Latest Videos

ವಾಹನ ಪಾರ್ಕಿಂಗ್‌ ಪಾಲಿಸಿ ಜಾರಿಗೆ ಕ್ರಮ ಕೈಗೊಳ್ಳಿ: ಪಾಲಿಕೆಗೆ ಹೈಕೋರ್ಟ್ ಸೂಚನೆ

By Govindaraj SFirst Published May 23, 2024, 12:16 AM IST
Highlights

ಬೆಂಗಳೂರು ಮಹಾನಗರದಲ್ಲಿ ವಾಹನ ನಿಲುಗಡೆ ನೀತಿ 2.0 (ಪಾರ್ಕಿಂಗ್‌ ಪಾಲಿಸಿ) ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಬೆಂಗಳೂರು (ಮೇ.23): ಬೆಂಗಳೂರು ಮಹಾನಗರದಲ್ಲಿ ವಾಹನ ನಿಲುಗಡೆ ನೀತಿ 2.0 (ಪಾರ್ಕಿಂಗ್‌ ಪಾಲಿಸಿ) ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶಿಸಿದೆ. ನಗರದ ವಸತಿ ಪ್ರದೇಶದಲ್ಲಿ ಅಕ್ರಮವಾಗಿ ವಾಹನ ನಿಲುಗಡೆ ವ್ಯವಹಾರ ನಡೆಸುತ್ತಿರುವುದನ್ನು ಆಕ್ಷೇಪಿಸಿ ನಗರದ ಎಚ್‌.ಎಸ್‌.ಆರ್‌. ಬಡಾವಣೆಯ ನಾಗಭೂಷಣರೆಡ್ಡಿ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಪೀಠ ಈ ಆದೇಶ ಮಾಡಿದೆ.

ವಾಹನ ನಿಲುಗಡೆ ನೀತಿ ಅನುಷ್ಠಾನಗೊಳಿಸಲಾಗುವ ವಿಧಾನದ ಬಗ್ಗೆ ವಿಸ್ತೃತವಾದ ಯೋಜನಾ ವರದಿ ಸಿದ್ಧಪಡಿಸಿ ಬರುವ ಜೂ.20ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಬಿಬಿಎಂಪಿ ಆಯುಕ್ತರಿಗೆ ಇದೇ ವೇಳೆ ನ್ಯಾಯಪೀಠ ಸೂಚಿಸಿದೆ. ನಗರದಲ್ಲಿ 2020ರ ಡಿಸೆಂಬರ್‌ನಿಂದ ವಾಹನ ನಿಲುಗಡೆ ನೀತಿ 2.0 ಚಾಲ್ತಿಯಲ್ಲಿ ಇದೆ. ಆ ನೀತಿಯ ಪ್ರಕಾರ ಬಿಬಿಎಂಪಿ ವಾಹನ ನಿಲುಗಡೆ ಪ್ರದೇಶ ಗುರುತಿಸುವಿಕೆ, ವಾಹನ ನಿಲುಗಡೆ ಶುಲ್ಕ, ಬೀದಿ ಬದಿ ವಾಹನ ನಿಲುಗಡೆ ವ್ಯವಸ್ಥೆ ಉತ್ತಮಗೊಳಿಸುವುದು ಸೇರಿದಂತೆ ಇನ್ನಿತರ ಹಲವು ಕ್ರಮ ಕೈಗೊಳ್ಳಬೇಕಿತ್ತು. ಆದರೆ ಆ ಕೆಲಸವನ್ನು ಬಿಬಿಎಂಪಿ ಮಾಡಿಲ್ಲ. 

ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಪೊಲೀಸರ ಅಮಾನತು: ಶಾಸಕ ಬಸನಗೌಡ ಯತ್ನಾಳ

ಬಿಬಿಎಂಪಿ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯದ ನಿಷ್ಕ್ರೀಯತೆಯಿಂದ ನಗರದ ಸಾರ್ವಜನಿಕರು ತೊಂದರೆ ಎದುರಿಸುವಂತಾಗಿದೆ ಎಂದು ಪೀಠ ಆದೇಶದಲ್ಲಿ ಬೇಸರ ವ್ಯಕ್ತಪಡಿಸಿದೆ. ಕಟ್ಟಡ ಬೈಲಾ ಪ್ರಕಾರ ಬೆಂಗಳೂರು ನಗರದಲ್ಲಿ ನಿರ್ಮಾಣವಾಗುವ ಪ್ರತಿಯೊಂದು ವಸತಿ ಸಮುಚ್ಛಯದಲ್ಲೂ ವಾಹನ ನಿಲುಗಡೆಗೆ ಜಾಗ ಒದಗಿಸಬೇಕಾಗುತ್ತದೆ. ವಸತಿ ಪ್ರದೇಶದಲ್ಲಿ ಹಾಗೂ ವಾಣಿಜ್ಯ ಪ್ರದೇಶದಲ್ಲಿ ವಾಹನ ನಿಲುಗಡೆ ಸಮಸ್ಯೆ ಸಾಮಾನ್ಯವಾಗಿದೆ. ಅದೇ ಕಾರಣಕ್ಕೆ ಕೆಲವು ಖಾಲಿಯಿರುವ ನಿವೇಶನದಾರರು ವಾಹನ ನಿಲುಗಡೆಗೆ ಅವಕಾಶ ನೀಡುವ ಮೂಲಕ ಹಣ ಮಾಡುತ್ತಿದ್ದಾರೆ. ಇಂತಹ ಕ್ರಮಗಳಿಗೆ ಬಿಬಿಎಂಪಿ ಕಡಿವಾಣ ಹಾಕಬೇಕು ಎಂದ ನ್ಯಾಯಪೀಠ ಸೂಚಿಸಿದೆ.

ಎಚ್‌.ಎಸ್‌.ಆರ್‌. ಬಡಾವಣೆಯ 19ನೇ ಎ ಮುಖ್ಯರಸ್ತೆಯಲ್ಲಿ ನಾಲ್ಕು ನಿವೇಶನಗಳು ಖಾಲಿಯಿವೆ. ಅವುಗಳನ್ನು ಮಾಲೀಕರು ವಾಹನಗಳ ನಿಲುಗಡೆ ಮಾಡಲು ಗುತ್ತಿಗೆ ನೀಡಿದ್ದಾರೆ. ಇದರಿಂದ ಆ ಪ್ರದೇಶದಲ್ಲಿ ಶಬ್ದ ಹಾಗೂ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಆ ಪ್ರದೇಶದ ವಾಹನಗಳ ಮಾಲೀಕರು ವಾಹನ ನಿಲುಗಡೆಗೂ ಸಮಸ್ಯೆಯಾಗುತ್ತಿದೆ. ಸ್ಥಳೀಯ ನಿವಾಸಿಗಳಿಗೆ ತೊಂದರೆ ಎದುರಾಗುತ್ತಿದೆ. ಅಕ್ರಮ ವಾಹನ ನಿಲುಗಡೆ ಬಗ್ಗೆ ಕ್ರಮ ಕೈಗೊಳ್ಳುವಂತೆ 2023ರ ಜು.27ರಂದು ಸಲ್ಲಿಸಿರುವ ಮನವಿ ಪತ್ರವನ್ನು ಬಿಬಿಎಂಪಿ ಅಧಿಕಾರಿಗಳು ಪರಿಗಣಿಸಿ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ದೂರಿದ್ದರು.

ಮನವಿ ಸಲ್ಲಿಸಿದರೂ ಮಹಾರಾಷ್ಟ್ರ ಸರ್ಕಾರ ನೀರು ಬಿಟ್ಟಿಲ್ಲ: ಸತೀಶ ಜಾರಕಿಹೊಳಿ

ಬಿಬಿಎಂಪಿ ಪರ ವಕೀಲರು, ಅರ್ಜಿದಾರರು ತಿಳಿಸಿರುವಂತೆ ವಸತಿ ಪ್ರದೇಶದ ನಿವೇಶನವನ್ನು ವಾಹನ ನಿಲುಗಡೆಗೆ ಬಳಸಲು ಬಿಬಿಎಂಪಿ ಅನುಮತಿ ನೀಡಿಲ್ಲ. ನಗರ ಭೂ ಸಾರಿಗೆ ನಿರ್ದೇಶನಾಲಯ ವಾಹನ ನಿಲುಗಡೆ ನೀತಿಯ ಅನ್ವಯ ವಾಹನ ನಿಲುಗಡೆ ಪ್ರದೇಶ ಗುರುತಿಸುವುದು ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

click me!