
ಬೆಂಗಳೂರು(ಆ.12): ಹದಿನಾಲ್ಕು ವರ್ಷಗಳ ಹಿಂದೆ ಕೊಲೆ ಮಾಡಿದ್ದಾಗ ಅಪ್ರಾಪ್ತನಾಗಿದ್ದ ಆರೋಪಿಯನ್ನು ವಯಸ್ಕನೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಕೂಡಲೇ ಆತನನ್ನು ಬಿಡುಗಡೆಗೊಳಿಸಲು ಆದೇಶಿಸಿದೆ.
ಸಹೋದರಿಯ ಪತಿಯನ್ನು ಕೊಲೆ ಮಾಡಿದ ಆರೋಪದಲ್ಲಿ ತನಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಯಾದಗಿರಿಯ ಚನ್ನಪ್ಪ ಎಂಬಾತ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನೀತ್ ದತ್ತ ಯಾದವ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ಅಪ್ರಾಪ್ತನನ್ನು ವಯಸ್ಕ ಎಂಬುದಾಗಿ ತಪ್ಪಾಗಿ ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿರುವ ಸೆಷನ್ಸ್ ನ್ಯಾಯಾಲಯ ಕ್ರಮ ಕಾನೂನು ಬಾಹಿರವಾಗಿದ್ದು, ಅದನ್ನು ರದ್ದುಪಡಿಸಲಾಗುತ್ತಿದೆ. ನಿಯಮ ಪ್ರಕಾರ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾದ ಅಪ್ರಾಪ್ತನ ವಿರುದ್ಧ ಬಾಲ ನ್ಯಾಯಮಂಡಳಿ ವಿಚಾರಣೆ ನಡೆಸಬೇಕಾಗುತ್ತದೆ. ಚನ್ನಪ್ಪ ಕೊಲೆ ಅಪರಾಧದಡಿ ಈಗಾಗಲೇ 13 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾನೆ. ಆದ್ದರಿಂದ ಬಾಲ ನ್ಯಾಯಮಂಡಳಿಯು ಪ್ರಕರಣದ ಕುರಿತು ಹೊಸದಾಗಿ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ತಿಳಿಸಿರುವ ನ್ಯಾಯಪೀಠ, ಚನ್ನಪ್ಪಗೆ 50 ಸಾವಿರ ರು. ಪರಿಹಾರ ನೀಡುವಂತೆ ಬಾಲ ನ್ಯಾಯ ಮಂಡಳಿಗೆ ನಿರ್ದೇಶಿಸಿದೆ.
ಅಲ್ಲದೆ, ಕ್ರಿಮಿನಲ್ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಿದ ಕೂಡಲೇ ಅವರು ಅಪ್ರಾಪ್ತರೇ ಎಂಬುದನ್ನು ಪೊಲೀಸ್ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಆರೋಪಿಯ ವಯಸ್ಸಿನ ಕುರಿತು ಯಾವುದೇ ಸಂಶಯ ಮೂಡಿದರೂ ಪೊಲೀಸರು ಮತ್ತು ಮ್ಯಾಜಿಸ್ಟ್ರೇಟ್ ಪರಿಶೀಲನೆ ನಡೆಸಬೇಕು. ವಯಸ್ಕ ಎಂಬುದು ಖಚಿತವಾದ ನಂತರವೇ ಆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಬೇಕು. ಅಪ್ರಾಪ್ತ ಎಂಬುದಾಗಿ ತಿಳಿದು ಬಂದರೆ, ಪ್ರಕರಣವನ್ನು ಬಾಲ ನ್ಯಾಯ ಮಂಡಳಿಗೆ ವರ್ಗಾಯಿಸಬೇಕು ಎಂದು ಪೀಠ ನಿರ್ದೇಶಿಸಿದೆ.
ಏನಿದು ಪ್ರಕರಣ? {Background of the case:}
ತನ್ನ ಪೋಷಕರ ವಿರೋಧಿಸಿದ್ದರೂ ಸಹೋದರಿಯನ್ನು ಮದುವೆಯಾದ ಕಾರಣಕ್ಕೆ 2011ರ ಏಪ್ರಿಲ್‌ನಲ್ಲಿ ಯಾದಗಿರಿ ಜಿಲ್ಲೆ ಹಳಿಸಗರದಲ್ಲಿ ಭೀಮರಾಯ ಎಂಬಾತನನ್ನು ಚನ್ನಪ್ಪ ಕೊಲೆ ಮಾಡಿದ್ದರು. ಪ್ರಕರಣ ವಿಚಾರಣಾ ಹಂತದಲ್ಲಿಯೇ ಸಹ ಆರೋಪಿ ಸಾಯಿಬಣ್ಣ ಮೃತಪಟ್ಟಿದ್ದ. ಕೊಲೆ ಮಾಡಿದ ಚನ್ನಪ್ಪ ಅಪ್ರಾಪ್ತನಾಗಿದ್ದರೂ ವಯಸ್ಕನೆಂದು ಪರಿಗಣಿಸಿ ಆತನಿಗೆ ಯಾದಗಿರಿಯ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 2 ಸಾವಿರ ರು. ದಂಡ ವಿಧಿಸಿ 2018ರಲ್ಲಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಚನ್ನಪ್ಪ, ಘಟನೆ ನಡೆದ ಸಂದರ್ಭದಲ್ಲಿ ತನಗೆ 16 ವರ್ಷವಾಗಿತ್ತು. ತಾನು ಬಾಲಾಪರಾಧಿಯಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಪಡಿಸಬೇಕು ಎಂದು ಕೋರಿದ್ದನು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ