ಮನೆ ಮುಂದೆ 'ನಾ ಯಜಮಾನಿ' ರಂಗೋಲಿ ಬಿಡಿಸಿ, ಗೃಹಲಕ್ಷ್ಮಿ ಯೋಜನೆ 2000 ರೂ. ಪಡೆಯಿರಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

By Sathish Kumar KH  |  First Published Aug 28, 2023, 7:43 PM IST

ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ದಿನವಾದ ಆ.30ರಂದು ಮಹಿಳೆಯರು ತಮ್ಮ ಮನೆಯ ಮುಂದೆ 'ನಾ ಯಜಮಾನಿ' ಎಂದು ರಂಗೋಲಿ ಬಿಡಿಸಿ ಯೋಜನೆಯನ್ನು ಮನೆಗೆ ಬರಮಾಡಿಕೊಳ್ಳಬೇಕು.


ಮಂಡ್ಯ (ಆ.28): ರಾಜ್ಯದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 30 ರಂದು ಚಾಲನೆ ನೀಡುವ ಹಿನ್ನಲೆಯಲ್ಲಿ ಮಹಿಳೆಯರು ತಮ್ಮ ಮನೆಯ ಮುಂದೆ ನಾ ಯಜಮಾನಿ ಎಂದು ರಂಗೋಲಿ ಬಿಡಿಸಿ ಯೋಜನೆಯನ್ನು ಮನೆಗೆ ಬರಮಾಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್‌ ಮನವಿ ಮಾಡಿದರು. 

ಗೃಹಲಕ್ಷ್ಮಿ ಯೋಜನೆಯ ಚಾಲನೆ ಕುರಿತ ಸಿದ್ಧತೆಯ ಬಗ್ಗೆ ಮಂಡ್ಯದಲ್ಲಿ ಜಿಲ್ಲಾಡಳಿತದೊಂದಿಗೆ ಪೂರ್ವ ಸಭೆಯಲ್ಲಿ ಪಾಲ್ಗೊಂಡ ಅವರು, ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 30 ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಚಾಲನೆ ನೀಡಲಾಗುವುದು. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಯೋಜನೆಯಾದ ಗೃಹಲಕ್ಷ್ಮಿಗೆ ಈಗಾಗಲೇ ಶೇ. 89 ರಷ್ಟು ಜನರು ನೋಂದಣಿಯಾಗಿದ್ದು, ಇನ್ನುಳಿದ  ಶೇ 11 ಜನ ತಾಂತ್ರಿಕ ಕಾರಣಗಳಿಂದ ನೊಂದಾಣಿ ಬಾಕಿ ಇರುತ್ತದೆ ಎಂದರು.

Tap to resize

Latest Videos

ಸಿಎಂ ತವರು ಮೈಸೂರಲ್ಲೇ ಗೃಹಲಕ್ಷ್ಮಿಗೆ ಚಾಲನೆ: ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್

ಆಗಸ್ಟ್ 30 ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಹಿನ್ನಲೆಯಲ್ಲಿ 'ಮಹಿಳೆಯರು ತಮ್ಮ ಮನೆಯ ಮುಂದೆ ನಾ ಯಜಮಾನಿ ಎಂದು ರಂಗೋಲಿ ಬಿಡಿಸಿ' ಯೋಜನೆಯನ್ನು ಮನೆಗೆ ಬರಮಾಡಿಕೊಳ್ಳಬೇಕು. ಈ ಯೊಜನೆಗೆ ಒಂದು ವರ್ಷಕ್ಕೆ  ಅಂದಾಜು 36,000 ಕೋಟಿ ರೂಪಾಯಿ ವೆಚ್ಚವಾಗಲಿದೆ. 5 ವರ್ಷಕ್ಕೆ 1,70,000 ಕೋಟಿ  ರೂ. ವೆಚ್ಚವಾಗಲಿದೆ. ಈ ಹಣವು ಮಹಿಳೆಯರಿಗೆ ಆರ್ಥಿಕವಾಗಿ ಸಬಲೀಕರಣವಾಗಲು ಉಪಯುಕ್ತವಾಗಲಿದೆ ಎಂದು ಹೇಳಿದರು.

ಯಾವುದೇ ಯೋಜನೆ ಅನುಷ್ಠಾನ ಆಗಬೇಕಾದಲ್ಲಿ ಅಧಿಕಾರಿಗಳ ಪಾತ್ರ ಮಹತ್ವವಾಗಿರುತ್ತದೆ. ಈ ಯೋಜನೆಗೆ ಶ್ರಮಿಸಿರುವ ಜಿಲ್ಲಾಧಿಕಾರಿಗಳು, ಎಲ್ಲಾ ಅಧಿಕಾರಿಗಳು , ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು ಸೇರಿದಂತೆ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಸರ್ಕಾರ ಜಾರಿಗೆ ಬಂದ ನಂತರ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು,  ಆಗಸ್ಟ್ 30 ರಂದು ಗೃಹಲಕ್ಷ್ಮಿ ಯೋಜನೆಯನ್ನು ಸಹ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದರು.

ಮಂಡ್ಯದಿಂದ 25 ಸಾವಿರ ಫಲಾನುಭವಿಗಳನ್ನು ಮೈಸೂರಿಗೆ ಕಳಿಸಲು ಸೂಚನೆ: ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ 25 ಸಾವಿರ ಫಲಾನುಭವಿಗಳನ್ನು 466 ಬಸ್ ಗಳಲ್ಲಿ ಕರೆದುಕೊಂಡು ಹೋಗಲು ಯೋಜಿಸಲಾಗಿದ್ದು, ಇದಕ್ಕಾಗಿ ನಿಯೋಜಿಸಲಾಗಿರುವ ನೋಡಲ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು. ಕುಡಿಯುವ ನೀರು, ಉಪಹಾರ ಸೇರಿದಂತೆ ಮೂಲಭೂತ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಹಾಗೂ ಕಾರ್ಯಕ್ರಮ ಮುಗಿದ ನಂತರ ಫಲಾನುಭವಿಗಳನ್ನು ಸುರಕ್ಷಿತವಾಗಿ  ಗ್ರಾಮಗಳಿಗೆ ಕರೆತರಬೇಕು ಎಂದರು.

ಗೃಹಲಕ್ಷ್ಮಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗಿಯಾಗಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮನವಿ

ಗೃಹ ಲಕ್ಷ್ಮಿ ಯೋಜನೆ 4,15,620 ಮಹಿಳೆಯರು ನೊಂದಣಿ: ಮಂಡ್ಯ ಜಿಲ್ಲೆಯಲ್ಲಿ ಗೃಹ ಲಕ್ಷ್ಮಿ ಯೋಜನೆಗೆ 4,77,561 ಮಹಿಳೆಯರು ಅರ್ಹರಿದ್ದು, ಆ.28 ರವರೆಗೆ 4,15,620 ಮಹಿಳೆಯರು ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ್ ತಿಳಿಸಿದರು. ಜಿಲ್ಲೆಯಲ್ಲಿ ನೊಂದಣಿಗಾಗಿ 479 ಕೇಂದ್ರಗಳನ್ನು ತೆರೆಯಲಾಗಿತ್ತು. ಆಗಸ್ಟ್ 30 ರಂದು ನಡೆಯುವ ಕಾರ್ಯಕ್ರಮಕ್ಕೆ ಕೆ.ಆರ್ ಪೇಟೆ-38, ಮದ್ದೂರು-81, ಮಳವಳ್ಳಿ-82, ಮಂಡ್ಯ-100, ನಾಗಮಂಗಲ-46, ಪಾಂಡವಪುರ-52 ಹಾಗೂ ಶ್ರೀರಂಗಪಟ್ಟಣ - 67 ಒಟ್ಟು 466 ಬಸ್ ಗಳಲ್ಲಿ ಫಲಾನುಭವಿಗಳನ್ನು ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಶಾಸಕರಾದ ಪಿ.ಎಂ.ನರೇಂದ್ರ ಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಪಿ ರವಿಕುಮಾರ್, ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ, ಜಿಲ್ಲಾ ಪಂಚಾಯತ ಸಿಇಒ ಶೇಕ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ರಾಮಮೂರ್ತಿ ಸೇರಿದಂತೆ ಇನ್ನಿತರರು ಹಾಜರಿದ್ದರು.

click me!