ಸರ್ಕಾರದ ಖಜಾನೆ ಖಾಲಿ, ಹೊಸ ಸಾಲಕ್ಕೂ ಅರ್ಹತೆಯಿಲ್ಲ: ವಿತ್ತ ಇಲಾಖೆ ಪತ್ರ ತೋರಿಸಿದ ಆರ್.ಅಶೋಕ್

Sathish Kumar KH   | Kannada Prabha
Published : Sep 23, 2026, 07:35 AM IST
DK Shivakumar R Ashok

ಸಾರಾಂಶ

ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಸರ್ಕಾರದ ಬಳಿ ಹೊಸ ಯೋಜನೆಗಳಿಗೆ ಹಣವಿಲ್ಲ ಮತ್ತು ಸಾಲ ಪಡೆಯಲು ಅರ್ಹತೆಯಿಲ್ಲ ಎಂದು ಆರ್ಥಿಕ ಇಲಾಖೆ ಸ್ಪಷ್ಟಪಡಿಸಿದೆ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ. ಆದರೆ, ಜನರ ಹಿತದೃಷ್ಟಿಯಿಂದ 5 ಗ್ಯಾರಂಟಿಗಳನ್ನು ನೀಡಲಾಗಿದ್ದು, ಯಾವ ಯೋಜನೆ ಸೇರಿಸಬೇಕು ಎಂಬುದು ತಮಗೆ ತಿಳಿದಿದೆ ಎಂದು ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ವಿಧಾನಸಭೆ

‘ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಹೊಸ ಯೋಜನೆಗಳಿಗೆ ಅನುದಾನವಿಲ್ಲ, ಹೊಸ ಸಾಲ ಪಡೆಯಲು ಅರ್ಹತೆಯೂ ಇಲ್ಲ ಎಂಬುದಾಗಿ ಖುದ್ದು ಆರ್ಥಿಕ ಇಲಾಖೆಯೇ ಸ್ಪಷ್ಟಪಡಿಸಿದೆ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ತಿಳಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಬರ ಸಮಸ್ಯೆಗಳ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರ್ಥಿಕ ಸಂಕಷ್ಟದ ಬಗ್ಗೆ ಇದೇ ತಿಂಗಳ 17ರಂದು ಆರ್ಥಿಕ ಇಲಾಖೆ ಬರೆದ ಪತ್ರ ತೋರಿಸಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮಂಗಳೂರಿಗೆ ಹೋಗಿ ಸಚಿವ ಸಂಪುಟ ಸಭೆ ನಡೆಸುವುದಕ್ಕೆ ಮುನ್ನವೇ ಈ ಪತ್ರ ಬರೆಯಲಾಗಿದೆ ಎಂದರು.

ರಾಜ್ಯದಲ್ಲಿ ಮಳೆ ಕೊರತೆಯಿಂದ ಭೀಕರ ಬರ ಬಂದಿದ್ದರೆ ಸರ್ಕಾರದಲ್ಲಿ ಹಣಕ್ಕೆ ಬರ ಉಂಟಾಗಿದೆ. ಆರ್ಥಿಕ ಇಲಾಖೆಯೇ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದೆ. ಆರ್ಥಿಕ ಇಲಾಖೆಯೇ ತನ್ನ ಪತ್ರದಲ್ಲಿ ಸರ್ಕಾರದ ಅಳಿದುಳಿದ ಮಾನ ಮರ್ಯಾದೆ ಕಳೆದಿದೆ. ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸುವ ಮುನ್ನವೇ ಹೊಸ ಯೋಜನೆಗಳಿಗೆ ಹಣವಿಲ್ಲ ಎಂದು ಸ್ಪಷ್ಟ ಅಭಿಪ್ರಾಯ ತಿಳಿಸಿದೆ. ಇದು ಸರ್ಕಾರದ ದಿವಾಳಿತನಕ್ಕೆ ಸಾಕ್ಷಿ ಎಂದು ಟೀಕಿಸಿದರು.

ರಾಜ್ಯದಲ್ಲಿ ಮಳೆ ಬರ, ಸರ್ಕಾರಕ್ಕೆ ಖಜಾನೆ ಖಾಲಿ ಬರ

ರಾಜ್ಯದಲ್ಲಿ ಬರಗಾಲ ಬಂದು ರೈತರು ಗುಳೆ ಹೋಗುತ್ತಿದ್ದಾರೆ. ಮತ್ತೊಂದೆಡೆ ಸರ್ಕಾರದ ಖಜಾನೆ ಖಾಲಿಯಾಗಿ ಆರ್ಥಿಕ ಬರ ಉಂಟಾಗಿದೆ. ನೈಸರ್ಗಿಕ ಬರಕ್ಕೆ ಪರಿಹಾರ ನೀಡಬೇಕೆಂದರೆ ಆರ್ಥಿಕ ಇಲಾಖೆಯಲ್ಲಿ ಬರ ಇರಬಾರದಲ್ಲವೇ ಎಂದು ಪ್ರಶ್ನಿಸಿದರು.

ಆರ್ಥಿಕ ಇಲಾಖೆಯು 1000 ಕೋಟಿ ರು. ಯೋಜನೆಗಳನ್ನು ಬಜೆಟ್‌ನಲ್ಲಿ ಸೇರಿಸಿಲ್ಲ. ಕಳೆದ ಬಜೆಟ್‌ನಲ್ಲಿ ಶೇ.2.95 ವಿತ್ತೀಯ ಕೊರತೆ ಉಂಟಾಗಿದೆ. ಆದರೆ ಎಫ್‌ಆರ್‌ಪಿಎಂ ಕಾಯ್ದೆಯಲ್ಲಿ ಶೇ.3 ರಷ್ಟು ಮಿತಿ ಇದೆ. ರಾಜಸ್ವದ ಕೊರತೆ 22,952 ಕೋಟಿ ರು. ಇದೆ. ಜಿಎಸ್‌ಡಿಪಿಗೆ ಹೋಲಿಸಿದರೆ ರಾಜ್ಯದ ಸಂಕುಚಿತ ಬಾಧ್ಯತೆಗಳು ಶೇ.24.94 ಕ್ಕೆ ತಲುಪಿದೆ. ಅದರ ಮಿತಿ ಶೇ.25 ಮೀರಬಾರದು ಎಂಬ ನಿಯಮವಿದೆ. ಹೀಗಾಗಿ ಹೊಸ ಸಾಲದ ಅವಕಾಶವಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದೆ ಎಂದು ಅಶೋಕ್‌ ಹೇಳಿದರು.

ಇದರ ಅರ್ಥ ತನ್ನ ಅಗತ್ಯತೆ ಪೂರೈಸಲು ಸಾಲ ಪಡೆಯುವ ಸಾಮರ್ಥ್ಯದ ಕರ್ನಾಟಕದ ಮಿತಿ ಪೂರ್ಣಗೊಂಡಿದೆ. ಅಂದರೆ ಇನ್ನು ಮುಂದೆ ಸಾಲ ಮಾಡಬಾರದು, ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರ್ಥ. ಅಂದರೆ ಹೊಸ ಸಾಲಕ್ಕೆ ಅರ್ಹತೆಯೇ ಇಲ್ಲ ಎಂದರ್ಥ ಎಂದು ಹೇಳಿದರು.

36 ಸಾವಿರ ಕೋಟಿ ರು. ಬಿಲ್ ಬಾಕಿ:

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 3 ಲಕ್ಷ ಕೋಟಿ ರು. ಸಾಲ ಮಾಡಿದ್ದು, ಅದರ ಬಡ್ಡಿ 30,000 ಕೋಟಿ ರು.ಗೂ ಹೆಚ್ಚಿದೆ. ಹೀಗಾಗಿ ನಾವು ಹೊಸ ಸಾಲ ಪಡೆಯಲು ಯೋಗ್ಯತೆ ಕಳೆದುಕೊಂಡಿದ್ದೇವೆ ಎಂದರ್ಥ. ರಾಜ್ಯ ಸರ್ಕಾರದಲ್ಲಿ 2 ಲಕ್ಷ ಕೋಟಿ ರು. ಕಾಮಗಾರಿಗಳ ಬಾಕಿ ಬಿಲ್‌ ಇದೆ. ಲೋಕೋಪಯೋಗಿ, ಜಲಸಂಪನ್ಮೂಲ ಸೇರಿದಂತೆ ನಾಲ್ಕು ಇಲಾಖೆಗಳ ಬಾಕಿ ಬಿಲ್‌ 36,136 ಕೋಟಿ ರು. ಇದೆ. ಮೊದಲ ಆರು ತಿಂಗಳಲ್ಲಿ 5,000 ಕೋಟಿ ರು. ಗೂ ಅಧಿಕ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಕರ್ನಾಟಕ ಈಗ ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿದೆ ಎಂದು ವಿವರಿಸಿದರು.

ಈ ಬಾರಿ ಜನರ ಸಮಸ್ಯೆ ಎದುರಿಸಲು ಹೆಚ್ಚು ಹಣ ಬೇಕಿದೆ. ಬರ ಪರಿಹಾರಕ್ಕೆ, ಕುಡಿಯುವ ನೀರಿಗೆ ಹಣ ಎಲ್ಲಿದೆ? ಹಣದ ಒಂದು ಭಾಗವನ್ನಾದರೂ ಒದಗಿಸಲು ಇತರೆ ಇಲಾಖೆಗಳಿಗೆ ಮೀಸಲಿಟ್ಟ ಹಣವನ್ನು ಕಡಿತ ಮಾಡಬೇಕಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಅಂದರೆ ದಲಿತರಿಗೆ ಸೇರಿದ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣವನ್ನು ಪಡೆಯಬೇಕಿದೆ ಎಂದರ್ಥ ಎಂದು ಅಶೋಕ್‌ ತಿಳಿಸಿದರು.

ಸಾರಿಗೆ ನಿಗಮ, ನೀರಾವರಿ ನಿಗಮ, ವಿದ್ಯುತ್‌ ಕಂಪನಿಗಳು ಹಣಕಾಸಿನ ತೀವ್ರ ತೊಂದರೆ ಎದುರಿಸುತ್ತಿವೆ. ಸಹಾಯಧನ ಬಾಕಿ ಉಳಿದಿಲ್ಲವೆಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ. ಆದರೆ ಸಹಾಯಧನವನ್ನು ಇಂಧನ ಇಲಾಖೆಗೆ ನೀಡಬೇಕಿದೆ ಎಂದು ಆರ್ಥಿಕ ಇಲಾಖೆ ಹೇಳಿದೆ. ಹಣ ಮಾತ್ರವಲ್ಲ, ಈ ಸರ್ಕಾರಕ್ಕೆ ಮಾಹಿತಿಯ ಕೊರತೆ ಕೂಡ ಇದೆ. ಹೊಸ ಯೋಜನೆಗಳಿಗೆ ಹಣಕಾಸು ಒದಗಿಸುವುದು ಕಷ್ಟವಾಗಬಹುದು. ಆದ್ದರಿಂದ ಸಂಪನ್ಮೂಲ ಅಂತಿಮಗೊಳಿಸುವವರೆಗೂ ಕಾಯುವುದು ಒಳಿತು ಎನ್ನಲಾಗಿದೆ ಎಂದರು.

ಯಾವ ಯೋಜನೆ ಸೇರಿಸ್ಬೇಕು ಅಂತ ನನಗೆ ಗೊತ್ತಿದೆ

ಸರ್ಕಾರದ ಹಿತಕ್ಕಾಗಿ ಆರ್ಥಿಕ ಸಲಹೆ ನೀಡಿದೆ. ಹಣಕಾಸು ಸಚಿವನಾಗಿ ನನಗೆ ಯಾವ ಯೋಜನೆ ನಿಲ್ಲಿಸಬೇಕು, ಯಾವ ಯೋಜನೆ ಸೇರಿಸಬೇಕು ಎನ್ನುವುದು ತಿಳಿದಿದೆ. ಎಲ್ಲ ಬೆಲೆ ಗಗನಕ್ಕೇರಿದೆ. ಜನರ ಆದಾಯ ಕುಸಿದಿದೆ. ಹಾಗಾಗಿ 5 ಗ್ಯಾರಂಟಿ ಕೊಟ್ಟಿದ್ದೇವೆ. ರೈತರು, ಜನರ ಬದುಕಿಗೆ ನೆರವಾಗುತ್ತಿದ್ದೇವೆ. ಇಷ್ಟರ ನಡುವೆಯೂ ಕರ್ನಾಟಕ ಅಭಿವೃದ್ಧಿಯಲ್ಲಿ ಮುಂದಿದೆ ಎಂದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಸರ್ಕಾರದ ಖಜಾನೆ ಖಾಲಿ, ಹೊಸ ಸಾಲಕ್ಕೂ ಅರ್ಹತೆಯಿಲ್ಲ - ವಿತ್ತ ಇಲಾಖೆ ಪತ್ರ ತೋರಿಸಿದ ಆರ್.ಅಶೋಕ್
ಪ್ರಯಾಣಿಕರೇ ಗಮನಿಸಿ: ರೈಲು ಸಂಚಾರದಲ್ಲಿ ಮಹತ್ವದ ಬದಲಾವಣೆ, ಈ ಮಾರ್ಗದಲ್ಲಿ 35 ದಿನ ಟ್ರೈನ್ ರದ್ದು!