
ಬೆಂಗಳೂರು (ಮೇ.1): ರಾಜಕೀಯ ಉದ್ದೇಶಕ್ಕೆ ಧಾರ್ಮಿಕ ಸ್ಥಳಗಳನ್ನು ಬಳಸುವುದು ಸರಿಯಲ್ಲ ಎಂದಿರುವ ಹೈಕೋರ್ಟ್, ಲೋಕಸಭಾ ಚುನಾವಣೆ ವೇಳೆ ಶಿವಮೊಗ್ಗ ದೇವಸ್ಥಾನದಲ್ಲಿ ರಾಜಕೀಯ ಸಭೆ ನಡೆಸಿದ ಆರೋಪದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮತ್ತು ಇತರರ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ.
2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಶಿವಮೊಗ್ಗದ ತುಂಗಾನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಮತ್ತು ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿ ರದ್ದತಿ ಕೋರಿ ಕೆ.ಎಸ್.ಈಶ್ವರಪ್ಪ ಸೇರಿ ಒಂಬತ್ತು ಮಂದಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ನಡೆಸಿತು.
ಕನಿಷ್ಠ ಪಕ್ಷ ದೇವಸ್ಥಾನದ ಅರ್ಚಕ ಮತ್ತು ಇನ್ನೊಬ್ಬ ಅರ್ಜಿದಾರರ ವಿರುದ್ಧ ಪ್ರಕರಣ ರದ್ದುಪಡಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಆಗ ಪೀಠವು ರಾಜಕೀಯ ಕಾರಣಗಳಿಗೆ ನೀವು ಧಾರ್ಮಿಕ ಸ್ಥಳಗಳನ್ನು ಬಳಕೆ ಮಾಡಲಾಗದು. ಇದಕ್ಕೆ ವಿರಾಮ ಹಾಕಬೇಕು ಎಂದು ಮೌಖಿಕವಾಗಿ ಹೇಳಿತು.
ಅರ್ಜಿದಾರರ ಪರ ವಕೀಲ ಲೀಲೇಶ್ ಕೃಷ್ಣ ಅವರು ‘ದೇವಸ್ಥಾನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಯಾವುದೇ ರಾಜಕೀಯ ಭಾಷಣ ಮಾಡಿಲ್ಲ. ಯಾವ ರಾಜಕೀಯ ಚಟುವಟಿಕೆ ನಡೆಸಲಾಗಿದೆ ಎಂಬುದನ್ನು ದೂರಿನಲ್ಲಿ ವಿವರಿಸಲಾಗಿಲ್ಲ. ಅಪರಾಧ ಎನಿಸುವ ಯಾವುದೇ ಕೃತ್ಯ ನಡೆಸಿಲ್ಲ. 14 ಸಾಕ್ಷಿಗಳ ಪೈಕಿ 13 ಮಂದಿ ಸರ್ಕಾರಿ ಅಧಿಕಾರಿಗಳೇ ಆಗಿದ್ದಾರೆ. ಒಬ್ಬರು ಮಾತ್ರ ಪ್ರತ್ಯಕ್ಷದರ್ಶಿಯಾಗಿದ್ದಾರೆ’ ಎಂದು ತಿಳಿಸಿದರು.
ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್.ಜಗದೀಶ್ ಅವರು ದೇವಸ್ಥಾನದಲ್ಲಿ ಸಭೆ ನಡೆಸಲಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಸಂಬಂಧ ಚರ್ಚೆ ನಡೆಸಲಾಗಿದೆ. ಆದ್ದರಿಂದ, ಧಾರ್ಮಿಕ ಸ್ಥಳಗಳ (ದುರ್ಬಳಕೆ) ತಡೆ ಕಾಯಿದೆ ಅನ್ವಯಿಸಿರುವುದು ಸಮರ್ಥನೀಯ ಎಂದರು.
ವಾದ ಪ್ರತಿವಾದ ಆಲಿಸಿದ ಕೋರ್ಟ್, ಈ ಕುರಿತು ವಿಸ್ತೃತ ವಿಚಾರಣೆ ಅಗತ್ಯವಿದೆ ಎಂದ ಜೂ.2ನೇ ವಾರಕ್ಕೆ ವಿಚಾರಣೆ ಮುಂದೂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ