ದೇಗುಲಗಳಲ್ಲಿನ ಸ್ಥಗಿತವಾಗಿದ್ದ ಸೇವೆಗಳು ಶುರು : ಜಾತ್ರೆಗಿಲ್ಲ ಅವಕಾಶ

By Kannadaprabha NewsFirst Published Sep 2, 2020, 7:34 AM IST
Highlights

ಕಳೆದ ಐದು ತಿಂಗಳಿನಿಂದ ಬಂದ್ ಆಗಿದ್ದ ರಾಜ್ಯದ ದೇಗುಲಗಳು ಮತ್ತೆ ತೆರೆದಿವೆ. ಭಕ್ತರು ದೇಗುಲಗಳಿಗೆ ಭೇಟಿ ನೀಡಲು ಕರ್ನಾಟಕ ಸರ್ಕಾರ ಅವಕಾಶ ನೀಡಿದೆ.

 ಬೆಂಗಳೂರು (ಸೆ.02): ಕೋವಿಡ್‌-19 ಲಾಕ್‌ಡೌನ್‌ ನಿರ್ಬಂಧ ಸಡಿಲಿಕೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ಎಲ್ಲ ದೇವಾಲಯಗಳಲ್ಲಿ ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸ್‌ ಕ್ರಮ ಕೈಗೊಂಡು ತಕ್ಷಣದಿಂದ ಎಲ್ಲ ಸೇವೆಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಮಂಗಳವಾರ ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊರಡಿಸಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಪೂರ್ಣ ಜವಾಬ್ದಾರಿ ಮೇರೆಗೆ ಸೇವೆಗಳನ್ನು ಪ್ರಾರಂಭಿಸುವಂತೆ ತಿಳಿಸಿದೆ.

ದೇವಾಲಯಗಳ ಸಂಪ್ರದಾಯಗಳಿಗೆ ಅನುಗುಣವಾಗಿ ಈ ಹಿಂದೆ ನಡೆಸುತ್ತಿದ್ದ ಸೇವೆಗಳನ್ನು ಭಕ್ತರ ಸಂಖ್ಯೆ ಹಾಗೂ ಸ್ಥಳಾವಕಾಶದ ಲಭ್ಯತೆ ಆಧಾರದ ಮೇಲೆ ನಡೆಸಬಹುದು. ಸೇವೆಗಳ ಸಂಖ್ಯೆಗಳನ್ನು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಅಥವಾ ಆಡಳಿತಾಧಿಕಾರಿಗಳು ನಿರ್ವಹಿಸಬೇಕು. ಕೋವಿಡ್‌-19 ಹರಡದಂತೆ ಹಾಲಿ ಮಾರ್ಗಸೂಚಿಗಳಿಗೆ ಒಳಪಟ್ಟು ಭಕ್ತಾದಿಗಳು ಸೇವೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು.

ಉಡುಪಿ ಸ್ವರ್ಣನದಿಯಲ್ಲಿ ಸಿಕ್ಕಿದ್ದು ಫ್ಲಿಪ್ ಕಾರ್ಟ್ ವಿಗ್ರಹವೇ?.

ದೇವಾಲಯಗಳಲ್ಲಿ ಜಾತ್ರಾ ಮಹೋತ್ಸವ, ಬ್ರಹ್ಮ ರಥೋತ್ಸವ ಮುಂತಾದ ವಿಶೇಷ ಉತ್ಸವ ನಡೆಸುವುದನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಈ ಉತ್ಸವಗಳನ್ನು ನಿಲ್ಲಿಸಲು ಸಂಪ್ರದಾಯವಿಲ್ಲದ ದೇವಾಲಯಗಳಲ್ಲಿ ಜಾತ್ರಾ ಮಹೋತ್ಸವ ಮುಂತಾದ ವಿಶೇಷ ಉತ್ಸವಗಳನ್ನು ದೇವಾಲಯದ ಆಗಮಿಕರು ಅಥವಾ ಅರ್ಚಕರು ಇಲ್ಲವೇ ತಂತ್ರಿಗಳು, ಸಿಬ್ಬಂದಿಗಳು ಸಾಂಕೇತಿಕವಾಗಿ ಹೋಮಾದಿಗಳು, ಪ್ರಾಯಶ್ಚಿತ್ತಾದಿಗಳನ್ನು ನಡೆಸಿ ಕೇವಲ ಉತ್ಸವಗಳನ್ನು ದೇವಾಲಯದ ಆವರಣದೊಳಗೆ ಭಕ್ತಾಧಿಗಳು, ಸಾರ್ವಜನಿಕರ ಸಂದಣಿ ಇಲ್ಲದಂತೆ ನಡೆಸಿ ಪೂರ್ಣಗೊಳಿಸಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

ದೇವಾಲಯಗಳಲ್ಲಿ ಅಂತರ ಕಾಪಾಡುವ ಹಾಗೂ ಸ್ಯಾನಿಟೈಸೇಶನ್‌ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ಸಂಬಂಧಪಟ್ಟಉಪವಿಭಾಗಾಧಿಕಾರಿಗಳು ಅಥವಾ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಖಾತರಿಪಡಿಸಿಕೊಳ್ಳಬೇಕು. ಒಂದು ವೇಳೆ ನಿರ್ದೇಶನಗಳ ಉಲ್ಲಂಘನೆ ಕಂಡುಬಂದಲ್ಲಿ ಧಾರ್ಮಿಕ ದತ್ತಿ ಆಯುಕ್ತರಿಗೆ ವರದಿ ಸಲ್ಲಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

click me!