* ಹೆದರಬೇಕಿಲ್ಲ, ಕೋವಿಡ್ 3ನೇ ಅಲೆಗೆ ರಾಜ್ಯ ಸರ್ವಸನ್ನದ್ಧ ಎಂದ ಡಿಸಿಎಂ
* ಮೋದಿ ಸರಕಾರಕ್ಕೆ 7 ವರ್ಷ ಹಿನ್ನೆಲೆಯಲ್ಲಿ ಮಲ್ಲೇಶ್ವರದಲ್ಲಿ ಬಿಜೆಪಿ ಕಾರ್ಯಕರ್ತರ ಹರ್ಷ
* ಬಿಜೆಪಿ ಕಾರ್ಯಕರ್ತರು, ಮುಖಂಡರನ್ನು ವರ್ಚುಯಲ್ ವೇದಿಕೆಯಲ್ಲಿ ಹೇಳಿಕೆ
ಬೆಂಗಳೂರು, (ಮೇ.30): ರಾಜ್ಯವು ಸಂಭವನೀಯ ಕೋವಿಡ್ 3ನೇ ಅಲೆಗೆ ಸನ್ನದ್ಧವಾಗಿದ್ದು, ನಮ್ಮ ಆರೋಗ್ಯ ಮೂಲಸೌಕರ್ಯ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಎಂದು ಹೇಳಿದರು.
ಕೇಂದ್ರದ ನರೇಂದ್ರ ಮೋದಿ ಸರಕಾರ 7ನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಭಾನುವಾರದಂದು ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು, ಮುಖಂಡರನ್ನು ವರ್ಚುಯಲ್ ವೇದಿಕೆ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, ಎಂಥದ್ದೇ ದುರ್ಬರ ಪರಿಸ್ಥಿತಿ ಬಂದರೂ ಎದುರಿಸಲು ಸರಕಾರ ತಯಾರಿದೆ ಎಂದರು.
ಬ್ರಿಟನ್ ಆರೋಗ್ಯ ಇಲಾಖೆಗೆ ರಾಜ್ಯದಿಂದ 1,000 ನರ್ಸಿಂಗ್ ಸಿಬ್ಬಂದಿ: ಅಶ್ವತ್ಥನಾರಾಯಣ
ಕೋವಿಡ್ ಮೊದಲ ಅಲೆ ಬಂದಾಗ ಸರಕಾರಿ ಆಸ್ಪತ್ರೆಗಳಲ್ಲಿ ಕೇವಲ 4,000 ಆಕ್ಸಿಜನ್ ಬೆಡ್‌ಗಳಿದ್ದವು. ಈಗ ಅವುಗಳ ಪ್ರಮಾಣ 24,000 ಮೀರಿದೆ. ಮೆಡಿಕಲ್ ಕಾಲೇಜುಗಳಲ್ಲಿ 4,000 ಇದ್ದ ಆಕ್ಸಿಜನ್ ಬೆಡ್‌ಗಳು ಈಗ 10,000 ಆಗಿವೆ. ಅಪಾರ ಪ್ರಮಾಣದಲ್ಲಿ ರೆಮಿಡಿಸಿವರ್ ತಯಾರಿಕೆ ಆಗುತ್ತಿದೆ. ಕಳೆದ ಮಾರ್ಚ್‌ನಲ್ಲಿ ಆಕ್ಸಿಜನ್ ಬೇಡಿಕೆ 100ರಿಂದ 150 ಮೆ. ಟನ್ ಮಾತ್ರ ಇದ್ದದ್ದು, ಈಗ 1,000-1,200 ಮೆ.ಟನ್‌ಗೆ ಏರಿದೆ. ಬೇಡಿಕೆ ಹೆಚ್ಚಿದಷ್ಟೂ ಸರಕಾರ ಒದಗಿಸುತ್ತಿದೆ. ಹೀಗಾಗಿ ಮೂರನೇ ಅಲೆಗೆ ಹೆದರುವ ಅಗತ್ಯವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ವಿಶ್ವಕ್ಕೆ ಮಾದರಿ:
ತಮ್ಮ ಮಾತಿನುದ್ದಕ್ಕೂ ಏಳು ವರ್ಷಗಳ ಮೋದಿ ಸರಕಾರದ ಸಾಧನೆಗಳನ್ನು ಪಟ್ಟಿ ಮಾಡಿದ ಡಿಸಿಎಂ, ಕೋವಿಡ್ ಬಗ್ಗೆ ಕೇಂದ್ರ ಕೈಗೊಂಡ ಕ್ರಮಗಳು ಇಡೀ ವಿಶ್ವಕ್ಕೆ ಮಾದರಿ ಎಂದರು.
ಸದ್ಯಕ್ಕೆ ವ್ಯಾಕ್ಸಿನ್ ಸಂಶೋಧನೆ & ತಯಾರಿಕೆ ಕೆಲ ದೇಶಗಳಲ್ಲಿ ಮಾತ್ರ ಆಗುತ್ತಿದೆ. ಇಂಥ ಪ್ರಮುಖ ದೇಶಗಳ ಸಾಲಿನಲ್ಲಿ ಭಾರತವೂ ಒಂದು. ಈಗಾಗಲೇ 23 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಮೋದಿ ಅವರು ಅಧಿಕಾರಕ್ಕೆ ಬರುವ ತನಕ ನಮ್ಮ ದೇಶದಲ್ಲಿ ಒಂದು ವೇಂಟಿಲೇಟರ್ ಕೂಡ ತಯಾರಾಗುತ್ತಿರಲಿಲ್ಲ. ಮಾಸ್ಕ್, ಸ್ಯಾನಿಟೈರ್, ಪಿಪಿಇ ಕಿಟ್ ಇತ್ಯಾದಿಗಳಿಗೆ ಬೇರೆ ದೇಶಗಳತ್ತ ನೋಡಬೇಕಾಗಿತ್ತು. ಕೇವಲ ಒಂದೇ ವರ್ಷದಲ್ಲಿ ಈ ಎಲ್ಲ ಉತ್ಪನ್ನಗಳಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಲಾಗಿದೆ. ಆಮ್ಲಜನಕ ಸಾಂದ್ರಕಗಳನ್ನೂ ತಯಾರು ಮಾಡಲಾಗುತ್ತಿದೆ. ಹೀಗಾಗಿ ಭವಿಷ್ಯದ ಯಾವುದೇ ಸವಾಲನ್ನು ಎದುರಿಸಲು ಸರಕಾರಕ್ಕೆ ಹೆದರಿಕೆ ಇಲ್ಲ ಎಂದು ಡಾ.ಅಶ್ವತ್ಥನಾರಾಯಣ ನುಡಿದರು.
ಸ್ವಚ್ಛ ಭಾರತ ಉಪಕ್ರಮದಿಂದ ಇಡೀ ದೇಶ ಸ್ವಚ್ಛವಾಗಿದೆ. ಇನ್ನು ಮುಂದೆ ಸ್ವಚ್ಛತೆ ಎಂದರೆ ಬಿಜೆಪಿಯೇ ನೆನಪಾಗಬೇಕು. ಅಷ್ಟರಮಟ್ಟಿಗೆ ಪ್ರಭಾವ ಬೀರಿದೆ ಈ ಕಾರ್ಯಕ್ರಮ. ಈ ದಿಕ್ಕಿನಲ್ಲಿ ನಾವೆಲ್ಲರೂ ಇನ್ನೂ ಹೆಚ್ಚು ಕೆಲಸ ಮಾಡಬೇಕು. ನೈರ್ಮಲ್ಯತೆ, ಸ್ವಚ್ಛತೆ ಮುಖ್ಯ, ಬಯಲು ಬಹಿರ್ದೆಸೆ ನಿರ್ಮೂಲನೆಯಾಗಿದೆ. ಇದೆಲ್ಲವೂ ಮೋದಿ ಅವರು ದೇಶಕ್ಕೆ ಕೊಟ್ಟ ಕೊಡುಗೆಗಳು ಎಂದು ಡಿಸಿಎಂ ಒತ್ತಿ ಹೇಳಿದರು.
40 ಕೋಟಿಗಿಂತ ಹೆಚ್ಚು ಜನರಿಗೆ ಜನಧನ್ ಖಾತೆ ಇದೆ. ಸರಕಾರದ ಹಣ ನೇರ ಅವರವರ ಖಾತೆಗೆ ತಲುಪುತ್ತಿದೆ. ಎಲ್ಲರ ಜೀವನ ಹಸನಾಗಿದೆಯಲ್ಲದೆ, ಎಲ್ಲ ಕಡೆ ಟೆಕ್ನಾಲಜಿ ಬಳಕೆಯಾಗುತ್ತಿದೆ. ಪ್ರತಿ ಮನೆಗೂ ಜಲಜೀವನ್ ಮೂಲಕ ಶುದ್ಧ ನೀರು ಪೂರೈಕೆಯಾಗುತ್ತಿದೆ ಎಂದು ಅವರು ವಿವರಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಮೋದಿ ಸರಕಾರದ ಮಹತ್ವಾಕಾಂಕ್ಷೆಯ ಕ್ರಮ. ಭಾರತವನ್ನು ವಿಶ್ವಗುರು ಮಾಡುವ ನಿಟ್ಟಿನಲ್ಲಿ ಇದೊಂದು ಬೃಹತ್ ಹೆಜ್ಜೆ. ಈ ಮೂಲಕ ಮೂರನೇ ವಯಸ್ಸಿನಿಂದಲೇ ಮಕ್ಕಳ ಕಲಿಕೆ ಶುರುವಾಗುತ್ತಿದೆ. ಅಲ್ಲದೆ, ಈ ನೀತಿಯಲ್ಲಿ ಪಠ್ಯೇತರ ಎನ್ನುವುದೇ ಇರುವುದಿಲ್ಲ, ಎಲ್ಲವೂ ಪಠ್ಯದಲ್ಲೇ ಇರುತ್ತದೆ. ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ೩೬ ವರ್ಷಗಳ ನಂತರ ಹೊಸ ಶಿಕ್ಷಣ ನೀತಿ ಬಂದಿದೆ. ರಾಜಕೀಯ ಇಚ್ಛಾಶಕ್ತಿಯಿಂದ ಮಾತ್ರ ಇದು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಆರೋಗ್ಯ ನೀತಿಯೂ ಜಾರಿಗೆ ಬಂದಿದ್ದು, ಹಿಂದೆ ಪ್ರತಿ ಆರೋಗ್ಯ ವಿವಿಯೂ ಪ್ರತ್ಯೇಕವಾಗಿ ಪರೀಕ್ಷೆ ಮಾಡಿಕೊಳ್ಳುತ್ತಿತ್ತು. ಈಗ ಎಲ್ಲವೂ ʼನೀಟ್ʼ ಮೂಲಕವೇ ಸೀಟು ಹಂಚಿಕೆಯಾಗುತ್ತಿದೆ. ಮೆರಿಟ್ ಆಧಾರದಲ್ಲೇ ಸೀಟು ಕೊಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಅಂಗೈನಂತೆ ಸ್ಪಷ್ಟವಾಗಿ ಅಭಿವೃದ್ಧಿ ಕಾರ್ಯಗಳು ಕಣ್ಣಿಗೆ ಕಾಣುತ್ತಿದ್ದರೂ ಪ್ರತಿಪಕ್ಷಗಳು ಅನಗತ್ಯ ಹುಯಿಲೆಬ್ಬಿಸುತ್ತಿವೆ. ಅವುಗಳಿಗೆ ಸ್ಪಷ್ಟ ದಿಕ್ಸೂಚಿ ಇಲ್ಲ. ಜನರ ಕಾಳಜಿ ಇಲ್ಲ. ಹೀಗಾಗಿ ಮೋದಿ ಸರಕಾರದ ಸಾಧನೆಗಳನ್ನು ನಾವೇ ಜನರಿಗೆ ಮುಟ್ಟಿಸಬೇಕು ಎಂದು ಅವರು ಕರೆ ನೀಡಿದರು.
ಸಭೆಯಲ್ಲಿ ಬೆಂಗಳೂರು ಉತ್ತರ ವಿಭಾಗದ ಬಿಜೆಪಿ ಅಧ್ಯಕ್ಷ ನಾರಾಯಣ ಸ್ವಾಮಿ, ಮಲ್ಲೇಶ್ವರ ಮಂಡಲದ ಅಧ್ಯಕ್ಷೆ ಕಾವೇರಿ ಕೇದಾರನಾಥ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.