ಕೆಎಸ್ಸಾರ್ಟಿಸಿ ನೌಕರರಿಗೆ ಬಂಪರ್ : ಸರ್ಕಾರಿ ನೌಕರರ ಸ್ಥಾನ?

By Kannadaprabha NewsFirst Published Oct 16, 2019, 8:36 AM IST
Highlights

ರಸ್ತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸುವ ಒತ್ತಾಯದ ಕೂಗಿಗೆ ರಾಜ್ಯ ಸರ್ಕಾರ ಕೊನೆಗೂ ಕಿವಿಗೊಟ್ಟಿದೆ. ಈ ಸಂಬಂಧ ಸಾಧಕ ಬಾಧಕ ಪರಿಶೀಲನೆ ತಂಡ ರಚಿಸಿದೆ. 

ಬೆಂಗಳೂರು [ಅ.16]: ರಾಜ್ಯ ರಸ್ತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸುವ ಒತ್ತಾಯದ ಕೂಗಿಗೆ ರಾಜ್ಯ ಸರ್ಕಾರ ಕೊನೆಗೂ ಕಿವಿಗೊಟ್ಟಿದೆ. ನಾಲ್ಕು ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಸಂಬಂಧ ಸಾಧಕ-ಬಾಧಕ ಪರಿಶೀಲಿಸಿ ವರದಿ ನೀಡುವಂತೆ ರಾಜ್ಯ ಸರ್ಕಾರ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ 8 ಸದಸ್ಯರೊಳಗೊಂಡ ಸಮಿತಿ ರಚಿಸಿದೆ.

ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ನೌಕರರು ಹಾಗೂ ಜನಪ್ರತಿನಿಧಿಗಳಿಂದ ಮನವಿಗಳು ಬಂದಿವೆ. ಹಾಗಾಗಿ ಸರ್ಕಾರಿ ನೌಕರರೆಂದು ಪರಿಗಣಿಸುವ ಕುರಿತು ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಸೂಕ್ತ ಶಿಫಾರಸುಗಳನ್ನು ವರದಿ ನೀಡುವಂತೆ ಈ ಸಮಿತಿಗೆ ಸೂಚಿಸಲಾಗಿದೆ. ಕೆಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಈ ಸಮಿತಿಯ ಅಧ್ಯಕ್ಷರಾಗಿದ್ದು, ಸದಸ್ಯರಾಗಿ ಬಿಎಂಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಎನ್‌ಇಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕೆಎಸ್‌ಆರ್‌ಟಿಸಿಯ ಸಿಬ್ಬಂದಿ ಮತ್ತು ಪರಿಸರ ವಿಭಾಗ ನಿರ್ದೇಶಕ ಇದ್ದಾರೆ. ಅಂತೆಯೆ ಕೆಎಸ್‌ಆರ್‌ಟಿಸಿಯ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ, ಮುಖ್ಯ ಕಾನೂನಾಧಿಕಾರಿ ಸಹ ಸದಸ್ಯರಾಗಿದ್ದಾರೆ. ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಸಮಿತಿಯ ಸಂಚಾಲಕರಾಗಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಲವು ವರ್ಷಗಳಿಂದ ನಾಲ್ಕು ಸಾರಿಗೆ ನಿಗಮಗಳ ನೌಕರರು ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಸರ್ಕಾರಕ್ಕೆ ಮನವಿಗಳನ್ನು ನೀಡಿದ್ದರು. ಇತ್ತೀಚೆಗೆ ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿ ಸಾರಿಗೆ ನೌಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಈ ಕೂಗು ಮುನ್ನಲೆಗೆ ಬಂದಿತು. ಸಾರಿಗೆ ನೌಕರರು ಪ್ರತಿಭಟನೆ, ಧರಣಿ, ಪತ್ರ ಚಳವಳಿ ಹಾಗೂ ಸಹಿ ಸಂಗ್ರಹ ಅಭಿಯಾನದ ಮೂಲಕ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಇದರ ಜತೆಗೆ ಸಾರಿಗೆ ಸಚಿವರು, ಶಾಸಕರು, ಮಂತ್ರಿಗಳು ಹಾಗೂ ಮುಖ್ಯಮಂತ್ರಿಗೆ ಹಲವು ಬಾರಿ ಮನವಿ ಮಾಡಿದ್ದರು. ಸರ್ಕಾರ ಸ್ಪಂದಿಸದಿದ್ದರೆ ಸೇವೆ ಸ್ಥಗಿತಗೊಳಿಸಿ ಮುಷ್ಕರಕ್ಕೆ ಇಳಿಯಲು ಸಿದ್ಧತೆಯಲ್ಲಿ ತೊಡಗಿದ್ದರು. ಇದರ ಬೆನ್ನಲೇ ರಾಜ್ಯ ಸರ್ಕಾರ ಬೇಡಿಕೆಯ ಸಾಧಕ-ಬಾಧಕ ಅಧ್ಯಯನ ಮಾಡಿ ವರದಿ ನೀಡಲು ಸಮಿತಿ ರಚಿಸಿದೆ.

click me!