ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ (ಮನೆಯ ಯಜಮಾನಿಗೆ 2000 ರೂ. ಆರ್ಥಿಕ ನೆರವು) ಮೊದಲ ದಿನವೇ ಬರೋಬ್ಬರಿ 60 ಸಾವಿರ ಮಹಿಳೆಯರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಬೆಂಗಳೂರು (ಜು.20): ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ (ಮನೆಯ ಯಜಮಾನಿಗೆ 2000 ರೂ. ಆರ್ಥಿಕ ನೆರವು) ಮೊದಲ ದಿನವೇ ಬರೋಬ್ಬರಿ 60 ಸಾವಿರ ಮಹಿಳೆಯರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ಮೊದಲ ದಿನವೇ ಮಹಿಳೆಯರ ನೋಂದಣಿ ಪ್ರಕ್ರಿಯೆಯಲ್ಲಿ ಭಾರಿ ಯಶಸ್ಸು ಕಂಡುಬಂದಿದೆ.
ಇನ್ನು ಗೃಹ ಲಕ್ಷ್ಮಿ ಯೋಜನೆಗೆ ಎರಡು ಮಾದರಿಯಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಅದರಲ್ಲಿ ಮೊಬೈಲ್ ಆ್ಯಪ್ ಮೂಲಕ 15,276 ಮಹಿಳೆಯರು ಹಾಗೂ ವಿವಿಧ ಸರ್ಕಾರಿ ಕೇಂದ್ರಗಳ ಮೂಲಕ ವೆಬ್ ಅಪ್ಲಿಕೇಶನ್‌ಗಳಲ್ಲಿ 44,946 ಮಹಿಳೆಯರಿಂದ ನೋಂದಣಿ ಮಾಡಲಾಗಿದೆ. ಮೊದಲ ದಿನ ಒಟ್ಟು 60,222 ಮಹಿಳೆಯರು ಸರ್ಕಾರದ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ, ನೋಂದಣು ಪೂರ್ಣಗೊಳಿಸಿದ್ದಾರೆ. ಇವರಿಗೆ ಆಗಸ್ಟ್ 16ರಂದು ತಲಾ 2000 ರೂ. ಹಣ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಲಿದೆ.
ಗೃಹಲಕ್ಷ್ಮಿ ಯೋಜನೆ ಅಧಿಕೃತ ಆರಂಭ: ಮೊದಲ ಫಲಾನುಭವಿ ಮಹಿಳೆಯರು ಇವರೇ.. ಸುಮಾ, ಆನಂದಿ, ಸತ್ಯಾ
ಗೃಹಲಕ್ಷ್ಮಿಗೂ ಬಿಟ್ಟಿಲ್ಲ ಸರ್ವರ್ ಸಮಸ್ಯೆ: ಸರ್ಕಾರ ಗ್ಯಾರಂಟಿ ಯೋಜನೆಗಳ ಸಾಲಿನಲ್ಲಿ 4ನೇ ಗ್ಯಾರಂಟಿಯಾದ ಗೃಹಲಕ್ಷ್ಮೀ ಯೋಜನೆಗೂ ಸಮಸ್ಯೆ ಎದುರಾಗಿದೆ. ಗೃಹಜ್ಯೋತಿಗೆ ಸರ್ವರ್, ಅನ್ನಭಾಗ್ಯಕ್ಕೆ ಅಕ್ಕಿ ಸಮಸ್ಯೆಗಳ ಬಳಿಕ ಪ್ರತಿ ಮನೆಯೊಡತಿಗೆ 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ಈಗ ತಾಂತ್ರಿಕ ಸಮಸ್ಯೆ ಕಾಡಿದೆ. ಸರ್ಕಾರದ 4 ನೇ ಗ್ಯಾರಂಟಿ ಇಂದಿನಿಂದ ಜಾರಿಯಾಗಲಿದೆ. ಅದಕ್ಕಾಗಿ ಇಂದಿನಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಅದರೆ, ಗೃಹಲಕ್ಷ್ಮಿ ಯೋಜನೆಗೂ ಟೆಕ್ನಿಕಲ್ ಸಮಸ್ಯೆ ಕಾಡಿದೆ.
ಸರ್ಕಾರ ಸಿದ್ಧತೆ ಸೂಕ್ತವಾಗಿಲ್ಲ ಎಂದು ಆಕ್ರೋಶ: ಹಣದ ವಿಚಾರದಲ್ಲಿ ಬೇರೆಲ್ಲ ಗ್ಯಾರಂಟಿ ಯೋಜನೆಗಿಂತ ಅತಿದೊಡ್ಡ ಯೋಜನೆ ಇದಾಗಿದ್ದು, ವಾರ್ಷಿಕವಾಗಿ 35 ಸಾವಿರ ಕೋಟಿ ಸರ್ಕಾರದ ಬೊಕ್ಕಸಕ್ಕೆ ಇದು ಹೊರೆಯಾಗಲಿದೆ. ಆ ನಿಟ್ಟಿನಲ್ಲಿ ಗೃಹಲಕ್ಷ್ಮೀ ನೋಂದಣಿಗಾಗಿ ಸರ್ಕಾರ ಪ್ರತ್ಯೇಕ ಅಪ್ಲಿಕೇಶನ್ ಅನ್ನೂ ಬಿಡುಗಡೆ ಮಾಡಿತ್ತು. ಅದೇನೇ ಆದರೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ನಿಟ್ಟಿನಲ್ಲಿ ಸರ್ಕಾರದ ಸಿದ್ದತೆ ಸೂಕ್ತವಾಗಿಲ್ಲ ಅನ್ನೋದಕ್ಕೆ ಈಗ ಎದುರಾಗಿರುವ ತಾಂತ್ರಿಕ ಸಮಸ್ಯೆಯೇ ಉದಾಹರಣೆಯಾಗಿದೆ.
ಏನಿದು ಸಮಸ್ಯೆ: ಗೃಹಲಕ್ಷ್ಮೀ ನೋಂದಣಿಗಾಗಿ ಮೊಬೈಲ್ ಗೆ ಇಲಾಖೆಯಿಂದ ಮೆಸೇಜ್ ಬರಬೇಕು. ಆದರೆ, ಮೆಸೇಜ್ ಬರದೆ ಮಹಿಳೆಯರು ಗಾಬರಿಗೊಂಡಿದ್ದಾರೆ. ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಮಹಿಳೆಯರು ಬೆಂಗಳೂರು ಒನ್‌ಗೆ ಆಗಮಿಸುತ್ತಿದ್ದಾರೆ. ಬೆಂಗಳೂರು ಓನ್ ಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ತೆಗೆದುಕೊಂಡು ಮಹಿಳೆಯರು ಬರುತ್ತಿದ್ದಾರೆ. ಈ ಮೂರು ಡಾಕ್ಯುಮೆಂಟ್ ಇದ್ರೆ ಸಾಕು ನಾವು ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಬಹುದು ಎಂದು ಮಹಿಳೆಯರು ಭಾವಿಸಿದ್ದರು. ಆದರೆ, ಬೆಂಗಳೂರು ಓನ್ ನಲ್ಲಿ 8147500500 ನಂಬರ್ ಗೆ ಮೆಸೇಜ್ ಮಾಡಿ ಎಂದಾಗ ಅಚ್ಚರಿಗೊಂಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಆಗುತ್ತಿರುವ ಸಮಸ್ಯೆಗಳೇನು?: ಮೊದಲನೆಯದಾಗಿ ಇಲಾಖೆ ಕೊಟ್ಟಿರುವ ನಂಬರ್ ಗೆ ಮೆಸೇಜ್ ಮಾಡಿ ಗಂಟೆಗಟ್ಟಲೇ ಕಾದರೂ ಅಲ್ಲಿಂದ ಪ್ರತಿ ಮೆಸೇಜ್ ಬಂದಿಲ್ಲ. ಇದರಿಂದಾಗಿ ಯಾವ ಕೆಲಸಕ್ಕೂ ಹೋಗದೇ ಬೆಂಗಳೂರು ಒನ್‌ನಲ್ಲಿಯೇ ಮಹಿಳೆಯರು ಕಾದು ಕುಳಿತಿದ್ದಾರೆ. ಮೆಸೇಜ್ ನಾವು ಸರಿಯಾಗಿ ಮಾಡಿದ್ದೀವಾ ಇಲ್ವ ಅನ್ನೋ ಗೊಂದಲಕ್ಕೆ ಮಹಿಳೆಯರು ಸಿಲುಕಿದ್ದಾರೆ. ಇನ್ನೊಂದು ಸಮಸ್ಯೆ ಏನೆಂದರೆ, ಇಲಾಖೆಯಿಂದ ಒಂದಷ್ಟು ಜನರಿಗೆ ಅವರ ಮೊಬೈಲ್ ನಂಬರ್ ಗೆ ಮೆಸೇಜ್ ಬಂದಿದೆ. ಆದರೆ, ಮೆಸೇಜ್‌ನಲ್ಲಿ ಇರುವ ಅಡ್ರೆಸ್ ಯಾವುದು ಅಂತ ಸಾಕಷ್ಟು ಜನರಿಗೆ ಗೊತ್ತಿಲ್ಲ. ಕೆಲಸ ಬಿಟ್ಟು ಅಡ್ರೆಸ್ ಹುಡುಕಲು ಹೋಗೋಕೆ ಅಗುತ್ತಾ ಅಂತ ಮಹಿಳೆಯರ ಪ್ರಶ್ನೆ ಮಾಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಉಚಿತ ಅರ್ಜಿ ಸಲ್ಲಿಕೆ: ಮನೆ ಬಾಗಿಲಿಗೆ ಬರ್ತಾರೆ ಪ್ರಜಾಪ್ರತಿನಿಧಿಗಳು
ಬೆಂಗಳೂರಿನ ನಿವಾಸಿಗಳಿಗೆ ಶಿವಮೊಗ್ಗಕ್ಕೆ ಬರುವಂತೆ ಸಂದೇಶ: ಕೆಲವೊಂದಿಷ್ಟು ಜನರು ಈಗ ಬೆಂಗಳೂರಿನಲ್ಲಿ ಇದ್ದಾರೆ. ಆದರೆ, ಅವರಿಗೆ ಊರಿಗೆ ಹೋಗಿ ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸುವಂತೆ ಮೆಸೇಜ್ ಬಂದಿದೆ. ಬೆಂಗಳೂರಲ್ಲಿ 10 ವರ್ಷದಿಂದ ರೇಷನ್ ತೆಗೆದುಕೊಳ್ಳುತ್ತಿದ್ದೇವೆ. ಶಿವಮೊಗ್ಗಕ್ಕೆ ಹೋಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಂತೆ ಮೆಸೇಜ್ ಬಂದಿದೆ. 12 ರಿಂದ 1 ಗಂಟೆಯ ಒಳಗೆ ಬಂದು ಅರ್ಜಿ ಸಲ್ಲಿಸಲು ಸೂಚನೆ. ಬೆಂಗಳೂರಿಂದ ಶಿವಮೊಗ್ಗ ಹೋಗಲು 5 ರಿಂದ 6 ಗಂಟೆ ಬೇಕು. ನಾವು ಅಲ್ಲಿಗೆ ಹೋಗಿ ಅರ್ಜಿ ಸಲ್ಲಿಸಲು ಹೇಗೆ ಸಾಧ್ಯ ಎಂದು ಮಹಿಳೆಯರು ಪ್ರಶ್ನೆ ಮಾಡಿದ್ದಾರೆ.