
ವೆಂಕಟೇಶ್ ಕಲಿಪಿ
ಬೆಂಗಳೂರು (ಅ.06): ಮದುವೆ ಬಳಿಕ ದೈಹಿಕ ಸಂಪರ್ಕಕ್ಕೆ ಒಪ್ಪದ, ವರದಕ್ಷಿಣೆ ಕಿರುಕುಳದ ಆರೋಪ ಮಾಡಿ ಹಲವು ಬಾರಿ ಕೇಸ್ ದಾಖಲಿಸಿದ್ದ ಮಹಿಳೆಗೆ ಪತಿಯೊಂದಿಗೆ ಮರು ಜೀವನ ನಡೆಸಲು ಬಯಕೆ. ಪತಿಯಿಂದ ವಿರೋಧ ಬಂದಾಗ ವೈವಾಹಿಕ ಸಂಬಂಧ ಪುನರ್ ಸ್ಥಾಪಿಸಲು ಹೈಕೋರ್ಟ್‌ಗೆ ಮೊರೆ. ಆದರೆ, ಈ ಪ್ರಕರಣವನ್ನು ಪತಿಗೆ ಕಿರುಕುಳ ನೀಡಿದ ಕೇಸ್ ಎಂದು ವ್ಯಾಖ್ಯಾನಿಸಿದ ಹೈಕೋರ್ಟ್, ಮದುವೆ ಅನೂರ್ಜಿತಗೊಳಿಸಿದ ಕೌಟುಂಬಿಕ ನ್ಯಾಯಾಲಯದ ತೀರ್ಪು ಎತ್ತಿಹಿಡಿದು ಆದೇಶ! ವೈವಾಹಿಕ ಸಂಬಂಧ ಮರು ಸ್ಥಾಪಿಸಲು ಮತ್ತು ಪತಿಯ ಅರ್ಜಿ ಪುರಸ್ಕರಿಸಿ ವಿಚ್ಛೇದನಕ್ಕೆ ಮಂಜೂರಾತಿ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದತಿಗೆ ಕೋರಿ ಕೋಲಾರದ ನಿವಾಸಿ ಸುಮಾ ಎಂಬವರು ಸಲ್ಲಿಸಿದ್ದ ಎರಡು ಪ್ರತ್ಯೇಕ ಮೇಲ್ಮನವಿ ವಜಾಗೊಳಿಸಿ ಹೈಕೋರ್ಟ್ ಇಂಥದ್ದೊಂದು ಆದೇಶ ಮಾಡಿದೆ.
ಪೋಷಕರ ಅಥವಾ ಇತರರ ಒತ್ತಡದಿಂದ ರವಿಯನ್ನು (ಹೆಸರು ಬದಲಿಸಲಾಗಿದೆ) ಸುಮಾ ಮದುವೆಯಾಗಿಲ್ಲ. ಪೋಷಕರು ಈ ಮದುವೆ ನಿಶ್ಚಯಿಸಿದ್ದರೂ ಅದಕ್ಕೂ ಮುನ್ನ ರವಿಯೊಂದಿಗೆ ಸಮಾಲೋಚಿಸಿದ್ದರು. ಆತನ ಹಣಕಾಸು ಸ್ಥಿತಿಗತಿಯನ್ನೂ ತಿಳಿದುಕೊಂಡಿದ್ದರು. ಆದರೆ ಮದುವೆಯಾದ ಮೂರೇ ದಿನಕ್ಕೆ ಪತಿ ಮತ್ತವರ ಪೋಷಕರು 10 ಲಕ್ಷ ರು. ಹೆಚ್ಚುವರಿ ವರದಕ್ಷಿಣೆ ತರಲು ಒತ್ತಾಯಿಸಿ ಕಿರುಕುಳ ನೀಡಿದರು ಮತ್ತು ತವರು ಮನೆಗೆ ವಾಪಸ್ ಕಳುಹಿಸಿದ್ದರು ಎನ್ನುವ ಸುಮಾ ಮಾತು ನಂಬಲಾಗದು ಎಂದು ಪೀಠ ಅರ್ಜಿ ವಿಚಾರಣೆ ವೇಳೆ ತಿಳಿಸಿದೆ. ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ದಾಖಲೆಗಳನ್ನು ಪರಿಶೀಲಿಸಿದಾಗ ಮದುವೆ ನಂತರ ದೈಹಿಕ ಸಂಪರ್ಕ ಬೆಳೆಸಲು ಪತಿಗೆ ಸುಮಾ ಅನುಮತಿಸಿಲ್ಲ. ಇದೇ ವಿಚಾರವಾಗಿ ಜಗಳ ಮಾಡಿಕೊಂಡು ಪತಿ-ಪತ್ನಿ ಪೊಲೀಸ್ ಠಾಣೆಗೂ ಹೋಗಿದ್ದರು. ಹಾಗೆಯೇ, ರವಿ ಮತ್ತವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡದೆ ಸುಮಾ ತವರು ಮನೆಗೆ ಹೋಗುತ್ತಿದ್ದರು. ಈ ನಡೆ ನಿಜಕ್ಕೂ ಕ್ರೌರ್ಯ ಎಂದು ಹೈಕೋರ್ಟ್ ಆದೇಶದಲ್ಲಿ ವಿವರಿಸಿದೆ.
ಅಲ್ಲದೆ ಸುಮಾ ದೂರು ಆಧರಿಸಿ ರವಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ, ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿರುವುದಕ್ಕೆ ಸಾಕ್ಷ್ಯವನ್ನೂ ಪತ್ನಿ ತೋರಿಸಿಲ್ಲ. ಪತಿ ಮತ್ತವರ ಕುಟುಂಬ ಸದಸ್ಯರ ಮೇಲೆ ಕ್ರಿಮಿನಲ್ ಆರೋಪ ಹೊರಿಸಿ ಪೊಲೀಸರಿಗೆ ಪದೇ ಪದೆ ದೂರು ದಾಖಲಿಸಿದ ಹೊರತಾಗಿಯೂ ಪತಿಯೊಂದಿಗೆ ಒಂದುಗೂಡಿ ಸಹಜ ವೈವಾಹಿಕ ಜೀವನ ನಡೆಸುವುದಾಗಿ ಸುಮಾ ಹೇಳುತ್ತಿದ್ದಾರೆ. ಈ ನಿರ್ಣಯಕ್ಕೆ ಬರಲು ಯಾವ ಸನ್ನಿವೇಶಗಳು ನೆರವಾದವು ಎಂಬುದನ್ನೇ ಆಕೆ ಕೋರ್ಟ್‌ಗೆ ಸ್ಪಷ್ಟಪಡಿಸಿಲ್ಲ. ಕ್ರೌರ್ಯ ಎಂಬ ಪದಕ್ಕೆ ಯಾವುದೇ ಕಟ್ಟುನಿಟ್ಟು ವ್ಯಾಖ್ಯಾನವಿಲ್ಲ. ಪ್ರತಿ ಪ್ರಕರಣದ ಸನ್ನಿವೇಶ ಆಧರಿಸಿ ಕ್ರೌರ್ಯವನ್ನು ಪರಿಗಣಿಸಬೇಕಿದೆ. ಈ ಪ್ರಕರಣದಲ್ಲಿ ಪತ್ನಿಯ ಕ್ರೌರ್ಯ ಆಧಾರದ ಮೇಲೆ ವಿಚ್ಛೇದನ ಮಂಜೂರು ಮಾಡಿರುವ ಕೌಟುಂಬಿಕ ನ್ಯಾಯಾಲಯ ಆದೇಶ ಸೂಕ್ತವಾಗಿದೆ ಎಂದು ಪೀಠ ತಿಳಿಸಿದೆ.
ಸುಮಾ ಮತ್ತು ರವಿ 2017ರ ಅ.30ರಂದು ವಿವಾಹವಾಗಿದ್ದರು. ಬಳಿಕ ಕೆಲವೇ ತಿಂಗಳಲ್ಲಿ ಪೊಲೀಸರಿಗೆ ದೂರು ನೀಡಿದ್ದ ಸುಮಾ, ಮದುವೆಯಾದ ಕೂಡಲೇ ಹೆಚ್ಚುವರಿಯಾಗಿ 10 ಲಕ್ಷ ರು. ವರದಕ್ಷಿಣೆ ತರುವಂತೆ ಒತ್ತಾಯಿಸಿ ಪತಿ, ಅವರ ಕುಟುಂಬದವರು ಕಿರುಕುಳ ನೀಡುತ್ತಿದ್ದಾರೆ. ವರದಕ್ಷಿಣೆ ತರಲು ನಿರಾಕರಿಸಿದ್ದಕ್ಕೆ ಬಲವಂತವಾಗಿ ತವರು ಮನೆಗೆ ಕಳುಹಿಸಿದ್ದಾರೆ. ಪತಿ ಸದಾ ನನ್ನ ಶೀಲ ಶಂಕಿಸುತ್ತಾರೆ ಎಂದು ಆರೋಪಿಸಿದ್ದರು. ಮತ್ತೊಂದೆಡೆ ತನ್ನನ್ನು ವಾಪಸ್ ಕರೆದುಕೊಳ್ಳಲು ಪತಿ ಮತ್ತು ಆತನ ಪೋಷಕರು ಒಪ್ಪುತ್ತಿಲ್ಲ. ಆದ ಕಾರಣ ಪತಿಯೊಂದಿಗೆ ವೈವಾಹಿಕ ಸಂಬಂಧ ಮರು ಸ್ಥಾಪಿಸುವಂತೆ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ ಪತ್ನಿಯ ಕಿರುಕುಳ ಆಧರಿಸಿ ವಿಚ್ಛೇದನ ಮಂಜೂರು ಮಾಡುವಂತೆ ರವಿ ಅರ್ಜಿ ಸಲ್ಲಿಸಿದ್ದರು. ಅದರಂತೆ ಕೌಟುಂಬಿಕ ನ್ಯಾಯಾಲಯವು ರವಿ ಮತ್ತು ಸುಮಾ ಮದುವೆ ಅನೂರ್ಜಿತಗೊಳಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ