ಗುಳೆ: ಬೆಂಕಿಯಿಂದ ಬಾಣಲೆಗೆ: ಮಹಾನಗರ ತೊರೆದು ಹೋದವರಿಗೆ ಊರಿನಲ್ಲಿ ಪರದಾಟ!

By Kannadaprabha NewsFirst Published Apr 29, 2021, 7:35 AM IST
Highlights

ಗುಳೆ: ಬೆಂಕಿಯಿಂದ ಬಾಣಲೆಗೆ!| ಕರ್ಫ್ಯೂ ಭೀತಿಯಿಂದ ಮಹಾನಗರ ತೊರೆದು ಹೋದವರಿಗೆ ಊರಿನಲ್ಲಿ ಪರದಾಟ| ಜಿಲ್ಲೆ, ತಾಲೂಕು ಕೇಂದ್ರದಲ್ಲಿ ಬಸ್‌ ಇಲ್ಲ| ಸುಲಿಗೆ ಮಾಡಿದ ಖಾಸಗಿ ವಾಹನಗಳು

ಬೆಳಗಾವಿ(ಏ.29): ಕೊರೋನಾ ಎರಡನೇ ಅಲೆ ತಡೆಗೆ ರಾಜ್ಯ ಸರ್ಕಾರ ಘೋಷಿಸಿರುವ ಜನತಾ ಕಫä್ರ್ಯನಿಂದಾಗಿ ನಗರ ಪ್ರದೇಶಗಳಿಂದ ವಲಸೆ ಹೋಗುತ್ತಿರುವ ಜನರು ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಿಂದ ತಮ್ಮ ತಮ್ಮ ಊರುಗಳಿಗೆ ತೆರಳಲು ಸಮರ್ಪಕ ವಾಹನ ವ್ಯವಸ್ಥೆ ಇರದೆ ಪರದಾಡಿರುವ ಘಟನೆಗಳು ಉತ್ತರ ಕರ್ನಾಟಕದ ನಾನಾ ಭಾಗಗಳಲ್ಲಿ ಜರುಗಿವೆ. ಈ ವೇಳೆ ಗರ್ಭಿಣಿಯರು, ಮಕ್ಕಳು ಸೇರಿದಂತೆ ಕುಟುಂಬ ಸಮೇತ ಹೊರಟಿದ್ದ ಕೂಲಿಕಾರ್ಮಿಕರು ಸರಿಯಾದ ವಾಹನಗಳ ವ್ಯವಸ್ಥೆ ಇಲ್ಲದೆ ಬಸ್‌ ಸ್ಟ್ಯಾಂಡ್‌ಗಳಲ್ಲಿ, ನಡುಬೀದಿಯಲ್ಲೇ ಸಂಕಷ್ಟಕ್ಕೆ ಸಿಲುಕಿದ್ದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ನೋವಿನ ಮೇಲೆ ಬರೆ ಎಳೆದಂತೆ ಕೆಲವು ಖಾಸಗಿ ವಾಹನ ಮಾಲಿಕರು ದುಪ್ಪಟ್ಟು, ಮೂರು ಪಟ್ಟು ಬಾಡಿಗೆ ಹೇಳಿ ಬಡ ಕಾರ್ಮಿಕರನ್ನು ಸತಾಯಿಸಿರುವ ಘಟನೆಗಳು ಬಾಗಲಕೋಟೆ, ವಿಜಯಪುರಗಳಿಂದ ವರದಿಯಾಗಿವೆ.

ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಿಂದ ವಿವಿಧೆಡೆಗೆ ಬಸ್‌ ಸೌಕರ್ಯ ಕಲ್ಪಿಸಿತ್ತು. ಆದರೆ ಆ ಬಸ್‌ಗಳಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಕೇಂದ್ರಗಳಿಗೆ ಮಂಗಳವಾರ ಬೆಳಗ್ಗೆ ತಲುಪಿದ್ದ ಕೂಲಿ ಕಾರ್ಮಿಕರಿಗೆ ಅಲ್ಲಿಂದ ತಮ್ಮ ಊರಿಗೆ ತೆರಳಲು ಯಾವುದೇ ವ್ಯವಸ್ಥೆ ಇರಲಿಲ್ಲ. ಇದರಿಂದ ಬಹುತೇಕ ಮಂದಿ ಬಸ್‌ಸ್ಟ್ಯಾಂಡ್‌ಗಳಲ್ಲೇ ಕಾಲ ಕಳೆಯುವಂತಾಯಿತು. ಕಲಬುರಗಿ, ಧಾರವಾಡ, ಹಾವೇರಿ, ಕೊಪ್ಪಳ ಜಿಲ್ಲಾ ಕೇಂದ್ರಗಳಲ್ಲೂ ಜಿಲ್ಲಾಡಳಿತ ಗ್ರಾಮೀಣ ಪ್ರದೇಶಗಳಿಗೆ ಬಸ್‌ ವ್ಯವಸ್ಥೆ ಕಲ್ಪಿಸದ್ದರಿಂದ ಕಾರ್ಮಿಕರು ತೊಂದರೆ ಅನುಭವಿಸಿದ್ದು, ಹಲವರು ಸ್ವಂತ ವಾಹನ, ದ್ವಿಚಕ್ರ ವಾಹನಗಳ ವ್ಯವಸ್ಥೆ ಮಾಡಿಕೊಂಡು ತಮ್ಮ ಗಮ್ಯ ಸೇರಿದರು.

ಮಹಾ’ ಕಾರ್ಮಿಕರ ಪರದಾಟ:

ಜೊತೆಗೆ ತಮ್ಮ ಊರುಗಳಿಗೆ ಹೊರಟಿರುವ ಮಹಾರಾಷ್ಟ್ರ ಮೂಲದ ಕಾರ್ಮಿಕರು ವಿಜಯಪುರದಲ್ಲಿ ಸಿಕ್ಕಿ ಹಾಕಿಕೊಂಡು ಪರದಾಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದ ಈ ಕಾರ್ಮಿಕ ಕುಟುಂಬ ಮಂಗಳವಾರ ರಾತ್ರಿಯೇ ಬಸ್ಸಿನ ಮೂಲಕ ಬಂದು ವಿಜಯಪುರ ಕೇಂದ್ರ ಬಸ್‌ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಜನತಾ ಕಫä್ರ್ಯನಿಂದಾಗಿ ಮಹಾರಾಷ್ಟ್ರದ ಸಾಂಗೋಲಾಕ್ಕೆ ತೆರಳಲು ಬಸ್ಸಿನ ಸೌಕರ್ಯವಿಲ್ಲದೆ ಇಲ್ಲಿಯೇ ಉಳಿದುಕೊಂಡಿದ್ದಾರೆ. ಕೆಲವರು ಟಾಂಗಾದಲ್ಲಿ ಗಂಟು ಮೂಟೆ ಇಟ್ಟುಕೊಂಡು ರಾಷ್ಟ್ರೀಯ ಹೆದ್ದಾರಿ ಕಡೆಗೆ ತೆರಳಿದ್ದಾರೆ. ಆದರೆ, ಮಹಾರಾಷ್ಟ್ರ ಮೂಲದ ಕಾರ್ಮಿಕರು ವಾಹನ ಸಿಗದೇ ಅತಂತ್ರರಾಗಿದ್ದಾರೆ. ಈ ಕಾರ್ಮಿಕರಲ್ಲಿ 9ಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಅವರಲ್ಲಿ ಹಸುಗೂಸನ್ನು ಹೊಂದಿರುವ ಒಬ್ಬ ಬಾಣಂತಿ ಸಹ ಇದ್ದಾಳೆ. ವಾಹನ ಸೌಲಭ್ಯವಿಲ್ಲದೆ ಬಹಳ ಹೊತ್ತು ಬೀದಿ ಬದಿಯಲ್ಲಿಯೇ ಪರದಾಡುತ್ತಿದ್ದರು. ನಂತರ ಕಾರ್ಮಿಕರು ಖಾಸಗಿ ವಾಹನವೊಂದರ ಮೂಲಕ ಧೂಳಖೇಡ ಬಳಿ ಮಹಾರಾಷ್ಟ್ರ ಗಡಿಯತ್ತ ತೆರಳಿದರು.

"

ದುಪ್ಪಟ್ಟು ವಾಹನ ಬಾಡಿಗೆ ವಸೂಲಿ:

ರಾಜ್ಯದ ವಿವಿಧ ನಗರಗಳಿಂದ ಕುಟುಂಬಸಮೇತ ಗಂಟುಮೂಟೆ ಕಟ್ಟಿಕೊಂಡು ವಿಜಯನಗರ, ಬಾಗಲಕೋಟೆಯ ಜಿಲ್ಲಾಕೇಂದ್ರಗಳನ್ನು ತಲುಪಿದ್ದ ಕಾರ್ಮಿಕರಿಂದ ಖಾಸಗಿ ವಾಹನ ಮಾಲೀಕರು ದುಪ್ಪಟ್ಟು, ಮೂರು ಬಾಡಿಗೆಗೆ ಬೇಡಿಕೆಯಿಟ್ಟಪ್ರಸಂಗಗಳು ವರದಿಯಾಗಿವೆ. ಇದರಿಂದಾಗಿ ಮಂಗಳೂರು, ಬೆಂಗಳೂರು, ಉಡುಪಿಯಿಂದ ಬಂದಿದ್ದವರು ಹೆಚ್ಚಿಗೆ ಹಣ ನೀಡಿ ಖಾಸಗಿ ವಾಹನಗಳಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯತೆ ಉಂಟಾಯಿತು. ತಾಲೂಕು, ಹೋಬಳಿ ಕೇಂದ್ರಗಳಲ್ಲೂ ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರು ಈ ರೀತಿ ದುಬಾರಿ ಹಣ ಡಿಮ್ಯಾಂಡ್‌ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಉಡುಪಿಯಿಂದ ಆಗಮಿಸಿದ ಹಲವಾರು ಕುಟುಂಬಗಳು ಮುದ್ದೇಬಿಹಾಳಕ್ಕೆ ತೆರಳಲು ಸಾಕಷ್ಟುಪರದಾಡಿದರು. ಕೊನೆಗೆ ಕ್ರ್ಯೂಸರ್‌ ವಾಹನದಲ್ಲಿಯೇ ವಾಹನದ ಒಳಗೆ ಮತ್ತು ಮೇಲೆ ಜನರನ್ನು ತುಂಬಿಕೊಂಡು ಚಾಲಕ ಹೋಗುತ್ತಿರುವುದು ಕಂಡುಬಂತು. ಬೆಳಗಾವಿ, ಹುಬ್ಬಳ್ಳಿಗಳ ರೈಲು ನಿಲ್ದಾಣಗಳಿಗೆ ಅನೇಕ ಮಂದಿ ಮಹಾರಾಷ್ಟ್ರ ಮತ್ತು ಬೆಂಗಳೂರಿನಿಂದ ಆಗಮಿಸಿದ್ದು ಇಲ್ಲಿಯೂ ಅವರಿಗೆ ಮುಂದೆ ಪ್ರಯಾಣಿಸಲು ವಾಹನಗಳಿಲ್ಲದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

 

click me!