Raju Kage Threatens Resignation: ಕೆಪಿಸಿಸಿ ಅಧ್ಯಕ್ಷರು ನಮ್ಮ ಕಡೆ ತಿರುಗಿಯೂ ನೋಡಲ್ಲ, ನಾವು ಯಾವ ಪುರುಷಾರ್ಥಕ್ಕೆ ಕಾಂಗ್ರೆಸ್‌ನಲ್ಲಿಬೇಕು?: ರಾಜು ಕಾಗೆ

Kannadaprabha News   | Kannada Prabha
Published : Jun 25, 2025, 05:20 AM ISTUpdated : Jun 25, 2025, 12:03 PM IST
Congress MLA Raju Kage

ಸಾರಾಂಶ

ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸದ ಸಚಿವರು ಮತ್ತು ಮುಖ್ಯಮಂತ್ರಿಗಳ ವಿರುದ್ಧ ಕಾಗವಾಡ ಶಾಸಕ ರಾಜು ಕಾಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳಿಂದಲೂ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು (ಜೂ.25): ‘ಆಡಳಿತ ಪಕ್ಷದ ಶಾಸಕನಾಗಿದ್ದರೂ ನಮ್ಮ ಸಚಿವರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ, ಕೆಪಿಸಿಸಿ ಅಧ್ಯಕ್ಷರು ನಮ್ಮನ್ನು ನೋಡುವುದೇ ಇಲ್ಲ. ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಹಿಂದಿನಂತಿಲ್ಲ. ಹೀಗಿರುವಾಗ ಆಡಳಿತ ಪಕ್ಷದಲ್ಲಿ ಯಾವ ಪುರುಷಾರ್ಥಕ್ಕಾಗಿ ನಾವು ಇರಬೇಕು’ ಎಂದು ಕಾಗವಾಡ ಕ್ಷೇತ್ರದ ಕಾಂಗ್ರೆಸ್‌ ಶಾಸಕ ರಾಜು ಕಾಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಆಡಳಿತ ಪಕ್ಷದ ಶಾಸಕನಾಗಿದ್ದರೂ ಸಚಿವರು ನಮಗೆ ಸಿಗುವುದೇ ಇಲ್ಲ. ಈ ಬಗ್ಗೆ ಹಿಂದೆಯೂ ಶಾಸಕಾಂಗ ಪಕ್ಷದ ಸಭೆಯಲ್ಲಿ ತಿಳಿಸಿದ್ದೆ. ಅದಾದ ನಂತರವೂ ಶಾಸಕರನ್ನು ಕರೆದು ಮಾತನಾಡುವ ಸೌಜನ್ಯ ಸಚಿವರಿಗಿಲ್ಲ. ಸಚಿವರು ಯಾವಾಗ ಸಿಗುತ್ತಾರೆ ಎಂಬುದನ್ನು ಅವರೇ ಘೋಷಣೆ ಮಾಡಿಕೊಳ್ಳಲಿ. ಒಂದು ಸಮಯ ನಿಗದಿ ಮಾಡಲಿ. ಆಗ ನಾವು ಬಂದು ಅವರನ್ನು ಭೇಟಿ ಮಾಡುತ್ತೇವೆ. ಇಲ್ಲದಿದ್ದರೆ ಅವರನ್ನು ಎಲ್ಲಿ ಹುಡುಕಬೇಕು?. ನಮ್ಮ ಸಮಸ್ಯೆಗಳಿಗೂ ಅವರು ಸ್ಪಂದಿಸುತ್ತಿಲ್ಲ’ ಎಂದರು.

ಈ ಹಿಂದೆಯೂ ಮುಖ್ಯಮಂತ್ರಿ ಅವರ ಬಳಿ ಈ ಬಗ್ಗೆ ಹೇಳಿದ್ದೆ. ಆದರೂ, ಅದು ಸರಿ ಹೋಗಿಲ್ಲ. ಪ್ರತಿದಿನವೂ ಇದನ್ನೇ ಹೇಳುತ್ತಾ ಇರಬೇಕಾಗಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು ನಮ್ಮ ಸಮಸ್ಯೆ ಕೇಳುತ್ತಿಲ್ಲ. ಹಿರಿಯ ಶಾಸಕರಿಗೆ ಹೀಗಾದರೆ ಹೊಸ ಶಾಸಕರ ಪರಿಸ್ಥಿತಿ ಏನಾಗಬೇಡ? ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಬಿಜೆಪಿಯಿಂದ ಶಾಸಕನಾಗಿದ್ದೆ. ಆಗಲೇ ನನ್ನ ಕ್ಷೇತ್ರದ ಕೆಲಸ ಮಾಡಿಕೊಡುತ್ತಿದ್ದರು. ಈಗ ಆಡಳಿತ ಪಕ್ಷದ ಶಾಸಕನಾಗಿದ್ದರೂ ಕೆಲಸ ಮಾಡಿಕೊಡುತ್ತಿಲ್ಲ. ಸಿದ್ದರಾಮಯ್ಯ ಅವರೂ ಬದಲಾಗಿದ್ದಾರೆ. ಹಾಗೆಯೇ, ಕೆಪಿಸಿಸಿ ಅಧ್ಯಕ್ಷರು ಮನೆಗೆ ಹೋದರೂ ನಮ್ಮ ಕಡೆ ನಡೆಯುವುದಿಲ್ಲ. ಈ ವ್ಯವಸ್ಥೆಯಲ್ಲಿ ಯಾವ ಪುರುಷಾರ್ಥಕ್ಕಾಗಿ ನಾವು ಆಡಳಿತ ಪಕ್ಷದಲ್ಲಿರಬೇಕು ಎಂದು ಪ್ರಶ್ನಿಸಿದರು.

‘ಸಚಿವರ ವರ್ತನೆ ಬಗ್ಗೆ ನಾನು ಬೇಸರ, ನೋವಿನಿಂದ ಮಾತನಾಡಿದ್ದೇನೆ. ನಮ್ಮ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಒಂದೂವರೆ ವರ್ಷದ ಹಿಂದೆ ಚಾಲನೆ ನೀಡಿದ್ದರೂ ಈವರೆಗೆ ಕೆಲಸವಾಗಿಲ್ಲ. ಅಧಿಕಾರಿಗಳಲ್ಲಿ ಆ ಬಗ್ಗೆ ಕೇಳಿದರೆ ಗುತ್ತಿಗೆದಾರರ ಮೇಲೆ ಹಾಕುತ್ತಾರೆ. ಗುತ್ತಿಗೆದಾರರು ಬಿಲ್‌ ಪಾವತಿಸದೆ ಕೆಲಸ ಮಾಡುವುದಿಲ್ಲ. ಆಡಳಿತ ಪಕ್ಷದ ಶಾಸಕರ ಕ್ಷೇತ್ರದಲ್ಲೇ ಹೀಗಾದರೆ ಹೇಗೆ? ನಾವೆಲ್ಲರೂ ಮತದಾರರ ಅಧೀನದಲ್ಲಿದ್ದೇವೆ. ಅವರಿಗೆ ಉತ್ತರಿಸಬೇಕಲ್ಲ. ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಳ್ಳಲು 200 ಕೋಟಿ ರು. ಅವಶ್ಯಕತೆಯಿದೆ. ಈ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿದರು.

‘ಕ್ಷೇತ್ರದ ಕೆಲಸವಾಗುತ್ತಿಲ್ಲ ಎಂದು ನೊಂದು ರಾಜೀನಾಮೆ ಬಗ್ಗೆ ಹೇಳಿದ್ದೆ. ಆದರೆ, ಕ್ಷೇತ್ರದ ಜನ ರಾಜೀನಾಮೆ ನೀಡಬೇಡಿ, 10 ಸಾವಿರ ಜನರೊಂದಿಗೆ ವಿಧಾನಸೌಧದ ಎದುರು ಧರಣಿ ನಡೆಸೋಣ ಎಂದು ಹೇಳಿದ್ದಾರೆ. ಆದರೆ, ನಾನೇ ಸಮರ್ಥನಿದ್ದೇನೆ, ಸಮಸ್ಯೆ ಬಗೆಹರಿಸುತ್ತೇನೆ ಎಂದು ಸಮಾಧಾನ ಮಾಡಿದ್ದೇನೆ‘ ಎಂದರು.

ಅಧಿಕಾರಿಗಳೇ ಮುಖ್ಯವಾಗಿದ್ದಾರೆ:

‘ಸರ್ಕಾರದ ಕುರಿತು ಬಹಿರಂಗವಾಗಿ ಮಾತನಾಡಬೇಡಿ ಎಂದು ಹಲವರು ಹೇಳುತ್ತಿದ್ದಾರೆ. ಆದರೆ, ನನಗೆ ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದರ್‌ ಕಟಾರಿಯಾ ಅವಮಾನ ಮಾಡಿದ್ದರು. ಆ ಬಗ್ಗೆ ವಿಧಾನಸಭೆಯಲ್ಲೂ ಪ್ರಸ್ತಾಪಿಸಿ ಹಕ್ಕುಚ್ಯುತಿ ತಂದಿದ್ದೆ. ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆಯೂ ಆಗ್ರಹಿಸಿ, 60 ಮಂದಿ ಶಾಸಕರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದೆವು. ಆದರೂ, ಈವರೆಗೆ ಕ್ರಮವಾಗಿಲ್ಲ. ಹೀಗಿರುವಾಗ ಮುಖ್ಯಮಂತ್ರಿ ಅವರಿಗೆ ಅಧಿಕಾರಿ ಮುಖ್ಯವೇ? ಶಾಸಕರು ಮುಖ್ಯವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಮಗೆ ಮಾನ, ಮರ್ಯಾದೆ ಇಲ್ಲವೇ?’ ಎಂದು ರಾಜು ಕಾಗೆ ಆಕ್ರೋಶ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!