* ಬ್ರಿಟನ್ ಆರೋಗ್ಯ ಇಲಾಖೆಗೆ ರಾಜ್ಯದಿಂದ 1,000 ನರ್ಸಿಂಗ್ ಸಿಬ್ಬಂದಿ
* ಬ್ರಿಟೀಷ್ ಆರೋಗ್ಯ ಇಲಾಖೆ ಜತೆ ರಾಜ್ಯದ ಕೌಶಲ್ಯಾಭಿವೃದ್ಧಿ ಇಲಾಖೆ ಒಪ್ಪಂದ
* ಕೌಶಲ್ಯಾಭಿವೃದ್ಧಿ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಂದ ಮಾಹಿತಿ
ಬೆಂಗಳೂರು, (ಮೇ.30): ಬ್ರಿಟನ್ ದೇಶದ ರಾಷ್ಟ್ರೀಯ ಆರೋಗ್ಯ ಇಲಾಖೆಯಿಂದ 1,000 ಶುಶ್ರೂಷಕರಿಗೆ ಬೇಡಿಕೆ ಬಂದಿದ್ದು, ಕೋವಿಡ್ ಸಂಕಷ್ಟ ಮುಗಿದ ನಂತರ ಅಷ್ಟೂ ನರ್ಸಿಂಗ್ ಸಿಬ್ಬಂದಿಯನ್ನು ಲಂಡನ್‌ಗೆ ಕಳಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ವರ್ಚುಯಲ್ ವೇದಿಕೆ ಮೂಲಕ ಭಾನುವಾರ ವಿಶ್ವ ಕನ್ನಡ ಶುಶ್ರೂಷಕರ ಸಂಘ’ದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈಗಾಗಲೇ ಕೌಶಲ್ಯಾಭಿವೃದ್ಧಿ ಇಲಾಖೆ ಮತ್ತು ಎನ್‌ಎಚ್‌ಎಸ್ ಜತೆ ಒಪ್ಪಂದಕ್ಕೆ ಸಹಿ ಬಿದ್ದಿದೆ. 1,000 ಶುಶ್ರೂಷಕರನ್ನು ಕಳಿಸುವಂತೆ ಅವರು ಕೋರಿದ್ದಾರೆ. ಅದಕ್ಕೆ ಈಗಾಗಲೇ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿನ ವ್ಯವಸ್ಥೆಗೆ ಒಗ್ಗಿ ಕೆಲಸ ಮಾಡುವುದಕ್ಕೆ ಅಗತ್ಯವಾದ ಭಾಷೆ, ಸಂವಹನ ಕಲೆ, ಸೇವಾ ಮನೋಭಾವ ಇತ್ಯಾದಿಗಳ ಬಗ್ಗೆ ಎಲ್ಲರಿಗೂ ತರಬೇತಿ ನೀಡಲಾಗುವುದು ಎಂದರು.
ಕರ್ನಾಟಕದಲ್ಲಿ ಕೊರೋನಾ: ಇಲ್ಲಿದೆ ಮೇ.30ರ ಅಂಕಿ-ಸಂಖ್ಯೆ
ಇನ್ನೂ ಹೆಚ್ಚಿನ ನರ್ಶಿಂಗ್ ಸಿಬ್ಬಂದಿ ಅಗತ್ಯವಿದ್ದರೆ ಕಳಿಸಲಾಗುವುದು. ಅಲ್ಲದೆ ಬ್ರಿಟನ್ ಜತೆಗೆ ಇತರೆ ದೇಶಗಳಿಗೂ ನರ್ಶಂಗ್ ಹಾಗೂ ಅರೆವೈದ್ಯಕೀಯ ಸಿಬ್ಬಂದಿಯನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ. ಈ ಬಗ್ಗೆ ಕೌಶಲ್ಯಾಭಿವೃದ್ಧಿ ಇಲಾಖೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ನರ್ಸಿಂಗ್ ಸಿಬ್ಬಂದಿಗೆ ಅಧಿಕಾರಿ ಮಟ್ಟದ ಸ್ಥಾನಮಾನ ನೀಡುವ ಬಗ್ಗೆ ಈಗಾಗಲೇ ನಿರ್ಧಾರವಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆದೇಶವನ್ನೂ ಹೊರಡಿಸಿದ್ದಾರೆ. ಅಲ್ಲದೆ, ಅವರ ಎಲ್ಲ ಬೇಡಿಕೆಗಳನ್ನೂ ಈಡೇರಿಸಲಾಗಿದೆ. ಜತೆಗೆ, ಇದು ದೇಶಾದ್ಯಂತ ಸುಮಾರು 2 ಲಕ್ಷ ನರ್ಸಿಂಗ್ ಸಿಬ್ಬಂದಿಗೆ ಆರೋಗ್ಯ ಕೇಂದ್ರಗಳಲ್ಲಿ ಉದ್ಯೋಗವನ್ನು ಕೊಡಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ವಿವರಿಸಿದರು.
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿ ‘ವಿಶ್ವ ಕನ್ನಡ ಶುಶ್ರೂಷಕರ ಸಂಘ’ವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಎಂ.ಬಿ.ಪಾಟೀಲ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಘವೇಂದ್ರ ಬೇಲೂರು, ಗೋಪಾಲ ಕುಲಕರ್ಣಿ, ಸಂಘದ ಅಧ್ಯಕ್ಷ ತಮ್ಮಣ್ಣ, ಕಾರ್ಯದರ್ಷಿ ನಾಗರಾಜ್, ಖಜಾಂಚಿ ಹೇಮೇಗೌಡ ಮುಂತಾದವರು ವಿಶ್ವದ ವಿವಿಧ ದೇಶಗಳಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.