ಬ್ಲೂಫಿಲಂಗೆ 113 ಮಕ್ಕಳ ಬಳಕೆ: ಕೇಸು ಹಾಕದ್ದಕ್ಕೆ ಗರಂ

By Kannadaprabha News  |  First Published Jan 11, 2020, 8:44 AM IST

ರಾಜ್ಯದಲ್ಲಿ ಮಕ್ಕಳನ್ನು ಪೋರ್ನೊಗ್ರಫಿಗೆ ಬಳಿಸಿಕೊಂಡಿರುವ ಬಗ್ಗೆ ಎಫ್‌ಐಆರ್‌ ದಾಖಲಿಸದ ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌, ಇದೇ ಧೋರಣೆ ಮುಂದುವರೆದರೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರನ್ನು (ಡಿಜಿ-ಐಜಿಪಿ) ಕೋರ್ಟ್‌ಗೆ ಕರೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.


ಬೆಂಗಳೂರು [ಜ.11]:  ರಾಜ್ಯದಲ್ಲಿ ಒಟ್ಟು 113 ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಕೆ ಮಾಡಲಾಗಿದೆ ಎಂಬ ಕೇಂದ್ರ ಸರ್ಕಾರದ ವರದಿ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಿ, ಎಫ್‌ಐಆರ್‌ ದಾಖಲಿಸದ ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌, ಇದೇ ಧೋರಣೆ ಮುಂದುವರೆದರೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರನ್ನು (ಡಿಜಿ-ಐಜಿಪಿ) ಕೋರ್ಟ್‌ಗೆ ಕರೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ವಿಚಾರಣೆ ವೇಳೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಮಕ್ಕಳನ್ನು ಅಶ್ಲೀಲ ಚಿತ್ರಗಳಲ್ಲಿ ಬಳಕೆ ಮಾಡಿದ ಬಗ್ಗೆ ನೀಡಿರುವ ವರದಿಯಲ್ಲಿ ಹೇಳಿದಂತಹ ಘಟನೆ ರಾಜ್ಯದಲ್ಲಿ ನಡೆದಿಲ್ಲ. ನಮ್ಮ ಬಾಲಮಂದಿರದಲ್ಲಿ ಇರುವ ಮಕ್ಕಳ ಮೇಲಂತೂ ಇಂತಹ ದೌರ್ಜನ್ಯ ನಡೆದೇ ಇಲ್ಲ ಎಂದು ಸರ್ಕಾರಿ ವಕೀಲರು ಬಲವಾಗಿ ಸಮರ್ಥಿಸಿಕೊಂಡಾಗ ಕೆಂಡಾಮಂಡಲಗೊಂಡ ಹೈಕೋರ್ಟ್‌ ಈ ಎಚ್ಚರಿಕೆ ನೀಡಿದೆ.

Tap to resize

Latest Videos

ರಾಜ್ಯದಲ್ಲಿ ಬಾಲ ನ್ಯಾಯ (ಮಕ್ಕಳ ಕಾಳಜಿ ಹಾಗೂ ಸುರಕ್ಷತೆ) ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಹೈಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಹಾಗೂ ಬಚಪನ್‌ ಬಚಾವೊ ಸ್ವಯಂ ಸೇವಾ ಸಂಸ್ಥೆ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠವು ತನಿಖೆ ನಡೆಸದೆಯೇ ಅಪರಾಧ ಕೃತ್ಯ ನಡೆದಿಲ್ಲ ಎಂಬ ತೀರ್ಮಾನಕ್ಕೆ ಹೇಗೆ ಬಂದಿರಿ ಎಂದು ಕಟುವಾಗಿ ಪ್ರಶ್ನಿಸಿತು.

ವಾಟ್ಸಪ್, ಫೇಸ್ ಬುಕ್‌ನಲ್ಲಿ ಗ್ರೂಪ್ ಸೃಷ್ಟಿ ಮಾಡಿ ಅಶ್ಲೀಲ ವಿಡಿಯೋ ಶೇರ್!...

2018ರಲ್ಲಿ ಕರ್ನಾಟಕದಲ್ಲಿ 113 ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರವೇ ತನ್ನ ವರದಿಯಲ್ಲಿ ತಿಳಿಸಿದೆ. ಆದರೆ, ಈ ವರದಿ ಬಗ್ಗೆಯೇ ರಾಜ್ಯ ಸರ್ಕಾರ ಅಪನಂಬಿಕೆ ವ್ಯಕ್ತಪಡಿಸುತ್ತಿರುವಂತಿದೆ. ಹಾಗಿದ್ದರೆ, ಕೇಂದ್ರ ಸರ್ಕಾರದ ವರದಿಗಳನ್ನು ಬಿಟ್ಟು ಇನ್ಯಾವ ವರದಿ ಒಪ್ಪುತ್ತೀರಿ ಎಂದು ನ್ಯಾಯಪೀಠ ಪ್ರಶ್ನಿಸಿತು.

ಅಲ್ಲದೆ, ಈ ವರದಿ ಬಂದ ನಂತರ ಇಂತಹ ಘಟನೆ ನಡೆದಿರುವ ಬಗ್ಗೆ ತನಿಖೆ ನಡೆಸಬೇಕು ಹಾಗೂ ಪ್ರಕರಣ ಸಂಬಂಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಈ ಹಿಂದೆಯೇ ನ್ಯಾಯಾಲಯ ನಿರ್ದೇಶಿಸಿತ್ತು. ಆ ಆದೇಶವನ್ನು ಏಕೆ ಪಾಲನೆ ಮಾಡಿಲ್ಲ. ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸದೆಯೇ ಅಪರಾಧ ಕೃತ್ಯವೇ ನಡೆದಿಲ್ಲ ಎಂದು ಹೇಗೆ ತೀರ್ಮಾನಿಸುತ್ತೀರಿ? ಸರ್ಕಾರದ ಈ ಹೇಳಿಕೆ ಆಘಾತಕಾರಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿತು.

ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ: ಪೈಲಟ್‌ಗೆ ವಿಮಾನದಲ್ಲೇ ಕೋಳ!...

ರಾಜ್ಯ ಸರ್ಕಾರದ ಧೋರಣೆ ನೋಡಿದರೆ, ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಿದಂತಿದೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಪೊಲೀಸ್‌ ಮಹಾ ನಿರ್ದೇಶಕರಿಗೆ ಪರಿಸ್ಥಿತಿ ತಿಳಿಸಬೇಕು. ಜತೆಗೆ, ಪ್ರಕರಣದಲ್ಲಿ ಹೇಗೆ ಮುಂದುವರಿಯಬೇಕು ಎಂಬ ಬಗ್ಗೆ ಅಗತ್ಯ ಸಲಹೆ ಸೂಚನೆ ಪಡೆಯಬೇಕು. ಒಂದೊಮ್ಮೆ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸದಿದ್ದರೆ ಡಿಜಿ-ಐಜಿಪಿಯನ್ನು ಕೊರ್ಟ್‌ಗೆ ಕರೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.

ಪ್ರಕರಣ ಸಂಬಂಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸದೆಯೇ ರಾಜ್ಯದಲ್ಲಿ 113 ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಕೆ ಮಾಡಿಕೊಂಡಿಲ್ಲ ಎಂದು ಸರ್ಕಾರವು ಹೇಳುತ್ತಿರುವುದನ್ನು ನ್ಯಾಯಾಲಯ ನಂಬುವುದಿಲ್ಲ. ಹೀಗಾಗಿ, ಪ್ರಕರಣದ ಸಂಬಂಧ ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ನೀಡಲು ರಾಜ್ಯ ಅಡ್ವೋಕೇಟ್‌ ಜನರಲ್‌ ಅಥವಾ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ವಿಚಾರಣೆಗೆ ಹಾಜರಾಗಬೇಕು. ಜತೆಗೆ, ಪ್ರಕರಣ ಸಂಬಂಧ ಯಾವ ಕ್ರಮ ಕೈಗೊಳ್ಳಲಾಗುವುದು ಎಂಬ ಬಗ್ಗೆ ಸರ್ಕಾರವು ತಿಳಿಸಬೇಕು ಎಂದು ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಜ.13ಕ್ಕೆ ಮುಂದೂಡಿತು.

click me!