
ಬೆಂಗಳೂರು (ಜೂ.25: ಮೋಟಾರ ವಾಹನ ಕಾಯ್ದೆಯಲ್ಲಿ ಸಾರಿಗೆ ವಾಹನಗಳನ್ನಾಗಿ ದ್ವಿಚಕ್ರ ವಾಹನ ನೋಂದಾಯಿಸಲು ಅವಕಾಶವಿರುವಾಗ ಬೈಕ್ ಟ್ಯಾಕ್ಸಿಯನ್ನು ನೋಂದಾಯಿಸುವುದಿಲ್ಲ ಮತ್ತು ಬೈಕ್ ಟ್ಯಾಕ್ಸಿಗೆ ಕ್ಯಾರಿಯೇಜ್ ಪರವಾನಗಿಗೆ ಅನುಮತಿ ನೀಡುವುದಿಲ್ಲವೆಂದು ರಾಜ್ಯ ಸರ್ಕಾರ ಹೇಳಲಾಗದು ಎಂದು ಬೈಕ್ ಮಾಲೀಕ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದರು.
ಬೈಕ್ ಟ್ಯಾಕ್ಸಿ ನಿಷೇಧಿಸಿ ಹೈಕೋರ್ಟ್ ಏಕಸದಸ್ಯ ಪೀಠ ಮಾಡಿರುವ ಆದೇಶ ಪ್ರಶ್ನಿಸಿ ಓಲಾ, ಉಬರ್ ಮತ್ತು ರ‍್ಯಾಪಿಡೊ ಕಂಪನಿಗಳು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಬೈಕ್ ಮಾಲೀಕರಾದ ವಿ.ಮಹೇಂದ್ರ ರೆಡ್ಡಿ ಮತ್ತು ಮಧು ಕಿರಣ್ ಪ್ರತಿನಿಧಿಸಿದ್ದ ವಕೀಲರು ವಾದಿಸಿ, ಬೈಕ್ ಟ್ಯಾಕ್ಸಿ ಸೇವೆ ನೀಡಲು ದ್ವಿಚಕ್ರ ವಾಹನ ಮಾಲೀಕರನ್ನು ಸೇರ್ಪಡೆ ಮಾಡಲು ನಿಯಮದಲ್ಲಿ ಅವಕಾಶವಿದೆ. ಕಳೆದ ಹತ್ತು ದಿನಗಳಿಂದ ಬೈಕ್ ಟ್ಯಾಕ್ಸಿ ಸೇವೆಯನ್ನು ಅಗ್ರಿಗೇಟರ್‌ಗಳು ನಿಲ್ಲಿಸಿದ್ದಾರೆ. ಇದು ಪ್ರಯಾಣಿಕರಿಗೆ ವಿನಾಶಕಾರಿ ಎಂದು ಮಾಧ್ಯಮ ವರದಿಗಳು ಹೇಳಿವೆ. ಸರ್ಕಾರ ಅನುಮತಿ ನೀಡಬೇಕಿಲ್ಲ. ಶಾಸನದಲ್ಲಿ ನೀಡಲಾಗಿರುವ ಅವಕಾಶದಂತೆ ನೋಂದಣಿ ಮಾಡಿದರೆ ಸಾಕು ಎಂದರು.
ರಾಜ್ಯ ಸರ್ಕಾರ ನೇಮಕ ಮಾಡಿದ್ದ ಸಮಿತಿಯು ಬೆಂಗಳೂರಿಗೆ ಬೈಕ್ ಟ್ಯಾಕ್ಸಿ ಅಗತ್ಯವಿಲ್ಲ ಎಂದಿದೆ. ಆದರೆ, ಒಂದು ಲಕ್ಷಕ್ಕೂ ಅಧಿಕ ಬೈಕ್ ಟ್ಯಾಕ್ಸಿಗಳು ಸೇವೆ ನೀಡುತ್ತಿದ್ದು, ಜನರು ಅವುಗಳನ್ನು ಬಳಕೆ ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಅತ್ಯಂತ ಕಡಿಮೆ ದರದಲ್ಲಿ ವೇಗದೂತ ಸಾರಿಗೆ ಬೇಕಿದೆ. ಬೈಕ್ ಟ್ಯಾಕ್ಸಿ ಸಾರಿಗೆ ಕ್ಯಾರೇಜ್‌ಗೆ ಕಾನೂನಿನಲ್ಲಿ ಯಾವುದೇ ನಿರ್ಬಂಧವಿಲ್ಲ. ದೇಶದ 11 ರಾಜ್ಯಗಳಲ್ಲಿ ಅಲ್ಲಿನ ಕಾನೂನಿಗೆ ಅನುಗುಣವಾಗಿ ಬೈಕ್ ಟ್ಯಾಕ್ಸಿ ಸೇವೆಯಿದೆ. ಕಾನೂನಿನಲ್ಲಿ ಅವಕಾಶವಿರುವಾಗ ಸರ್ಕಾರ ಅದನ್ನು ನಿರ್ಬಂಧಿಸಲಾಗದು ಎಂದು ಪೀಠಕ್ಕೆ ವಿವರಿಸಿದರು.
ಈ ವಾದ ಆಲಿಸಿದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ