ಗಣಿಗಾರಿಕೆ ನಡೆಸುವವರಿಗೆ ಸರ್ಕಾರದಿಂದ ತರಬೇತಿ

By Kannadaprabha NewsFirst Published Jan 28, 2021, 9:35 AM IST
Highlights

ರಾಜ್ಯ ಸರ್ಕಾರವು ಗಣಿಗಾರಿಕೆ ನಡೆಸುವವರಿಗೆ ಸೂಕ್ತ ರೀತಿಯ ತರಬೇತಿ ನಿಡಲಿದೆ. ಜಾರ್ಖಂಡ್ ಮಾದರಿಯಲ್ಲಿ ತರಬೇತಿ ನಡೆಯಲಿದೆ ಎಂದು ಸಚಿವ ನಿರಾಣಿ ಹೇಳಿದ್ದಾರೆ. 

ಬೆಂಗಳೂರು (ಜ.28):  ಸಮರ್ಪಕವಾಗಿ ಗಣಿಗಾರಿಕೆ ನಡೆಸಲು ಬಯಸುವವರಿಗೆ ಮಾಹಿತಿಯ ಕೊರತೆ ಇರುವ ಕಾರಣ ರಾಜ್ಯದಲ್ಲಿ ಜಾರ್ಖಂಡ್‌ ಮಾದರಿಯಲ್ಲಿ ಗಣಿಗಾರಿಕೆಗೆ ಸಂಬಂಧಪಟ್ಟಂತೆ ತರಬೇತಿ ಕೇಂದ್ರವನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ ಹೇಳಿದ್ದಾರೆ.

 ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ ರಾಜ್ಯದಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿ ಹೊಂದಿರುವವರು ಸಾಕಷ್ಟುಮಂದಿ ಇದ್ದಾರೆ. ಆದರೆ, ಸರಿಯಾಗಿ ನಡೆಸಲು ಜ್ಞಾನದ ಕೊರತೆ ಇದೆ. ಜಾರ್ಖಂಡ್‌ನಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೈನ್‌ ಲರ್ನಿಂಗ್‌ ಸೆಂಟರ್‌ ರೀತಿಯಲ್ಲಿ ರಾಜ್ಯದಲ್ಲಿಯೂ ತರಬೇತಿ ಕೇಂದ್ರವನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳ ಅನುಮತಿ ಪಡೆದುಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಎಲ್ಲಿ ಪ್ರಾರಂಭ ಮಾಡಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಿಲ್ಲ. ಮುಖ್ಯಮಂತ್ರಿಗಳಿಂದ ಅನುಮತಿ ದೊರಕಿದ ಬಳಿಕ ಮುಂದಿನ ಪ್ರಕ್ರಿಯೆ ಆರಂಭಿಸಲಾಗುವುದು. ತರಬೇತಿ ಕೇಂದ್ರದ ಬಗ್ಗೆ ನೀಲನಕ್ಷೆ ರೂಪಿಸಿ ಸಚಿವ ಸಂಪುಟ ಸಭೆಯ ಮುಂದಿಡಲಾಗುವುದು ಎಂದರು.

'ಗಣಿ ಅಕ್ರಮ-ಸಕ್ರಮಕ್ಕೆ ಅದಾಲತ್, ಯಾವೆಲ್ಲ ನಿಬಂಧನೆ?' .

ಗಣಿಗಾರಿಕೆ ಆರಂಭಿಸುವ ಮುನ್ನ ಮತ್ತು ನಂತರ ಕೈಗೊಳ್ಳಬೇಕಾದ ಪ್ರಕ್ರಿಯೆಗಳ ಕುರಿತು ತರಬೇತಿ ನೀಡಲಾಗುತ್ತದೆ. ಕೇಂದ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವನ್ನು ಆರಂಭಿಸಬಹುದು. ಇದರಿಂದ ಗಣಿಗಾರಿಕೆಗೆ ಮತ್ತಷ್ಟುಅನುಕೂಲವಾಗಲಿದೆ ಎಂದು ತಿಳಿಸಿದರು.

  ಬಳ್ಳಾರಿಯಲ್ಲಿ ಮತ್ತಷ್ಟುಗಣಿಗಾರಿಕೆ

ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಅದಿರು ಹೆಚ್ಚಾಗಿದೆ. ಇದರ ಸದುಪಯೋಗ ಮಾಡಿಕೊಳ್ಳಬೇಕಾಗಿದೆ. ಬಳ್ಳಾರಿ ಜಿಲ್ಲೆ ಸಂಡೂರಿನ ಹದ್ದಿನಗುಡ್ಡ ಗಣಿಗಾರಿಕೆ ಪ್ರದೇಶದಲ್ಲಿ ಹೆಚ್ಚಿನ ಗಣಿಗಾರಿಕೆಗೆ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದೆ. ಅಲ್ಲಿ ಸುಮಾರು 156 ಹೆಕ್ಟೇರ್‌ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ಇದೆ.

-ಮುರುಗೇಶ್‌ ನಿರಾಣಿ, ಗಣಿ ಮತ್ತು ಭೂವಿಜ್ಞಾನ ಸಚಿವ

click me!