ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಳದಿಂದಾಗಿ ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳ ನರೇಗಾ ಕಾರ್ಮಿಕರ ಕೆಲಸದ ಅವಧಿಯನ್ನು ಶೇ.30ರಷ್ಟು ಕಡಿತಗೊಳಿಸಲಾಗಿದೆ. ಬೇಸಿಗೆಯಲ್ಲಿ ಕಾರ್ಮಿಕರ ಆರೋಗ್ಯ ಕಾಪಾಡಲು ಸರ್ಕಾರ ಈ ಕ್ರಮ ಕೈಗೊಂಡಿದೆ.
ಬೆಂಗಳೂರು (ಏ.03): ರಾಜ್ಯದಲ್ಲಿ ಬೇಸಿಗೆ ಋತುಮಾನದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳ ಎಲ್ಲ ಜಿಲ್ಲೆಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಎಲ್ಲ ಕೂಲಿ ಕಾರ್ಮಿಕರ ಕೆಲಸದ ಅವಧಿಯಲ್ಲಿ ಶೇ.30ರಷ್ಟು ಕಡಿತಗೊಳಿಸಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
ಈಗಾಗಲೇ ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳ ಎಲ್ಲ ಜಿಲ್ಲೆಗಳಿಗೆ ಕೆಲಸದ ಅವಧಿಯಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಅವಧಿಯನ್ನು ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 10 ಗಂಟೆಯಿಂದ 5 ಗಂಟೆವರೆಗೆ ಇರುವ ಸರ್ಕಾರಿ ಕೆಲಸದ ಅವಧಿಯನ್ನು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ನಿಗದಿ ಮಾಡಲಾಗಿದೆ. ಇದೀಗ ಬೆಳಗಾವಿ ಹಾಗೂ ಕಲಬುರಗಿ ವಿಭಾಗದಲ್ಲಿ ತಾಪಮಾನ ಹೆಚ್ಚಳ ಹಿನ್ನೆಲೆಯಲ್ಲಿ ನರೇಗಾ ಕಾರ್ಮಿಕರಿಗೆ ಶೇ.30 ಕೆಲಸದ ಪ್ರಮಾಣ ಕಡಿತ ಮಾಡಿ ಆದೇಶ ಹೊರಡಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು, ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ಏರಿಕೆ ಹಿನ್ನೆಲೆಯಲ್ಲಿ ಹೆಚ್ಚಿನ ಬಿಸಿಲು ಇರುವ ಕಾರಣ ಈ ನಿರ್ಧಾರ ಮಾಡಲಾಗಿದೆ. ನರೇಗಾ ಯೋಜನೆ ಗ್ರಾಮೀಣ ಭಾಗದ ಜೀವನೋಪಾಯದ ಪ್ರಮುಖ ಭಾಗವಾಗಿದೆ. ನರೇಗಾದ ಕೂಲಿ ಕೆಲಸ ಮಾಡುವ ಬೆಳಗಾವಿ ಮತ್ತು ಕಲಬುರಗಿ ಕಂದಾಯ ವಿಭಾಗದ ಕಾರ್ಮಿಕರಿಗೆ ಈ ಆದೇಶ ಅನ್ವಯವಾಗಲಿದೆ.
ಇದನ್ನೂ ಓದಿ: 92 ಸಾವಿರ ಬಡ ಮಕ್ಕಳಿಗೆ ಕೇಂದ್ರದಿಂದ 32.5 ಕೋಟಿ ರೂಪಾಯಿ ವಿದ್ಯಾರ್ಥಿ ವೇತನ!
ಇಂದಿನಿಂದಲೇ ಜಾರಿಗೆ ಬರುವಂತೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ.30ರಷ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ಕೊಡಲಾಗಿದೆ. ಬೇಸಿಗೆ ದಿನಗಳಲ್ಲಿ ಕೂಲಿ ಕಾರ್ಮಿಕರಿಗೆ ಬಿಸಿಲಿನಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಇದೀಗ ಶೇ.30 ಅವಧಿ ಕಡಿತಗೊಳಿಸಿದ ನಂತರವೂ ಉಳಿದ ಅವಧಿಯಲ್ಲಿ ಕೆಲಸ ಮಾಡುಯವ ಕಾರ್ಮಿಕರಿಗೆ ಬಿಳಿಯ ಬಣ್ಣದ ಸಡಿಲ ಬಟ್ಟೆ ಹಾಗೂ ತಲೆಯ ಮೇಲೆ ಬಿಳಿ ಬಣ್ಣದ ರುಮಾಲು ಧರಿಸಿ ಕೆಲಸ ಮಾಡಲು ಸಲಹೆ ನೀಡಲಾಗಿದೆ. ಚಹಾ, ಕಾಫಿ , ತಂಪಾದ ಪಾನೀಯಗಳು, ಮಸಾಲೆ ಮತ್ತು ಎಣ್ಣೆಭರಿತ ಆಹಾರದ ಬದಲಾಗಿ ಹೆಚ್ಚು ತೇವಾಂಶವುಳ್ಳ ತರಕಾರಿ, ಅಂಬಲಿ, ಮಜ್ಜಿಗೆ, ಎಳೆನೀರು ಸೇವನೆಗೆ ಸಲಹೆ ನೀಡಲಾಗಿದೆ.
ಬೇಸಿಗೆಯಲ್ಲಿ ಕೆಲಸ ಮಾಡುವಾಗ ಎಲ್ಲ ಕಾರ್ಮಿಕರೂ ಯಥೇಚ್ಛವಾಗಿ ನೀರನ್ನು ಕುಡಿಯಬೇಕು. ಅಧಿಕಾರಿಗಳು ಕಾಮಗಾರಿ ಸ್ಥಳಗಳಲ್ಲಿ ಯೋಜನೆಯ ಮಾರ್ಗಸೂಚಿಯಂತೆ ಕಡ್ಡಾಯವಾಗಿ ನೆರಳು ಇರುವಂತೆ ಮಾಡಬೇಕು. ಶುದ್ಧ ಕುಡಿಯುವ ನೀರು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಬಂಡೀಪುರದಲ್ಲಿ ರಾತ್ರಿ ಸಂಚಾರ ನಿರ್ಬಂಧ ತೆರವು ಬೇಡ: ಸಂಸದ ಯದುವೀರ್ ಒಡೆಯರ್