
ವೆಂಕಟೇಶ್ ಕಲಿಪಿ, ಕನ್ನಡಪ್ರಭ ವಾರ್ತೆ
ಬೆಂಗಳೂರು (ಜ.26): ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗೆ ಕೇವಲ ಏಳು ವರ್ಷ ಶಿಕ್ಷೆ ವಿಧಿಸಿದ ಅಧೀನ (ವಿಚಾರಣಾ) ನ್ಯಾಯಾಲಯದ ಆದೇಶದ ವಿರುದ್ಧ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಲು ಬರೋಬ್ಬರಿ 535 ದಿನ ವಿಳಂಬ ಮಾಡಿದ್ದಕ್ಕೆ ರಾಜ್ಯ ಸರ್ಕಾರಕ್ಕೆ ₹1 ಲಕ್ಷ ದಂಡ ವಿಧಿಸುವ ಮೂಲಕ ಹೈಕೋರ್ಟ್ ಚಾಟಿ ಬೀಸಿದೆ.
ಚಿಕ್ಕಮಗಳೂರಿನ ತರೀಕೆರೆ ತಾಲೂಕಿನಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತೆಯನ್ನು ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಮದುವೆಯಾಗಿ ಎರಡು ಮಕ್ಕಳಿರುವ ಸುರೇಶ್‌ಗೆ ಏಳು ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿ ಚಿಕ್ಕಮಗಳೂರು ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ಎಫ್‌ಟಿಎಸ್‌ಸಿ-1) ನ್ಯಾಯಾಲಯ 2023ರ ನ.3ರಂದು ಆದೇಶಿಸಿತ್ತು. ಸುರೇಶ್‌ಗೆ ವಿಧಿಸಿರುವ ಶಿಕ್ಷೆ ಹೆಚ್ಚಿಸಲು ಕೋರಿ ರಾಜ್ಯ ಸರ್ಕಾರ (ಚಿಕ್ಕಮಗಳೂರಿನ ಲಿಂಗದಹಳ್ಳಿ ಠಾಣಾ ಪೊಲೀಸರು) 2025ರ ಜು.21ರಂದು ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದೆ. ಅಂದರೆ ಮೇಲ್ಮನವಿ ಸಲ್ಲಿಸುವಲ್ಲಿ 535 ದಿನಗಳ ಕಾಲ ವಿಳಂಬವಾಗಿದೆ.
ಮೇಲ್ಮನವಿ ಸಲ್ಲಿಸಲು ವಿಚಾರಣಾ ನ್ಯಾಯಾಲಯದಲ್ಲಿ ಸರ್ಕಾರದ ಪರ ವಾದಿಸಿದ್ದ ಸರ್ಕಾರಿ ಅಭಿಯೋಜಕರು ಸಕಾಲಕ್ಕೆ ಅಭಿಪ್ರಾಯ ನೀಡದಿರುವುದು, ಗೃಹ ಇಲಾಖೆ ಮತ್ತು ರಾಜ್ಯ ಅಡ್ವೋಕೇಟ್ ಜನರಲ್ (ಎಜಿ) ಕಚೇರಿಯಿಂದ ಅನುಮೋದನೆ ಸಿಗದಿರುವುದು ಈ ವಿಳಂಬಕ್ಕೆ ಕಾರಣ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರ ನೇತೃತ್ವದ ವಿಭಾಗೀಯ ಪೀಠ, ಸರ್ಕಾರದ ಬೇಜವಾಬ್ದಾರಿಯನ್ನು ಖಂಡಿಸಿ ಒಂದು ಲಕ್ಷ ರು. ದಂಡ ವಿಧಿಸಿ ಆದೇಶಿಸಿದೆ.
ಪೋಕ್ಸೋ ಕಾಯ್ದೆಯ ಸೆಕ್ಷನ್ 4ಕ್ಕೆ ತಂದಿರುವ ತಿದ್ದುಪಡಿ ನಿಯಮ 2019ರ ಆ.16ರಿಂದ ಜಾರಿಗೆ ಬಂದಿದೆ. ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿರುವುದು ಸಾಬೀತಾದರೆ, ಅಪರಾಧಿಗೆ ಪೋಕ್ಸೋ ಸೆಕ್ಷನ್ 4 (1) ಅನ್ವಯ ಕನಿಷ್ಠ 10 ವರ್ಷಕ್ಕೂ ಕಡಿಮೆಯಿಲ್ಲದೆ ಅಥವಾ ಗರಿಷ್ಠ ಜೀವಾವಧಿ ಜೈಲುಶಿಕ್ಷೆ ವಿಧಿಸಬಹುದು. ಸೆಕ್ಷನ್ 4(2) ಅಡಿ 20 ವರ್ಷ ಜೈಲು ಶಿಕ್ಷೆ ವಿಧಿಸಬಹುದು. ಪ್ರಕರಣದಲ್ಲಿ ಆರೋಪಿಗೆ ವಿಚಾರಣಾ ನ್ಯಾಯಾಲಯ ಕೇವಲ 7 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ. 2022ರ ಡಿ.16ರಂದು ಘಟನೆ ಸಂಭವಿಸಿದೆ. ಇದರಿಂದ ಸೆಕ್ಷನ್ 4ರ ತಿದ್ದುಪಡಿ ನಿಯಮ ಪ್ರಕರಣಕ್ಕೆ ಅನ್ವಯಿಸುತ್ತದೆ. ಹಾಗಾಗಿ, ಕಡಿಮೆ ಶಿಕ್ಷೆ ವಿಧಿಸಿರುವ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ 60 ರಿಂದ 90 ದಿನಗಳಲ್ಲಿ (ಆದೇಶ ಹೊರಬಿದ್ದ ದಿನದ ನಂತರ) ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕಿತ್ತು.
ಮೇಲ್ಮನವಿ ಸಲ್ಲಿಸಲು ಆಗಿರುವ ವಿಳಂಬಕ್ಕೆ ಸರ್ಕಾರಿ ಅಭಿಯೋಜಕರು ಮಾತ್ರವಲ್ಲದೆ, ರಾಜ್ಯ ಗೃಹ ಇಲಾಖೆ ಮತ್ತು ಅಡ್ವೋಕೆಟ್ ಜನರಲ್ ಕಚೇರಿ ಸಹ ಕಾರಣವಾಗಿದೆ. ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಆರೋಪಿ 2023ರ ಡಿ.2ರಂದು ಮೇಲ್ಮನವಿ ಸಲ್ಲಿಸಿದ್ದಾರೆ. ಆದರೆ, ಆರೋಪಿಗೆ ವಿಧಿಸಿರುವ ಶಿಕ್ಷೆ ಕಡಿಮೆಯಿದ್ದರೂ ಸರ್ಕಾರ ಮೇಲ್ಮನವಿ ಸಲ್ಲಿಸಿರಲಿಲ್ಲ. ಈ ವಿಚಾರವನ್ನು 2024ರ ಜು.2ರಂದು ಹೈಕೋರ್ಟ್ ಗಮನಿಸಿ, ವಿವರಣೆ ಕೇಳಿದ ನಂತರವೇ ಸಂಬಂಧಪಟ್ಟ ಸರ್ಕಾರಿ ಪ್ರಾಧಿಕಾರಗಳು ಎಚ್ಚೆತ್ತುಕೊಂಡಿವೆ. ಸರ್ಕಾರದ ವಿಳಂಬ ಮನ್ನಿಸದೇ ಹೋದರೆ, ಪ್ರಕರಣದ ಸಂತ್ರಸ್ತೆ ಮೇಲೆ ಪರಿಣಾಮ ಉಂಟಾಗಲಿದೆ. ಹಾಗಾಗಿ, ಸರ್ಕಾರದ ವಿಳಂಬ ಮನ್ನಿಸಿ, ಅದರ ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ನುಡಿದಿದೆ.
ಮೇಲ್ಮನವಿ ಸಲ್ಲಿಸಲು ದಾಖಲೆ ಸಂಗ್ರಹಿಸಲು ಸರ್ಕಾರಿ ಅಭಿಯೋಜಕರಿಗೆ ಅಗತ್ಯ ನೆರವು ಸಿಗದಿರುವುದು, ಕಾಲ ಕಾಲಕ್ಕೆ ಸರ್ಕಾರಿ ಅಭಿಯೋಜಕರು ನೇಮಕವಾಗದಿರುವುದು, ಹಂಗಾಮಿ ಅಭಿಯೋಜಕರ ಮೇಲೆ ಹೆಚ್ಚಿನ ಕಾರ್ಯದೊತ್ತಡ ಇರುವುದು ಮೇಲ್ಮನವಿ ಸಲ್ಲಿಕೆಯಲ್ಲಿ ವಿಳಂಬ ಉಂಟಾಗಲು ಕಾರಣ. ಕ್ಲರ್ಕ್‌ಗಳ ಕೊರತೆ ಸೇರಿ ಅಭಿಯೋಜನೆ ಇಲಾಖೆಯಲ್ಲಿ ದಯನೀಯ ಪರಿಸ್ಥಿತಿ ನೆಲೆಸಿದೆ ಎಂದು ಪೀಠ ಆದೇಶದಲ್ಲಿ ಬೇಸರ ವ್ಯಕ್ತಪಡಿಸಿದೆ.
ದಂಡ ಮೊತ್ತವನ್ನು ಸರ್ಕಾರ, ಸಂಬಂಧಪಟ್ಟ ಸರ್ಕಾರಿ ಅಭಿಯೋಜಕರು, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಎಜಿ ಕಚೇರಿಯಿಂದ ವಸೂಲಿ ಮಾಡಬೇಕು. ಸರ್ಕಾರ ದಂಡ ಮೊತ್ತವನ್ನು ಒಂದು ವಾರದಲ್ಲಿ ಪಾವತಿ ಮಾಡಬೇಕು. ತಪ್ಪಿದರೆ ಸರ್ಕಾರದಿಂದ ದಂಡ ಮೊತ್ತ ವಸೂಲಿ ಮಾಡಲು ರಿಜಿಸ್ಟ್ರಿ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಎಂದು ಪೀಠ ಕಟುವಾಗಿ ನಿರ್ದೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ