Uttara Kannada: ಕೃಷಿ ಜಾಗ ಖರೀದಿಗೆ ಸೆಲೆಕ್ಟ್ ಫೌಂಡೇಷನ್‌ಗೆ ಅನುಮತಿ

By Kannadaprabha NewsFirst Published Dec 24, 2021, 10:36 AM IST
Highlights

*   ಧಾರವಾಡ ಹೈಕೋರ್ಟ್‌ ಪೀಠ ಆದೇಶ
*   ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಹಿರೆಯಂಗಡಿ ಗ್ರಾಮದಲ್ಲಿ 4 ಎಕರೆ ಕೃಷಿ ಭೂಮಿ
*   ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದ ಕೋರಿ ಫೌಂಡೇಷನ್‌
 

ಬೆಂಗಳೂರು(ಡಿ.24):  ಉತ್ತರ ಕನ್ನಡ(Uttara Kannada) ಜಿಲ್ಲೆ ಹೊನ್ನಾವರ ತಾಲೂಕಿನ ಹಿರೆಯಂಗಡಿ ಗ್ರಾಮದಲ್ಲಿ ನಾಲ್ಕು ಎಕರೆ ಕೃಷಿ ಜಮೀನು ಖರೀದಿಸಲು ಅಥವಾ ದಾನವಾಗಿ ಪಡೆಯಲು ಸೆಲೆಕ್ಟ್ ಫೌಂಡೇಷನ್‌ಗೆ(Select Foundation) ಹೈಕೋರ್ಟ್‌ ಅನುಮತಿ ನೀಡಿದೆ. ಜಮೀನು(Land) ಖರೀದಿಸಲು ಅನುಮತಿ ನೀಡಲು ಕೋರಿ ಸಲ್ಲಿಸಲಾಗಿದ್ದ ಅರ್ಜಿ ತಿರಸ್ಕರಿಸಿದ್ದ ಉತ್ತರ ಕನ್ನಡ ಜಿಲ್ಲಾಧಿಕಾರಿಯ ಆದೇಶ ರದ್ದುಪಡಿಸಬೇಕು ಎಂದು ಬಡ, ಆರ್ಥಿಕವಾಗಿ ಹಿಂದುಳಿದವರ ಮತ್ತು ಅಂಗವಿಕಲರ ಕ್ಷೇಮಾಭಿವೃದ್ಧಿಗೆ ಶ್ರಮಿಸುತ್ತಿರುವ ಸೆಲೆಕ್ಟ್ ಫೌಂಡೇಷನ್‌ ಟ್ರಸ್ಟ್‌ನ ಟ್ರಸ್ಟಿ ಮಾರುತಿ ಗುರೂಜಿ ಹೈಕೋರ್ಟ್‌ಗೆ(High Court) ತಕರಾರು ಅರ್ಜಿ ಸಲ್ಲಿಸಿದ್ದರು.

"

ಅರ್ಜಿಯನ್ನು ಧಾರವಾಡ ಹೈಕೋರ್ಟ್‌(Dharwad High Court) ನ್ಯಾಯಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಚಂದ್ರಗೌಡ ಅವರು, ಪ್ರಕರಣದಲ್ಲಿ ಪ್ರಶ್ನಿಸಲಾಗಿರುವ ಹಿರೆಯಂಗಡಿ ಗ್ರಾಮದ ಸರ್ವೇ ನಂ. 204ಎಎಎ/4ರಲ್ಲಿರುವ ನಾಲ್ಕು ಎಕರೆ ಕೃಷಿ ಜಮೀನು ಖರೀದಿಸಲು ಅರ್ಜಿದಾರ ಟ್ರಸ್ಟ್‌ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿ ಆದೇಶಿಸಿದ್ದಾರೆ.

Karnataka High Court : ಯೂಟ್ಯೂಬ್‌ನಲ್ಲಿ ಹೈಕೋರ್ಟ್ ಕಲಾಪ

ಕುಂದಾಪುರ ತಾಲೂಕಿನ ಹಿರೆಯಂಗಡಿ ಗ್ರಾಮದ ಸರ್ವೇ ನಂ.204ಎಎಎ/4ರಲ್ಲಿರುವ ನಾಲ್ಕು ಎಕರೆ ಕೃಷಿ ಜಮೀನನ್ನು ಶಾಲೆ ನಿರ್ಮಿಸಲು ಸೆಲೆಕ್ಟ್ ಫೌಂಡೇಷನ್‌ಗೆ ದಾನ ನೀಡುವುದಕ್ಕೆ ಜಮೀನು ಮಾಲೀಕರು ಒಪ್ಪಿದ್ದರು. ಇದರಿಂದ ಕೃಷಿ ಜಮೀನು(Farm Land) ದಾನ ಪಡೆಯಲು/ಖರೀದಿಸಲು ಅನುಮತಿ ನೀಡುವಂತೆ ಕೋರಿ ಭೂ ಸುಧಾರಣಾ ಕಾಯ್ದೆ-1961ರ ಸೆಕ್ಷನ್‌ 109ರ ಅಡಿಯಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಫೌಂಡೇಷನ್‌ ಅರ್ಜಿ ಸಲ್ಲಿಸಿತ್ತು. ಆದರೆ, ಈ ಜಮೀನನ್ನು ಸಂಪರ್ಕಿಸುವ ರಸ್ತೆ ಇಲ್ಲ ಹಾಗೂ ಜಮೀನು ಅರಣ್ಯ(Forest) ಪ್ರದೇಶವಾಗಿದೆ. ಹಾಗಾಗಿ ಅರಣ್ಯ ಜಾಗವನ್ನು ಅರಣ್ಯೇತರ ಚಟುವಟಿಕೆಗಳಿಗೆ ಬಳಸಲು ಕೇಂದ್ರ ಅರಣ್ಯ ಇಲಾಖೆ ಅನುಮತಿ ಪಡೆಯುವಂತೆ ಸೂಚಿಸಿ ಫೌಂಡೇಷನ್‌ನ ಅರ್ಜಿಯನ್ನು ತಿರಸ್ಕರಿಸಿ 2018ರ ಆ.5ರಂದು ಜಿಲ್ಲಾಧಿಕಾರಿ ಆದೇಶಿಸಿದ್ದರು. ಈ ಆದೇಶ ರದ್ದುಪಡಿಸಬೇಕು ಮತ್ತು ಕೃಷಿ ಜಮೀನು ಖರೀದಿಸಲು ತಮಗೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ನಿರ್ದೇಶಿಸುವಂತೆ ಕೋರಿ ಫೌಂಡೇಷನ್‌ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು.

ಫೌಂಡೇಷನ್‌ ಪರ ವಕೀಲ ನಾರಾಯಣ ವಿ.ಯಾಜಿ ವಾದ ಮಂಡಿಸಿ, ಈ ಜಮೀನಿಗೆ ಸಂಪರ್ಕಿಸುವ ರಸ್ತೆ ಇದೆ ಎಂಬುದಾಗಿ ಸ್ಥಳೀಯ ಗ್ರಾಮ ಪಂಚಾಯಿತಿಯೇ ಸ್ಪಷ್ಟಪಡಿಸಿದೆ. ಅರಣ್ಯ ಪ್ರದೇಶದಲ್ಲಿ ಅರಣ್ಯೇತರ ಚಟುವಟಿಕೆ ನಡೆಸುವ ಅಗತ್ಯವಿದ್ದರೆ ಮಾತ್ರ ಕೇಂದ್ರ ಅರಣ್ಯ ಇಲಾಖೆಯಿಂದ(Central Forest Department) ಅನುಮತಿ ಪಡೆಯಬೇಕು. ಆದರೆ, ಪ್ರಕರಣದಲ್ಲಿ ಫೌಂಡೇಷನ್‌ ದಾನವಾಗಿ ಪಡೆಯಲು ಉದ್ದೇಶಿಸಿರುವ ಜಾಗವು ಕೃಷಿ ಜಮೀನಾಗಿದೆ ಹೊರತು ಅರಣ್ಯ ಪ್ರದೇಶವಲ್ಲ ಎಂದು ಸ್ಪಷ್ಟಪಡಿಸಿ ಆ ಕುರಿತ ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಒದಗಿಸಿದ್ದರು.

Karnataka High Court : ಕನ್ನಡ ಕಲಿಕೆಗೆ ಒತ್ತಾಯ ಬೇಡ

ಅಲ್ಲದೆ, ಕರ್ನಾಟಕ ಭೂ ಸುಧಾರಣಾ ಕಾಯ್ದೆ(Karnataka Land Reform Act) ಸೆಕ್ಷನ್‌ 79-ಎ ಮತ್ತು 79-ಬಿ ಅನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ. ಇದರಿಂದ ಪ್ರಕರಣದಲ್ಲಿ ಕೃಷಿ ಜಮೀನು ಖರೀದಿಸಲು ಅಥವಾ ದಾನವಾಡಿ ಪಡೆಯಲು ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯುವ ಅಗತ್ಯವಿಲ್ಲ. ಕೃಷಿ ಜಮೀನನ್ನು ಕೃಷಿ ಕುಟುಂಬದವರಲ್ಲದೆ ಯಾರು ಬೇಕಾದರೂ ಖರೀದಿ ಮಾಡಬಹುದು. ಐದು ವರ್ಷಗಳಿಗೆ ಆದಾಯ ಮೊತ್ತ 25 ಲಕ್ಷಕ್ಕಿಂತ ಹೆಚ್ಚಿದ್ದವರೂ ಕೃಷಿ ಜಮೀನು ಖರೀದಿಸಲು ಅವಕಾಶವಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಅರ್ಜಿ ಇತ್ಯರ್ಥ

ಈ ವಾದ ಪುರಸ್ಕರಿಸಿದ ಹೈಕೋರ್ಟ್‌, ಕೃಷಿ ಕುಟುಂಬದವರು ಮಾತ್ರ ಕೃಷಿ ಜಮೀನು ಖರೀದಿಸಬೇಕು. ಐದು ವರ್ಷಗಳಿಗೆ 25 ಲಕ್ಷಕ್ಕಿಂತ ಕಡಿಮೆ ಕೃಷಿ ಆದಾಯ ಹೊಂದಿರುವವರು ಮಾತ್ರ ಕೃಷಿ ಜಮೀನು ಖರೀದಿಸಬೇಕು ಎಂಬುದನ್ನು ಪ್ರತಿಪಾದಿಸುವ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಸೆಕ್ಷನ್‌ 79-ಎ ಮತ್ತು 79-ಬಿ ಅನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ. ಇದರಿಂದ ಪ್ರಕರಣದಲ್ಲಿ ಕೃಷಿ ಜಮೀನು ಖರೀದಿಸಲು ಅರ್ಜಿದಾರ ಸಂಸ್ಥೆಗೆ ಯಾವುದೇ ನಿರ್ಬಂಧ ಇಲ್ಲ. ಅದಕ್ಕಾಗಿ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯುವ ಅಗತ್ಯವೇನು ಇಲ್ಲ. ಹಾಗಾಗಿ, ಭೂ ಸುಧಾರಣೆ ಕಾಯ್ದೆಯ ಸೆಕ್ಷನ್‌ 109ರ ಅಡಿ ಅರ್ಜಿದಾರ ಸಂಸ್ಥೆ ಸಲ್ಲಿಸಿರುವ ಅರ್ಜಿ ಅನಗತ್ಯವಾಗಿದೆ ಎಂದು ಸ್ಪಷ್ಟಪಡಿಸಿ ಅರ್ಜಿ ಇತ್ಯರ್ಥಪಡಿಸಿತು.
 

click me!