ಭಯೋತ್ಪಾದಕನ ಠಾಣೆಗೆ ಕರೆತಂದರೆ ಪೊಲೀಸರನ್ನ ಪ್ರಶ್ನಿಸ್ತೀರಾ? ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಹೈಕೋರ್ಟ್ ತರಾಟೆ

By Kannadaprabha News  |  First Published Jun 1, 2024, 6:16 AM IST

ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕ ವಸ್ತುಗಳನ್ನು ದಾಸ್ತಾನು ಮಾಡಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದ ಕಾರಣಕ್ಕೆ ಪೊಲೀಸ್ ಠಾಣೆ ಮುಂದೆ ಪ್ರತಿಭಟಿಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ಪೊಲೀಸರನ್ನು ನಿಂದಿಸಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಹೈಕೋರ್ಟ್‌ ಚಾಟಿ ಬೀಸಿದೆ.


ಬೆಂಗಳೂರು (ಜೂ.1) : ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕ ವಸ್ತುಗಳನ್ನು ದಾಸ್ತಾನು ಮಾಡಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದ ಕಾರಣಕ್ಕೆ ಪೊಲೀಸ್ ಠಾಣೆ ಮುಂದೆ ಪ್ರತಿಭಟಿಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ಪೊಲೀಸರನ್ನು ನಿಂದಿಸಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಹೈಕೋರ್ಟ್‌ ಚಾಟಿ ಬೀಸಿದೆ.

ಆರೋಪಿಯನ್ನು ಬಂಧಿಸಿದರೆ ಶಾಸಕರಾದವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಎಷ್ಟು ಸರಿ? ಠಾಣೆಗೆ ತೆರಳಿ ಪೊಲೀಸರನ್ನು ಏಕೆ ಪ್ರಶ್ನಿಸಬೇಕು? ಭಯೋತ್ಪಾದಕರನ್ನು ಬಂಧಿಸಿ ಠಾಣೆಗೆ ಕರೆತಂದಾಗ, ಬಂಧಿತ ಅಮಾಯಕನಾಗಿದ್ದಾನೆ ಎಂದು ಆತನ ಪತ್ನಿ ಹೇಳಿದರೆ ಆಗ ಶಾಸಕರು ಏನು ಮಾಡುತ್ತಾರೆ? ಆಗಲೂ ಪೊಲೀಸರನ್ನು ಪ್ರಶ್ನೆ ಮಾಡುತ್ತಾರೆಯೇ? ಶಾಸಕರು ಹೀಗೆ ನಡೆದುಕೊಂಡರೆ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಲು ಹೇಗೆ ಸಾಧ್ಯವಾಗುತ್ತದೆ? ಪೊಲೀಸರು ತಮ್ಮ ಕೆಲಸ ಮಾಡಬಾರದೇ? ಎಂದು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಪೀಠ ಕಟುವಾಗಿ ಪ್ರಶ್ನಿಸಿತು.

Tap to resize

Latest Videos

ಪೊಲೀಸರಿಗೆ ಬೆದರಿಕೆ ಹಾಕಿದ ಆರೋಪ; ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಮತ್ತೊಂದು ಎಫ್‌ಐಆರ್!

ಅಲ್ಲದೆ, ಶಾಸಕರು ಇರುವುದು ಶಾಸನವನ್ನು ರೂಪಿಸಲು. ಶಾಸನ ರಚನೆ ಮಾಡುವುದರಲ್ಲಿ ತಮ್ಮ ಕೊಡುಗೆ ನೀಡಬೇಕು. ಅದು ಬಿಟ್ಟು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸೂಕ್ತವಲ್ಲ. ಮುಂದೊಂದು ದಿನ ನ್ಯಾಯಾಧೀಶರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು ನೋಡಲು ಬಯಸಿ ಶಾಸಕರು ಕೋರ್ಟ್‌ಗೆ ಬಂದು ಕುಳಿತರೆ ನಾವೇನು ಮಾಡುವುದು? ಈ ರೀತಿಯ ವರ್ತನೆ ಸಹಿಸಲಾಗದು. ಇಂತಹ ಬೆಳವಣಿಗೆಗೆ ಅಂತ್ಯಹಾಡಬೇಕಿದೆ ಎಂದರು.

ಪೊಲೀಸರನ್ನು ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ ಹಾಗೂ ಪ್ರತಿಭಟನೆ ಮೂಲಕ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಶಾಸಕ ಹರೀಶ್ ಪೂಂಜಾ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ, ಶಾಸಕರ ನಡೆಗೆ ಈ ರೀತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಅಂತಿಮವಾಗಿ ಅರ್ಜಿ ಸಂಬಂಧ ಬೆಳ್ತಂಗಡಿ ಠಾಣಾ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದ ನ್ಯಾಯಪೀಠ, ಮುಂದಿನ ವಿಚಾರಣೆಯವರೆಗೆ ಪೊಲೀಸರು ಶಾಸಕರ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಸಮಾಧಾನದಿಂದ ಇರಬೇಕು ಎಂದು ಪೊಲೀಸರಿಗೆ ಮೌಖಿಕವಾಗಿ ಸೂಚಿಸಿತು.

ಇದಕ್ಕೂ ಮುನ್ನ ಶಾಸಕರ ಪರ ವಕೀಲರು ವಾದ ಮಂಡಿಸಿ, ಬಿಜೆಪಿ ಯುವ ಮೋರ್ಚಾದ ಶಶಿರಾಜ್ ಶೆಟ್ಟಿ ಅವರನ್ನು ಪೊಲೀಸರು ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದಲ್ಲಿ ಬಂಧಿಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಈ ಸಂಬಂಧ ಬಂಧಿತನ ಪತ್ನಿ ಶಾಸಕರಿಗೆ ಕರೆ ಮಾಡಿ ತಮ್ಮ ಪತಿಯನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಯಾವ ಕಾರಣಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಕೇಳಿದರೆ ಮಾಹಿತಿ ನೀಡುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದರು.

ಇದರಿಂದ ಬಂಧನದ ಕಾರಣ ಕೇಳಲು ಓರ್ವ ಜನಪ್ರತಿನಿಧಿಯಾಗಿ ಅರ್ಜಿದಾರರು ಬೆಳ್ತಂಗಡಿ ಠಾಣೆಗೆ ಹೋಗಿದ್ದಾರೆ ಅಷ್ಟೇ. ಪೊಲೀಸರು ಸೂಕ್ತ ಉತ್ತರ ನೀಡದಕ್ಕೆ ಗಟ್ಟಿಧ್ವನಿಯಲ್ಲಿ ಮಾತನಾಡಿದ್ದಾರೆ. ಅದಕ್ಕಾಗಿ ಶಾಸಕರ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವಿವರಿಸಿದರು.

ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಸಂಕಷ್ಟ..? ಪೊಲೀಸರನ್ನ ಮನೆಯೊಳಗೆ ಬಿಡದೇ ತಳ್ಳಾಟ..ನೂಕಾಟ..!

 

ಇದರಿಂದ ಬೇಸರಗೊಂಡ ನ್ಯಾಯಪೀಠ, ಜನಪ್ರತಿನಿಧಿಯಾದವರು ಯಾವುದೋ ವ್ಯಕ್ತಿಯನ್ನು ಬಂಧಿಸಿದಲ್ಲಿ ಪೊಲೀಸ್ ಠಾಣೆಗೆ ಹೋಗುವುದು ಎಷ್ಟು ಸರಿ. ಇತ್ತೀಚೆಗೆ ಪೊಲೀಸರ ವಿರುದ್ಧ ಧರಣಿ ಮಾಡುವುದು, ಕಲ್ಲು ಎಸೆಯುವುದು, ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸಾಮಾನ್ಯವಾಗಿದೆ. ಯಾವುದೋ ಒಂದು ಪ್ರಕರಣದಲ್ಲಿ ಪೊಲೀಸರಿಂದ ಒಬ್ಬರಿಗೆ ತೊಂದರೆ ಆಗಬಹುದು. ಆದರೆ, ಎಲ್ಲಾ ಪ್ರಕರಣಗಳಲ್ಲೂ ತೊಂದರೆಯಾಗುತ್ತಿದೆ ಎಂಬುದಾಗಿ ಬಿಂಬಿಸಬಾರದು. ಪೊಲೀಸರನ್ನು ನಾವು ರಕ್ಷಣೆ ಮಾಡಬೇಕಾಗಿದೆ. ಪ್ರಸ್ತುತ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಪರಾಧ ಪ್ರಕರಣಗಳು ನಡೆಯುತ್ತಿವೆ. ದೇಶದಲ್ಲಿ ಭದ್ರತೆಯೇ ಇಲ್ಲವಾಗಿದೆ. ಒಂದು ವೇಳೆ ಅಕ್ರಮವಾಗಿ ಬಂಧಿಸಿದ್ದರೆ ನ್ಯಾಯಾಲಯದ ಮೊರೆ ಹೋಗಿ ಪರಿಹಾರ ಕಂಡುಕೊಳ್ಳಬಹುದು. ಕೋರ್ಟ್‌ಗಳ ಕೆಲಸವನ್ನು ಶಾಸಕರು ಮಾಡಬಾರದು ಎಂದು ತಾಕೀತು ಮಾಡಿತು.

click me!