* ಸರ್ಕಾರಿ ಆಸ್ಪತ್ರೆಯಲ್ಲಿ 18+ಗೆ ಇಲ್ಲ, ಖಾಸಗಿಯಲ್ಲಿ ನೀಡಿಕೆ
* ಇದು ಸಮಾನತೆ ಹಕ್ಕು ಉಲ್ಲಂಘನೆ: ಹೈಕೋರ್ಟ್ ಕಿಡಿ
* ರಾಜ್ಯದಲ್ಲಿ ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಕೊರತೆಯಾಗದಂತೆ ಕ್ರಮ
ಬೆಂಗಳೂರು(ಮೇ.28): ಕೊರೋನಾ ಸೋಂಕು ತಡೆಯಲು 18ರಿಂದ 44 ವರ್ಷದೊಳಗಿನ ಹಾಗೂ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಲಭ್ಯವಾಗುವಂತೆ 1 ವಾರದಲ್ಲಿ ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಅಲ್ಲದೆ, 18 ರಿಂದ 44 ವರ್ಷದ ಒಳಗಿನವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮೊದಲ ಡೋಸ್ ಲಸಿಕೆ ನೀಡುತ್ತಿಲ್ಲ. ಕೋವ್ಯಾಕ್ಸಿನ್ ಲಸಿಕೆಯೂ ಇಲ್ಲ. ಎರಡನೇ ಡೋಸ್‌ಗೂ ಕಾಯಬೇಕಾದ ಸ್ಥಿತಿ ಇದೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ 18-44 ವರ್ಷದವರಿಗೂ ಲಸಿಕೆ ನೀಡಲಾಗುತ್ತಿದೆ. ಇದರಲ್ಲಿ ಸಮಾನತೆಯ ಹಕ್ಕು ಉಲ್ಲಂಘನೆಯಾದಂತಿದೆ. ಹೀಗಾಗಿ ಸಮಾನತೆಯ ಹಕ್ಕಿನ ವ್ಯಾಪ್ತಿಯಲ್ಲಿ ಇದನ್ನು ಪರಿಶೀಲಿಸಿ ಎಂದು ಸರ್ಕಾರಕ್ಕೆ ಸೂಚನೆ ನೀಡಿದೆ. ಕೊರೋನಾ ನಿಯಂತ್ರಣ ಸಂಬಂಧ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಆರ್ಜಿಗಳ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎ.ಎಸ್. ಓಕ ಅವರಿದ್ದ ವಿಭಾಗೀಯ ಪೀಠವು ಈ ನಿರ್ದೇಶನ ನೀಡಿದೆ.
ಸರ್ಕಾರಕ್ಕೆ ಕಟು ಪ್ರಶ್ನೆ:
45 ವರ್ಷ ದಾಟಿದವರಿಗೂ ಲಸಿಕೆ ಕೊರತೆಯಿದೆ. ಸರ್ಕಾರ 18-44 ವರ್ಷದ ಮುಂಚೂಣಿ ಕಾರ್ಯಕರ್ತರಿಗೆ ಮಾತ್ರ ಮೊದಲ ಡೋಸ್ ಲಸಿಕೆ ನೀಡುತ್ತಿದೆ. ಅದೇ ವಯೋಮಾನದ ಉಳಿದ ಜನರಿಗೆ ಮೊದಲ ಡೋಸ್ ಲಸಿಕೆಯನ್ನು ಯಾವ ರೀತಿಯಲ್ಲಿ ಒದಗಿಸುತ್ತೀರಿ ಎಂದು ನ್ಯಾಯಪೀಠ ಪ್ರಶ್ನಿಸಿತು.
ಆಕ್ಸಿಜನ್ ಸಮಸ್ಯೆ ಇದ್ರೆ ಕೇಂದ್ರದ ಗಮನಕ್ಕೆ ತನ್ನಿ: ಹೈಕೋರ್ಟ್
ಕೇಂದ್ರ ಸರ್ಕಾರದ ಪರ ವಾದಿಸಿದ ಸಹಾಯಕ ಸಾಲಿಸೇಟರ್ ಜನರಲ್ ಐಶ್ವರ್ಯ ಭಾಟಿ, ಒಟ್ಟು ಉತ್ಪಾದನೆಯಲ್ಲಿ ಕೇಂದ್ರ ಸರ್ಕಾರ ಶೇ.50ರಷ್ಟುಖರೀದಿಸಿ ರಾಜ್ಯಗಳಿಗೆ ಹಂಚಿಕೆ ಮಾಡುತ್ತಿದೆ. ಉಳಿದ ಶೇ.50 ಲಸಿಕೆಯನ್ನು ರಾಜ್ಯ ಸರ್ಕಾರಗಳು ಶೇ.25 ಮತ್ತು ಖಾಸಗಿ ಆಸ್ಪತ್ರೆಗಳಿಗೆ ಶೇ.25 ರಷ್ಟುಲಸಿಕೆ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಯಾವುದಾದರೂ ರಾಜ್ಯದಲ್ಲಿ ಖಾಸಗಿಯವರು ತಮ್ಮ ಕೋಟಾದ ಹಂಚಿಕೆ ಪಡೆದುಕೊಳ್ಳದಿದ್ದರೆ ಅದನ್ನು ಇತರೆ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಹಾಗಾಗಿ ಕರ್ನಾಟಕದಲ್ಲಿ ಖಾಸಗಿಯವರಿಗೆ ಶೇ.25ಕ್ಕಿಂತ ಸ್ವಲ್ಪ ಹೆಚ್ಚು ಪ್ರಮಾಣದ ಲಸಿಕೆ ದೊರೆಯುವ ಸಾಧ್ಯತೆಯಿದೆ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಕೇಂದ್ರ ಸರ್ಕಾರದ ಕ್ರಮದಿಂದ ಮುಂದಿನ ದಿನಗಳಲ್ಲಿ ಖಾಸಗಿಯವರಿಗೆ ಇನ್ನೂ ಹೆಚ್ಚಿನ ಲಸಿಕೆ ಲಭಿಸುವ ಸಾಧ್ಯತೆ ಇದೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾಗಳು ಆ ನಿಟ್ಟಿನಲ್ಲಿ ಗಮನಹರಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿತು.
ರಾಜ್ಯ ಅಡ್ವೋಕೇಟ್ ಜನರಲ್ ಪ್ರಭುಲಿಂಗ್ ನಾವದಗಿ, ರಾಜ್ಯದಲ್ಲಿ ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ವಿಶೇಷ ಚೇತನರ ಜೊತೆಗೆ ಇತರೆ ಆದ್ಯತಾ ಗುಂಪಿಗೂ ಲಸಿಕೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ವಾದ ಆಲಿಸಿ ನ್ಯಾಯಪೀಠ ಲಸಿಕೆ ನೀಡುವುದಕ್ಕೆ ಪ್ರಕ್ರಿಯೆಯಲ್ಲಿ ಎಲ್ಲರಿಗೂ ಅವಕಾಶ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಸೂಕ್ತ ಕ್ರಿಯಾ ಯೋಜನೆ ಸಿದ್ಧಪಡಿಸಿ ಮುಂದಿನ ಒಂದು ವಾರದಲ್ಲಿ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona