ್ರೀರಾಮ ತನ್ನ ಪತ್ನಿ ಮೇಲೆ ಅನುಮಾನಪಟ್ಟು, ಆಕೆಯನ್ನು ಕಾಡಿಗೆ ಬಿಟ್ಟು ಬರುವಂತೆ ಸಹೋದರ ಲಕ್ಷ್ಮಣನಿಗೆ ಹೇಳಿದ. ಕ್ರೂರ ಪ್ರಾಣಿಗಳಿಗೆ ಆಕೆ ಆಹಾರವಾಗಲಿ ಎನ್ನುವುದೇ ರಾಮನಿಗೆ ಬೇಕಿತ್ತು. ಆದರೆ, ಲಕ್ಷ್ಮಣನಾದರೂ ಅದು ತಪ್ಪು ಎನ್ನಬಹುದಿತ್ತು. ಆದರೆ, ಆತ ಹಾಗೆ ಹೇಳಲಿಲ್ಲ. ಲಕ್ಷ್ಮಣನಿಗೆ ಮೂಗು ಕೊಯ್ಯುವ ಚಪಲವಿತ್ತು. ಹಾಗಾಗಿಯೇ, ಶೂರ್ಪನಖಿಯ ಮೂಗು ಕೊಯ್ದ. ಮಹಾನ್ ಪರಾಕ್ರಮಿ ಎನಿಸಿಕೊಂಡಿದ್ದ ರಾವಣ, ಕಳ್ಳತನದಿಂದ ಪರರ ಪತ್ನಿಯನ್ನು ಹೊತ್ತೊಯ್ದ. ಆದರೆ, ಅವರೆಲ್ಲರನ್ನೂ ಭಕ್ತಿಯ ಹೆಸರಿನಲ್ಲಿ ಆದರ್ಶ ವ್ಯಕ್ತಿಗಳಂತೆ ಬಿಂಬಿಸಲಾಗಿದೆ ಎಂದು ಅವರು ಆಕ್ಷೇಪಿಸಿದರು.
ದ್ರೋಣಾಚಾರ್ಯ ಪಾಂಡವರಿಗೆ ಬಿಲ್ವಿದ್ಯೆ ಕಲಿಸುತ್ತಾನೆ. ಆದರೆ, ಏಕಲವ್ಯನಿಗೆ ಕಲಿಸಲಿಲ್ಲ. ಹೀಗಿದ್ದರೂ ಅಮಾಯಕ ಏಕಲವ್ಯನಿಗೆ ಹೆಬ್ಬೆಟ್ಟನ್ನೇ ಗುರುದಕ್ಷಿಣೆಯಾಗಿ ನೀಡುವಂತೆ ಕೇಳಿ ಪಡೆದು, ಆತನ ಜೀವನವನ್ನೇ ಹಾಳು ಮಾಡಿದರು. ಇವೆಲ್ಲಾ ದೋಷಗಳನ್ನು ಒಪ್ಪಿಕೊಳ್ಳುವುದಲ್ಲ ಎಂದರು.
ರಾಮಾಯಣ ಮತ್ತು ಮಹಾಭಾರತ ಕೂಡ ಇಂತಹುದೇ ಸಾಹಿತ್ಯ. ಶಾಂತಿಯ ಪ್ರತೀಕವಾಗಿರುವ ಬುದ್ಧನ ಕೈಯಲ್ಲಿ ಕತ್ತಿ, ಗುರಾಣಿ, ಖಡ್ಗ ಏನೂ ಇಲ್ಲ. ಮಹಾತ್ಮ ಗಾಂಧೀಜಿ ಕೈಯಲ್ಲಿ ಚರಕ ಮಾತ್ರ ಇದೆ. ಆದರೆ, ಇತ್ತೀಚೆಗೆ ಶ್ರೀರಾಮನ ಕೈಗೆ ಬಿಲ್ಲು, ಬಾಣ ನೀಡಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ದೇಗುಲಗಳು ಜನರನ್ನು ಮೌಢ್ಯತೆಗೆ ತಳ್ಳುತ್ತಿವೆ. ಮೌಢ್ಯಗಳಿಂದ ಹೊರ ಬರಲು ಶಿಕ್ಷಣವೇ ಪರಿಹಾರ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ