ಕೊಲೆ ಕೇಸಲ್ಲಿ ಮರ​ಣ ​ಪೂರ್ವ ಹೇಳಿಕೆ ನಿರ್ಣಾ​ಯ​ಕ: ಹೈಕೋರ್ಟ್‌

Kannadaprabha News   | Asianet News
Published : Oct 10, 2020, 02:21 PM IST
ಕೊಲೆ ಕೇಸಲ್ಲಿ ಮರ​ಣ ​ಪೂರ್ವ ಹೇಳಿಕೆ ನಿರ್ಣಾ​ಯ​ಕ: ಹೈಕೋರ್ಟ್‌

ಸಾರಾಂಶ

ಯಾದ​ಗಿ​ರಿ ಕೊಲೆ ಆರೋ​ಪಿಗೆ ಜೀವಾ​ವಧಿ ಸಜೆ ಕಾಯಂ| ಹೈಕೋರ್ಟ್‌ ಮಹ​ತ್ವದ ತೀರ್ಪು| ಮರಣ ಪೂರ್ವ ಹೇಳಿಕೆಯು ನ್ಯಾಯಾಲಯಕ್ಕೆ ವಿಶ್ವಾಸ ಮೂಡಿಸಿದರೆ ಮತ್ತು ತೃಪ್ತಿಪಡಿಸಿದರೆ ಸಾಕು, ಅದೊಂದನ್ನೇ ಆಧರಿಸಿ ಅಪರಾಧ ದೃಢಪಡಿಸಿಕೊಂಡು ಆರೋಪಿಯನ್ನು ದೋಷಿಯಾಗಿ ತೀರ್ಮಾನಿಸಬಹುದು| 

ವೆಂಕಟೇಶ್‌ ಕಲಿಪಿ 

ಬೆಂಗಳೂರು(ಅ.10): ಕೊಲೆ ಪ್ರಕರಣದಲ್ಲಿ ಮೃತರ ಮರಣ ಪೂರ್ವ ಹೇಳಿಕೆ ಬಗ್ಗೆ ನ್ಯಾಯಾಲಯಕ್ಕೆ ವಿಶ್ವಾಸ ಮೂಡಿದರೆ ಸಾಕು, ಅದೊಂದನ್ನೇ ಆಧರಿಸಿ ಆರೋಪಿಯನ್ನು ದೋಷಿಯಾಗಿ ತೀರ್ಮಾನಿಸಬಹುದು ಎಂದು ಹೈಕೋರ್ಟ್‌ ತೀರ್ಪು ನೀಡಿದೆ.

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಯಾದಗಿರಿ ತಾಲೂ​ಕಿನ ಕೋಳಿ​ವಾ​ಡ ನಿವಾಸಿ ಬೀರಪ್ಪ ತನ್ನ ಸಹೋದರಿಯ ಪುತ್ರಿಯನ್ನು ಕೊಲೆಗೈದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಮತ್ತು ಪಿ.ಕೃಷ್ಣ ಭಟ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಪ್ರಕರಣವೇನು?:

ಬೀರಪ್ಪ, ನಿಂಗಮ್ಮ ಮತ್ತು ಮಾರಲಿಂಗಮ್ಮ ಅವರು ಮಾಲಪ್ಪ ಬಲಿ ಚಕ್ರ ಎಂಬುವರ ಮಕ್ಕಳು. ಮಾಲಪ್ಪಗೆ ಯಾದ​ಗಿರಿ ತಾಲೂ​ಕಿನ ಕೋಳಿವಾಡದಲ್ಲಿ ಒಂದು ಮನೆಯಿದ್ದು, ಅದನ್ನು ನಿಂಗಮ್ಮನ ಮಗಳು ಶಿವಮ್ಮಗೆ (15) ಕೊಡಬೇಕು ಯೋಚಿಸಲಾಗಿತ್ತು. ಇದರಿಂದ ಅಸಮಾಧಾನಗೊಂಡ ಬೀರಪ್ಪ, 2012ರ ಆ.2ರಂದು ಬೆಳಗ್ಗೆ 6 ಗಂಟೆಗೆ ಮರಿಲಿಂಗಮ್ಮ ಮನೆಯಲ್ಲಿದ್ದ ಶಿವಮ್ಮಳ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ಘಟನೆ ಕಂಡ ನೆರೆಹೊರೆಯವರು ಶಿವಮ್ಮಳ ದೇಹದ ಮೇಲಿನ ಬೆಂಕಿ ನಂದಿಸಿ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದರು.

ನೋಂದಣಿ ಆಗದ ಔಷಧ ಅಂಗಡಿ ವಿರುದ್ಧ ಏನು ಕ್ರಮ?

ಆಸ್ಪತ್ರೆಯಲ್ಲಿ ಯಾದಗಿರಿ ಟೌನ್‌ ಠಾಣೆಯ ಪಿಎಸ್‌ಐ ಮತ್ತು ತಾಲೂಕು ಕಾರ್ಯನಿರ್ವಹಣಾ ಮ್ಯಾಜಿಸ್ಪ್ರೇಟ್‌ ಖುದ್ದಾಗಿ ಶಿವಮ್ಮ ಹೇಳಿಕೆ ದಾಖಲಿಸಿಕೊಂಡಿದ್ದರು. ಅಂದು ಸಂಜೆ 5.10ಕ್ಕೆ ಶಿವಮ್ಮ ಕೊನೆಯುಸಿರೆಳೆದಿದ್ದಳು. ಪೊಲೀಸರು ಕೊಲೆ ಆರೋಪದಡಿ ಬೀರಪ್ಪ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಿದ್ದರು. ಸಾಕ್ಷಿಗಳ ಹೇಳಿಕೆ ಮತ್ತು ಶಿವಮ್ಮ ಮರಣಪೂರ್ವ ಹೇಳಿಕೆ ಪರಿಗಣಿಸಿದ್ದ ಕೊಲೆ ಪ್ರಕರಣದಲ್ಲಿ ಬೀರಪ್ಪನನ್ನು ದೋಷಿಯಾಗಿ ತೀರ್ಮಾನಿಸಿದ್ದ ಯಾದಗಿರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯವ ಜೀವಾವಧಿ ಶಿಕ್ಷೆ ವಿಧಿಸಿ 2014ರ ಆ.25ರಂದು ತೀರ್ಪು ನೀಡಿತ್ತು.

ಈ ತೀರ್ಪು ಪ್ರಶ್ನಿಸಿ ಬೀರಪ್ಪ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ಸಾಕ್ಷಿಗಳೆಲ್ಲಾ ಪ್ರತಿಕೂಲ ಸಾಕ್ಷ್ಯ ನುಡಿದಿದ್ದಾರೆ. ಅನಾರೋಗ್ಯ ಸಮಸ್ಯೆಯಿಂದ ಶಿವಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದು, ಅದೇ ಅವಕಾಶ ಬಳಸಿ ತಾಲೂಕು ಕಾರ್ಯ ನಿರ್ವಹಣಾ ಮ್ಯಾಜಿಸ್ಪ್ರೇಟ್‌ ಶಿವಮ್ಮನ ಸುಳ್ಳು ಮರಣಪೂರ್ವ ಹೇಳಿಕೆ ಸೃಷ್ಟಿಸಿ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಿದ್ದಾರೆ. ಆದ್ದರಿಂದ, ಜೀವಾವಧಿ ಶಿಕ್ಷೆ ರದ್ದುಪಡಿಸಬೇಕು ಎಂದು ಕೋರಿದ್ದರು.

ಮೃತಳ ಮರಣಪೂರ್ವ ಹೇಳಿಕೆಗೆ ಮಾನ್ಯತೆ:

‘ಪ್ರಕರಣದಲ್ಲಿ ಶಿವಮ್ಮಳ ಮರಣಪೂರ್ವ ಹೇಳಿಕೆ ಗಮನಿಸಿದಾಗ, ಆಕೆಯೇ ಸ್ವಯಂ ಪ್ರೇರಿತವಾಗಿ ಹೇಳಿಕೆ ನೀಡಿದ್ದಾಳೆ ಮತ್ತು ಅದು ಸಹಜವಾಗಿದೆ ಎಂದು ಸಷ್ಟವಾಗುತ್ತದೆ. ಹೊರಗಿನ ಯಾವುದೇ ಒತ್ತಡದಿಂದ ಆಕೆ ಮರಣ ಪೂರ್ವಕ ಹೇಳಿಕೆ ನೀಡಿದ್ದಾಳೆ ಎಂದೆನಿಸುವುದಿಲ್ಲ. ಇನ್ನೂ ತಾಲೂಕು ಕಾರ್ಯ ನಿರ್ವಹಣಾ ಮ್ಯಾಜಿಸ್ಪ್ರೇಟ್‌ ಖುದ್ದಾಗಿ, ಶಿವಮ್ಮಳ ಮರಣಪೂರ್ವ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅವರನ್ನು ಪಾಟಿಸವಾಲಿಗೆ ಒಳಪಡಿಸಿದಾಗ ಶಿವಮ್ಮ ಮರಣ ಪೂರ್ವ ಹೇಳಿಕೆಯಲ್ಲಿ ಯಾವುದೇ ಸುಳ್ಳಿದೆ ಎಂಬುದು ದೃಢಪಡುವುದಿಲ್ಲ’ ಎಂದು ಅಭಿಪ್ರಾಯಪಟ್ಟಿತು.

ಅಲ್ಲದೆ, ‘ಮರಣ ಪೂರ್ವ ಹೇಳಿಕೆಯು ನ್ಯಾಯಾಲಯಕ್ಕೆ ವಿಶ್ವಾಸ ಮೂಡಿಸಿದರೆ ಮತ್ತು ತೃಪ್ತಿಪಡಿಸಿದರೆ ಸಾಕು, ಅದೊಂದನ್ನೇ ಆಧರಿಸಿ ಅಪರಾಧ ದೃಢಪಡಿಸಿಕೊಂಡು ಆರೋಪಿಯನ್ನು ದೋಷಿಯಾಗಿ ತೀರ್ಮಾನಿಸಬಹುದು. ಈ ಪ್ರಕರಣದಲ್ಲಿ ಶಿವಮ್ಮಳ ಮರಣ ಪೂರ್ವ ಹೇಳಿಕೆಯು ಸಮ್ಮತಿಸಲು ಅರ್ಹವಾಗಿದೆ. ಮುಖ್ಯವಾಗಿ ಮೃತಳು ಸಾವನ್ನಪ್ಪುವಾಗ ಆಕೆಗೆ 15 ವರ್ಷ. ಸಾವನ್ನಪ್ಪುವ ಮುನ್ನ ಸುಳ್ಳು ಹೇಳುವಂತಹ ವಯಸ್ಸು ಆಕೆಯದಲ್ಲ’ ಎಂದು ತೀರ್ಮಾನಿಸಿದ ನ್ಯಾಯಪೀಠ, ಬೀರಪ್ಪನ ಮೇಲ್ಮನವಿ ವಜಾಗೊಳಿಸಿ ಜೀವಾವಧಿ ಶಿಕ್ಷೆ ಕಾಯಂಗೊಳಿಸಿತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪದೇಪದೆ 'ನಮ್ಮಪ್ಪನೇ ಸಿಎಂ..' ಯತೀಂದ್ರ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರ? ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಕರ್ನಾಟಕ ವಿಧಾನಸಭೆಯಲ್ಲಿ ಎರಡು ಮಹತ್ವದ ವಿಧೇಯಕ ಮಂಡನೆ, ಉದ್ದೇಶಗಳು ಮತ್ತು ಕಾರಣಗಳು ಯಾವುವು?