ರಾಜ್ಯದಲ್ಲಿ ರಾಜಕೀಯ ಸಭೆಗಳಿಗೆ ಕಡಿವಾಣ ?

By Kannadaprabha NewsFirst Published Apr 18, 2021, 7:55 AM IST
Highlights

ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಹಿನ್ನೆಲೆ ಧಾರ್ಮಿಕ ಕಾರ್ಯಗಳಿಗೆ ನಿರ್ಬಂಧ ವಿಧಿಸಿರುವ ಸರ್ಕಾರ ರಾಜಕೀಯ ಸಭೆಗಳಿಗೆ ಅವಕಾಶ ನೀಡಿರುವುದನ್ನು ಮರು ಪರಿಶೀಲನೆ ನಡೆಸಬೇಕು ಎಂದು ಹೈ ಕೋರ್ಟ್‌ ಪ್ರಶ್ನೆ ಮಾಡಿದೆ. 

ಬೆಂಗಳೂರು (ಏ.18):  ‘ಧಾರ್ಮಿಕ ಸಮಾರಂಭಗಳಿಗೆ ನಿಷೇಧ ಹೇರಲಾಗಿದೆ. ಆದರೆ, ರಾಜಕೀಯ ಸಭೆಗಳನ್ನು ನಡೆಸಲು ಅವಕಾಶ ನೀಡಿರುವ ಬಗ್ಗೆ ಸರ್ಕಾರ ಮರುಪರಿಶೀಲನೆ ನಡೆಸಬೇಕು’ ಎಂಬ ಮಹತ್ವದ ಸೂಚನೆಯನ್ನು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೀಡಿದೆ.

ಇದೇ ವೇಳೆ, ಉಪಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳಲ್ಲಿ ಫಲಿತಾಂಶದ ದಿನ ಕೋವಿಡ್‌ ನಿಯಮಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ. ಕೊರೋನಾ ಹಾವಳಿ ನಡುವೆಯೂ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಸಭೆಗಳನ್ನು ನಡೆಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಸೂಚನೆಗಳಿಗೆ ಮಹತ್ವವಿದೆ. ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೋವಿಡ್‌ ಪ್ರಕರಣಗಳ ನಿರ್ವಹಣೆಗೆ ಕೈಗೊಂಡಿರುವ ಮೂಲಸೌಕರ್ಯಗಳ ಸಿದ್ಧತೆಗಳ ಬಗ್ಗೆ ನ್ಯಾಯಪೀಠ ವಿಚಾರಣೆ ನಡೆಸಿತು. ಈ ವೇಳೆ ಹಾಜರಾದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ, ‘ರಾಜ್ಯದಲ್ಲಿ ಕೋವಿಡ್‌ ಸೋಂಕಿತರಿಗೆ ಹಾಸಿಗೆ, ಆ್ಯಂಬುಲೆನ್ಸ್‌, ಆಕ್ಸಿಜನ್‌, ಔಷಧ ಕೊರತೆ ಇಲ್ಲ ಹಾಗೂ ರೆಮ್‌ಡೆಸಿವರ್‌ ಸಾಕಷ್ಟುಪ್ರಮಾಣದಲ್ಲಿ ಲಭ್ಯವಿದೆ’ ಎಂದರು.

ಇತರ ಧರ್ಮಕ್ಕಿಲ್ಲದ ನಿರ್ಬಂಧ ಮರ್ಕಝ್‌ಗೆ ಮಾತ್ರ ಯಾಕೆ? ದೆಹಲಿ ಕೋರ್ಟ್ ಪ್ರಶ್ನೆ!

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಾಜಕೀಯ ಸಭೆಗಳ ನಿಯಂತ್ರಣದ ಸೂಚನೆ ನೀಡಿತು. ಅಲ್ಲದೆ, ಕೊರೋನಾ ಸಂಬಂಧಿತ ದೂರುಗಳು ಹಾಗೂ ಸಮಸ್ಯೆಗಳ ಇತ್ಯರ್ಥಕ್ಕೆ ನಾನಾ ವಲಯದ ಗಣ್ಯರನ್ನೊಳಗೊಂಡ ಸಮಿತಿ ರಚಿಸಬೇಕು ಎಂದು ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ನಿವೃತ್ತ ನ್ಯಾಯಮೂರ್ತಿ, ಐಎಎಸ್‌, ಐಪಿಎಸ್‌ ಅಧಿಕಾರಿಗಳು ಇಂತಹ ಸಮಿತಿಗಳಲ್ಲಿದ್ದರೆ ಸರ್ಕಾರಕ್ಕೂ ಅನುಕೂಲವಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯವ್ಯಕ್ತ ಪಡಿಸಿತು.

click me!