
ಮಂಗಳೂರು (ಫೆ.25): ರಾಜ್ಯ ಸರ್ಕಾರದ ಆಡಳಿತ ಕೇಂದ್ರವಾಗಿರುವ ವಿಧಾನ ಸೌಧದ ಆವರಣದಲ್ಲಿ ಬರೋಬ್ಬರಿ 52 ಬೀದಿ ನಾಯಿಗಳಿವೆ. ಈ ನಾಯಿಗಳಿಗೆ ಸಂತಾಹರಣ ಶಸ್ತ್ರಚಿಕಿತ್ಸೆ ಮಾಡಿ ಸರ್ಕಾರದ ವೆಚ್ಚದಲ್ಲಿಯೇ ಆಶ್ರಯ ನೀಡಲಾಗುವುದು. ಇದಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ ಶೆಡ್ ನಿರ್ಮಾಣ ಮಾಡಲಾಗುತ್ತದೆ ಎಂದು ವಿಧಾನಸಭಾ ಸಭಾಪತಿ ಯು.ಟಿ. ಖಾದರ್ ಮಾಹಿತಿ ನೀಡಿದರು.
ಮಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ವಿಧಾನ ಸೌಧದ ಆವರಣದಲ್ಲಿ ಬೀದಿ ನಾಯಿಗಳ ಹಾವಳಿ ವಿಚಾರದ ಬಗ್ಗೆ ಮಾತನಾಡಿದ ಅವರು, ವಿಧಾನ ಸೌಧದ ಆವರಣದಲ್ಲಿ ಬೀದಿ ನಾಯಿಗಳಿಗಾಗಿ ಜಾಗ ಹುಡುಕುತ್ತಿದ್ದಾರೆ. ಈಗಾಗಲೇ ವಿಧಾನ ಸೌಧ ಆವರಣದಲ್ಲಿ ಇರುವ ನಾಯಿಗಳ ಪತ್ತೆ ಮಾಡಲಾಗಿದೆ. ವಿಧಾನ ಸೌಧದ ಆವರಣದಲ್ಲಿ ಒಟ್ಟು 52 ಬೀದಿನಾಯಿಗಳಿವೆ. ಅವುಗಳಿಗೆ ಸಂತಾನ ಹರಣ ಚಿಕಿತ್ಸೆ ನೀಡಿ ಆಶ್ರಯ ನೀಡಲಾಗುತ್ತದೆ. ಇದಕ್ಕಾಗಿ ಸುಸಜ್ಜಿತ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ವಿಧಾನಸೌಧದ ಆವರಣದಲ್ಲಿ ಇರುವ 52 ನಾಯಿಗಳ ನಿರ್ವಹಣೆಯನ್ನ ಒಂದು ಖಾಸಗಿ ಸಂಸ್ಥೆ(NGO)ಗೆ ನೀಡಲಾಗುವುದು. ಜೊತೆಗೆ, ಈ ನಾಯಿಗಳಿಗೆ ಆಶ್ರಯ ತಾಣವನ್ನ ಕಟ್ಟುವ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆ(PWD)ಗೆ ನೀಡಲಾಗಿದೆ. ಅದರ ಖರ್ಚು ವೆಚ್ಚ ಎಲ್ಲವೂ ಸರಕಾರ ಭರಿಸಲಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಫೆ.27ರಿಂದ ಮಾ.3ರವರೆಗೆ ವಿಧಾನಸೌಧದಲ್ಲಿ ಪುಸ್ತಕ ಮೇಳ: ಸಾರ್ವಜನಿಕರಿಗೆ ಮುಕ್ತ ಅವಕಾಶ!
ಕರ್ನಾಟಕ ಬಜೆಟ್ ಅಧಿವೇಶನದ ಬಗ್ಗೆ ಮಾತನಾಡಿ, ಮಾರ್ಚ್ 3ರಿಂದ ವಿಧಾನಸಭಾ ಅಧಿವೇಶನ ಆರಂಭವಾಗಲಿದೆ. ಮಾ.3ರಿಂದ ಮಾ.7ರವರೆಗೂ ರಾಜ್ಯಪಾಲಾರ ಭಾಷಣದ ಬಗ್ಗೆ ಚರ್ಚೆ ನಡೆಯಲಿದೆ. ಮಾ.7ರಂದು ಬಜೆಟ್ ಮಂಡನೆ ನಡೆಯಲಿದೆ ಎಂದು ತಿಳಿಸಿದರು. ಜೊತೆಗೆ, ಬೆಳಗಾವಿನಲ್ಲಿ ಮರಾಠಿ ಸಂಘಟನೆಗಳ ಪುಂಡಾಟಿಕೆ ವಿಚಾರದ ಬಗ್ಗೆ ಮಾತನಾಡಿ, ಎಲ್ಲ ಭಾಷೆಗಳೂ ಕೂಡ ದೇಶದ ಒಗ್ಗಟ್ಟಿಗೆ ಕಾರಣವಾಗಬೇಕು. ಯಾವುದೇ ಭಾಷೆಯ ಅಭಿಮಾನ ಬಿಕ್ಕಟ್ಟಿಗೆ ಕಾರಣವಾಗಬಾರದು. ಯಾರೋ ಒಂದಿಬ್ಬರು ಮಾಡಿದ ತಪ್ಪಿಗೆ ದ್ವೇಷ ಹರಡುವುದು ಸರಿಯಲ್ಲ . ಬೆಳಗಾಂ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಪರಸ್ಪರ ಮಾತಿಗೆ ಮಾತು ಬೆಳೆದು ವೈಯುಕ್ತಿಕ ಕಾರಣದಿಂದ ಸಂಘರ್ಷ ಆಗಿರಬಹುದು. ಈ ವಿಚಾರದಲ್ಲಿ ರಾಜಕೀಯ ಮಾಡೋದು ಸರಿಯಲ್ಲ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ