ಬೆಂಗಳೂರು (ಜ.02): ಮಕ್ಕಳ ಲಸಿಕೆ (Vaccination ) ಅಭಿಯಾನಕ್ಕೆ ರಾಜ್ಯ ಆರೋಗ್ಯ ಇಲಾಖೆ (Health Department) ಸಿದ್ಧಗೊಂಡಿದ್ದು, ಸೋಮವಾರ ರಾಜ್ಯಾದ್ಯಂತ ಶೈಕ್ಷಣಿಕ ಸಂಸ್ಥೆಗಳಲ್ಲಿ 4,160 ಲಸಿಕೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. ಮೊದಲ ದಿನ 6.38 ಲಕ್ಷ ಮಕ್ಕಳಿಗೆ (Children) ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಜ.3ರಿಂದ ದೇಶಾದ್ಯಂತ 15ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಈಗಾಗಲೇ ಶನಿವಾರ ಬೆಳಿಗ್ಗೆಯಿಂದಲೇ ಮಕ್ಕಳ ನೋಂದಣಿಗೆ ಕೋವಿನ್ ಪೋರ್ಟಲ್‌ನಲ್ಲಿ ಅವಕಾಶ ನೀಡಲಾಗಿದ್ದು, ಸಾಕಷ್ಟು ಮಕ್ಕಳು ಲಸಿಕೆಗೆ ನೋಂದಣಿಯಾಗುತ್ತಿದ್ದಾರೆ. ರಾಜ್ಯದಲ್ಲಿಯೂ ಲಸಿಕೆಗೆ ಅರ್ಹ 31.7 ಲಕ್ಷ ಮಕ್ಕಳಿದ್ದು, ಅವರಿಗೆ ಲಸಿಕೆ ನೀಡಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ವಿಧಾನ ಸಭಾ ಕ್ಷೇತ್ರವಾರು ಶಾಸಕರಿಂದ ಶಾಲಾ / ಕಾಲೇಜುಗಳಲ್ಲಿ ಮಕ್ಕಳ (Children) ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮಕ್ಕಳಿಗೆ ಶಾಲೆ (School) ಮತ್ತು ಕಾಲೇಜುಗಳಲ್ಲಿ ಲಸಿಕೆ ನೀಡಲು ಉದ್ದೇಶಿಸಿರುವುದರಿಂದ ಈಗಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅರ್ಹ ಶಾಲೆಗಳನ್ನು ಹುಡುಕುತ್ತಿದ್ದು, ಅಲ್ಲಿಯೇ ಲಸಿಕೆ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಮೊದಲ ದಿನ ಆಯ್ದ ಶಾಲೆಗಳಲ್ಲಿ ಲಸಿಕೆ ನೀಡಲು ಉದ್ದೇಶಿಸಿದ್ದು, ರಾಜ್ಯದ 31 ಜಿಲ್ಲೆಗಳ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ 4,160 ಲಸಿಕೆ ಶಿಬಿರಗಳು ನಡೆಯಲಿದ್ದು, 6.38 ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ (Health Department) ಅಧಿಕಾರಿಗಳು ತಿಳಿಸಿದರು.
ಲಸಿಕೆಗೆ ನೇರವಾಗಿ ಬರಬಹುದು: ಲಸಿಕೆ ಪಡೆಯುವ ಮಕ್ಕಳು (Children) ಕಡ್ಡಾಯವಾಗಿ ಕೋವಿನ್ (Covin) ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಬೇಕಿಲ್ಲ. ನೇರವಾಗಿ ಶಾಲೆಗೆ ತೆರಳಿ ಆಧಾರ್ ಕಾರ್ಡ್ ಅಥವಾ ಶಾಲಾ ಗುರುತಿನ ಚೀಟಿಯನ್ನು ನೀಡಿ, ಪೋಷಕರ ಅಥವಾ ಸ್ವಂತ ಮೊಬೈಲ್ (Mobile) ನಂಬರ್ ನೀಡಿ ನೋಂದಾಯಿಸಿಕೊಳ್ಳಬಹುದು. ಸ್ಥಳೀಯ ಆರೋಗ್ಯ ಸಹಾಯಕರು ಶಾಲೆಯ ಶಿಬಿರದಲ್ಲಿ ನೆರವು ನೀಡಲಿದ್ದಾರೆ.
ಖಾಸಗಿಯಲ್ಲೂ ಸಿದ್ಧತೆ: ಬೆಂಗಳೂರು ಸೇರಿದಂತೆ ಪ್ರಮುಖ ನಗರದಲ್ಲಿ ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳ ಲಸಿಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಾಗಿದೆ. ಪ್ರತಿ ಡೋಸ್‌ಗೆ 1410 ದರ ನಿಗದಿಪಡಿಸಿವೆ. ಕೆಲ ಆಸ್ಪತ್ರೆಗಳು ಮಕ್ಕಳ ಆರೋಗ್ಯ ತಪಾಸಣೆ ಒಳಗೊಂಡ ಪ್ಯಾಕೇಜ್‌ಗಳನ್ನು ಮಾಡಿಕೊಂಡಿವೆ.
ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ಲಸಿಕೆ ಡೌಟ್
ಮುಂಜಾಗ್ರತಾ ದೃಷ್ಟಿಯಿಂದ ರಾಜ್ಯದಲ್ಲಿ ಶಾಲಾ/ಕಾಲೇಜುಗಳಲ್ಲಿಯೇ ಮಕ್ಕಳ ಲಸಿಕೆಗೆ ಆದ್ಯತೆ ನೀಡಲಾಗಿದೆ. ಅಲ್ಲದೆ, ಮಕ್ಕಳಿಗೆ ಕೋವಾಕ್ಸಿನ್ ಲಸಿಕೆ ನೀಡುತ್ತಿದ್ದು, ಒಂದು ಸೀಸೆಯಲ್ಲಿ 20 ಡೋಸ್ ಲಸಿಕೆ ಸಂಗ್ರಹವಿರುತ್ತದೆ. ಒಮ್ಮೆ ಶೀಸೆ ತೆರೆದರೆ 20 ಮಕ್ಕಳಿಗೆ ನೀಡಲೇ ಬೇಕಾಗುತ್ತದೆ. ಆರೋಗ್ಯ ಕೇಂದ್ರದಲ್ಲಿ 20 ಮಕ್ಕಳು ಆಗಮಿಸದಿದ್ದರೆ, ಲಸಿಕೆ ವ್ಯರ್ಥವಾಗುತ್ತದೆ. ಹೀಗಾಗಿ, ಶಾಲೆ/ಕಾಲೇಜಿನಲ್ಲಿಯೇ ಲಸಿಕೆ ಪಡೆಯಲು ಆದ್ಯತೆ ನೀಡಬೇಕು. ಒಂದು ವೇಳೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡು 20 ಮಕ್ಕಳು ಒಮ್ಮೆಗೆ ಬಂದರೆ ಎಲ್ಲಾ ಪ್ರಾಥಮಿಕ, ಸಮುದಾಯ, ತಾಲೂಕು, ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿಯೂ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
17 ಲಕ್ಷ ಡೋಸ್ ದಾಸ್ತಾನು
ರಾಜ್ಯ ಆರೋಗ್ಯ ಇಲಾಖೆ ಬಳಿ ಕೋವ್ಯಾಕ್ಸಿನ್ ಲಸಿಕೆ 17 ಲಕ್ಷ ಡೋಸ್ ದಾಸ್ತಾನು ಲಭ್ಯವಿದೆ. ಕೇಂದ್ರ ಸರ್ಕಾರದಿಂದ ಹಂತ ಹಂತವಾಗಿ ಲಸಿಕೆ ಬರಲಿದೆ. ಭಾನುವಾರ ಕೂಡಾ ಮೂರು ಲಕ್ಷ ಡೋಸ್ ಲಸಿಕೆ ಬರಲಿದೆ. ದಾಸ್ತಾನು ಲಸಿಕೆಯನ್ನು ಈಗಾಗಲೇ ಜಿಲ್ಲಾ ಉಗ್ರಾಣಗಳಿಗೆ ಪೂರೈಸಿದ್ದು, ಆರೋಗ್ಯ ಕೇಂದ್ರಗಳಿಗೆ ಆದ್ಯತೆ ಮೇರೆಗೆ ನೀಡಲಾಗುತ್ತದೆ. 18 ವರ್ಷ ಮೇಲ್ಪಟ್ಟವರಿಗೆ ಶೇ.99 ರಷ್ಟುಕೋವಿಶೀಲ್ಡ್ ನೀಡಲಾಗುತ್ತಿದೆ. ಮಕ್ಕಳಿಗೆ ಕೋವ್ಯಾಕ್ಸಿನ್ ಮಾತ್ರ ನೀಡುತ್ತಿದ್ದು, ಮೊದಲ ಒಂದು ವಾರ ಮಕ್ಕಳ ಲಸಿಕೆ ಕೊರತೆಯಾಗುವುದಿಲ್ಲ, ಆ ಬಳಿಕ ಕೇಂದ್ರದಿಂದ ಲಸಿಕೆ ಬರಲಿದೆ ಎಂದು ಆರೋಗ್ಯ ಇಲಾಖೆ ಲಸಿಕೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.