6-8ನೇ ಕ್ಲಾಸ್‌ ಆರಂಭಕ್ಕೆ ಇಂದು ಸರ್ಕಾರದ ಅಸ್ತು?

By Suvarna NewsFirst Published Aug 30, 2021, 9:21 AM IST
Highlights

* ಇಂದಿನ ಸಭೆಯ ನಂತರ ಸಿಎಂ ಘೋಷಣೆ ಸಾಧ್ಯತೆ

* 6-8ನೇ ಕ್ಲಾಸ್‌ ಆರಂಭಕ್ಕೆ ಇಂದು ಸರ್ಕಾರದ ಅಸ್ತು?

* 1ರಿಂದ 5ನೇ ಕ್ಲಾಸ್‌ಗೆ ಭೌತಿಕ ತರಗತಿ ಈಗಲೇ ಇಲ್ಲ

ಬೆಂಗಳೂರು(ಆ.30): ರಾಜ್ಯ ಸರ್ಕಾರ ಸೆಪ್ಟೆಂಬರ್‌ ಆರಂಭದಿಂದ 6ರಿಂದ 8ನೇ ತರಗತಿ ಮಕ್ಕಳಿಗೂ ಶಾಲೆಗಳನ್ನು ಆರಂಭಿಸಲು ಮುಂದಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯುವ ಆರೋಗ್ಯ ಇಲಾಖೆ, ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸಭೆ ಬಳಿಕ ಈ ಸಂಬಂಧ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ.

ಸದ್ಯ 6ರಿಂದ 8ನೇ ತರಗತಿ ಆರಂಭಿಸಲು ಅನುಮತಿ ನೀಡಿದರೂ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಸದ್ಯಕ್ಕೆ ಶಾಲೆ ಆರಂಭಿಸುವ ಸಾಧ್ಯತೆ ಇಲ್ಲ. ಹಾಗಾಗಿ ತಜ್ಞರು, ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಹಾಗೂ ಆರೋಗ್ಯ ಇಲಾಖೆ ಸಲಹೆ ಪಡೆದು ಈ ಐದು ತರಗತಿಗಳನ್ನು ಎಂದಿನಿಂದ ಆರಂಭಿಸಬೇಕು ಎಂಬ ಬಗ್ಗೆ ನಿರ್ಧರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 6ರಿಂದ 8ನೇ ತರಗತಿ ಮಕ್ಕಳಿಗೆ ಶಾಲೆಗಳನ್ನು ಆರಂಭಿಸಲು ಅಗತ್ಯ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ. ಸೋಮವಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯ ಪಡೆಯುವುದಷ್ಟೇ ಬಾಕಿ ಇದೆ. ಈಗಾಗಲೇ ತಜ್ಞರು, ಸಮಿತಿ ಸದಸ್ಯರು ಪ್ರಾಥಮಿಕ ತರಗತಿ ಆರಂಭಿಸಬಹುದೆಂದು ಈ ಹಿಂದೆಯೇ ತಿಳಿಸಿರುವುದರಿಂದ ಸಭೆಯಲ್ಲಿ ಒಪ್ಪಿಗೆ ಸಿಗುವುದು ಬಹುತೇಕ ಖಚಿತ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮೂರನೇ ಅಲೆಯ ಆತಂಕದ ನಡುವೆಯೇ ಮೊದಲ ಹಂತದಲ್ಲಿ ಜು.26ರಿಂದ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್‌ ಸೇರಿದಂತೆ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಕಾಲೇಜುಗಳನ್ನು ಸರ್ಕಾರ ಆರಂಭಿಸಿತ್ತು. ಇದಾದ ಬಳಿಕ ಕಳೆದ ಆ.23ರಿಂದ 9ರಿಂದ 12ನೇ ತರಗತಿ ಮಕ್ಕಳಿಗೂ ಭೌತಿಕ ತರಗತಿ ಆರಂಭಿಸಿದ್ದು ಈ ಎಲ್ಲಾ ತರಗತಿಗಳು ಇದುವರೆಗೂ ಸುಸೂತ್ರವಾಗಿ ನಡೆಯುತ್ತಿವೆ. ಸದ್ಯ ಕೋವಿಡ್‌ ಮೂರನೇ ಅಲೆಯ ಮುನ್ಸೂಚನೆ ಕಂಡು ಬರದ ಕಾರಣ ಮುಂದಿನ ಹಂತದಲ್ಲಿ ಶೀಘ್ರದಲ್ಲೇ 6ರಿಂದ 8ನೇ ತರಗತಿ ಆರಂಭಿಸಲು ಮುಂದಾಗಿದೆ.

1-8 ಕ್ಲಾಸ್‌ ಈಗಲೇ ಆರಂಭಿಸಿ: ರುಪ್ಸಾ

ಸರ್ಕಾರ ಈಗಾಗಲೇ ಆರಂಭಿಸಿರುವ 9ರಿಂದ 12ನೇ ತರಗತಿ ಭೌತಿಕ ಪಾಠಗಳು ಸುಸೂತ್ರವಾಗಿ ನಡೆಯುತ್ತಿದ್ದು ಯಾವುದೇ ಸಮಸ್ಯೆಗಳಾಗಿಲ್ಲ. ಹಾಗಾಗಿ ಸರ್ಕಾರ ಕೂಡಲೇ 1ರಿಂದ 8ನೇ ತರಗತಿ ಮಕ್ಕಳಿಗೂ ಭೌತಿಕ ತರಗತಿ ಆರಂಭಿಸಬೇಕೆಂದು ನೋಂದಾಯಿತ ಅನುದಾನರಹಿತ ಖಾಸಗಿ ಶಾಲಾ ಸಂಘಟನೆಗಳ ಒಕ್ಕೂಟ (ರುಪ್ಸಾ) ಕರ್ನಾಟಕ ಒತ್ತಾಯಿಸಿದೆ.

ಸುಪ್ರೀಂ ಕೋರ್ಟ್‌ ಕೂಡ ಮಕ್ಕಳಲ್ಲಿ ಅಪೌಷ್ಟಿಕತೆ ಎದುರಾಗುವುದನ್ನು ತಪ್ಪಿಸಲು ಅಂಗನವಾಡಿ ಸೇರಿದಂತೆ ಪೂರ್ವ ಪ್ರಾಥಮಿಕ ಮಕ್ಕಳಿಗೆ ಸೂಕ್ತ ಆಹಾರ ಪೂರೈಕೆ ಜತೆಗೆ ಕಲಿಕೆಗೂ ಯೋಜನೆ ರೂಪಿಸಲು ನಿರ್ದೇಶನ ನೀಡಿದೆ. ಹಾಗಾಗಿ ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಅನುಸರಿಸಿ ಎಲ್ಲ ಹಂತದ ಶಾಲಾ ಮಕ್ಕಳಿಗೂ ತಕ್ಷಣವೇ ಭೌತಿಕ ತರಗತಿ ಆರಂಭಿಸಬೇಕೆಂದು ರುಪ್ಸಾ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಕೋರಿದ್ದಾರೆ.

click me!