
ಬೆಂಗಳೂರು (ಆ.15) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(AICC Chief Mallikarjun kharge) ಮತ್ತು ಅವರ ಕುಟುಂಬಸ್ಥರ ಒಡೆತನದ ಸಿದ್ಧಾರ್ಥ ವಿಹಾರ ಟ್ರಸ್ಟ್(Siddhartha Vihara Trust) ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನಿಯಮಬಾಹಿರವಾಗಿ ನಾಗರಿಕ ಸೌಲಭ್ಯ (ಸಿಎ) ನಿವೇಶನ ಮಂಜೂರು ಮಾಡಿಕೊಂಡ ಪ್ರಕರಣ ಕುರಿತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸುತ್ತಿರುವ ವಿಚಾರ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆ ಪ್ರಶ್ನಿಸಿ ‘ಲಂಚ ಮುಕ್ತ ಕರ್ನಾಟಕ ವೇದಿಕೆ’ ರಾಜ್ಯಾಧ್ಯಕ್ಷ ವಿಜಯರಾಘವ ಮರಾಠೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ಮಾಡಿ ವಿಚಾರಣೆ ಮುಂದೂಡಿದೆ.
ವಿಚಾರಣೆ ವೇಳೆ ವಿಜಯರಾಘವ ಪರ ವಕೀಲರು, ಪ್ರಕರಣ ಸಂಬಂಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತಮ್ಮ ಕಕ್ಷಿದಾರರು ಸಲ್ಲಿಸಿದ ಖಾಸಗಿ ದೂರನ್ನು ವಿಚಾರಣೆಗೆ ಪರಿಗಣಿಸಿದ ವಿಚಾರಣಾ ನ್ಯಾಯಾಲಯ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಬೇಕಾಗಿತ್ತು. ಆದರೆ, ತಾನೇ ವಿಚಾರಣೆ ನಡೆಸಲು ಮುಂದಾಗಿದೆ. ಇದು ಕಾನೂನು ಬಾಹಿರವಾಗಿದ್ದು, ಆ ಆದೇಶ ಮಾರ್ಪಡಿಸಿ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಆದೇಶಿಸಬೇಕು ಎಂದು ಕೋರಿದರು. ಈ ವಾದ ಪರಿಗಣಿಸಿದ ಪೀಠ, ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಲೋಕಾಯುಕ್ತ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿದೆ.
ಸಿದ್ಧಾರ್ಥ ವಿಹಾರ ಟ್ರಸ್ಟ್ ಬಿಡಿಎಗೆ ನಾಗರಿಕ ನಿವೇಶನ ಮಂಜೂರಾತಿಗೆ ಕೋರಿ ಅರ್ಜಿ ಸಲ್ಲಿಸಿತ್ತು. ಆಗ ಪರಿಶಿಷ್ಟ ಜಾತಿ(ಎಸ್ಸಿ) ಕೋಟಾದಡಿ ಸುಳ್ಳು ಮಾಹಿತಿ ನೀಡಿ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸಚಿವರಾಗಿದ್ದಾಗ ಅವರ ಪ್ರಭಾವ ಬಳಿಸಿ ಬನಶಂಕರಿಯಲ್ಲಿ 8,125 ಚದರ ಮೀಟರ್ ವಿಸ್ತೀರ್ಣದ ಸಿಎ ನಿವೇಶನವನ್ನು ಕಾನೂನುಬಾಹಿರವಾಗಿ ಪಡೆದುಕೊಂಡಿದೆ. ಬಿಡಿಎ ಅಧಿಕಾರಿಗಳು ಗುತ್ತಿಗೆ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿದ್ದಾರೆ. ನಂತರ ಬಿಟಿಎಂ ಲೇಔಟ್‌ನಲ್ಲಿ ಸುಮಾರು 130 ಕೋಟಿ ಮೌಲ್ಯದ ಬದಲಿ ನಿವೇಶನವನ್ನು ಕೇವಲ 10 ದಿನಗಳ ಈ ಟ್ರಸ್ಟ್‌ಗೆ ವರ್ಗಾಯಿಸಿಕೊಂಡಿದೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ವಿವರಿಸಿದ್ದಾರೆ.
ಅಲ್ಲದೆ, ನಿಯಮಗಳನ್ವಯ ಮಂಜೂರಾದ ನಿವೇಶನದಲ್ಲಿ ಮೂರು ವರ್ಷದೊಳಗೆ ಕಟ್ಟಡ ನಿರ್ಮಿಸಿಲ್ಲ. ಆದ್ದರಿಂದ ಪ್ರಕರಣವನ್ನು ಭ್ರಷ್ಟಾಚಾರ ತಡೆ ಕಾಯ್ದೆಯಡಿ ತನಿಖೆಗೆ ಒಳಪಡಿಸಬೇಕು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದೆ. ವಿಶೇಷ ನ್ಯಾಯಾಲಯ ತನಿಖೆಯನ್ನು ಲೋಕಾಯುಕ್ತ ಪೊಲೀಸರಿಗೆ ವಹಿಸಿಲ್ಲ. ಬದಲಾಗಿ ಬಿಎನ್‌ಎಸ್‌ಎಸ್ ಸೆಕ್ಷನ್ 223ರ ಅಡಿ ತಾನೇ ನೇರವಾಗಿ ವಿಚಾರಣೆ ನಡೆಸಲು ನಿರ್ಧರಿಸಿರುವುದು ಕಾನೂನು ಬಾಹಿರ. ಮತ್ತೊಂದೆಡೆ ಏರೋಸ್ಪೇಸ್ ಮತ್ತು ಸಂಶೋಧನೆಯಲ್ಲಿ ಅನುಭವವಿಲ್ಲದಿದ್ದರೂ ದೇವನಹಳ್ಳಿ ಏರೋಸ್ಪೇಸ್ ಪಾರ್ಕ್ ನಲ್ಲಿ ಟ್ರಸ್ಟ್ ಭೂಮಿ ಮಂಜೂರು ಮಾಡಿಕೊಂಡಿದೆ. ಈ ಕುರಿತು ಆರೋಪ ಕೇಳಿಬಂದ ನಂತರ ಜಮೀನು ಹಿಂತಿರುಗಿಸಿದೆ. ಈ ಕುರಿತು ತನಿಖೆ ನಡೆಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ