ಸಾರಿಗೆ ನೌಕರರಿಗೆ ಸರ್ಕಾರದ ಸಿಹಿ ಸುದ್ದಿ : ಸಿಬ್ಬಂದಿ ಮಕ್ಕಳ ಮನವಿಗೆ ಕರಗಿದ BSY

By Kannadaprabha NewsFirst Published Nov 18, 2020, 9:36 AM IST
Highlights

ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ಕರ್ನಾಟಕ ಸರ್ಕಾರ ಗುಡ್ ನ್ಯೂಸ್ ನೀಡಿದೆ. ನೌಕರರ ಮಕ್ಕಳ ಮನವಿಗೆ ಸರ್ಕಾರ ಸ್ಪಂದಿಸಿದೆ. 

ಬೆಂಗಳೂರು (ನ.18):  ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರಿಗೆ ಮೂರು ತಿಂಗಳ ವೇತನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

"

ಸಾರಿಗೆ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಸೋಮವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಾರಿಗೆ ನೌಕರರಿಗೆ ಮೂರು ತಿಂಗಳ ವೇತನ ಬಿಡುಗಡೆಗೆ ಮನವಿ ಮಾಡಿದ್ದರು. ಮನವಿ ಸ್ಪಂದಿಸಿದ ಮುಖ್ಯಮಂತ್ರಿಗಳು ಅಕ್ಟೋಬರ್‌, ನವೆಂಬರ್‌ ಹಾಗೂ ಡಿಸೆಂಬರ್‌ ತಿಂಗಳ ವೇತನ 634.50 ಕೋಟಿ ರು. ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಿದರು.

'ಸಿಎಂ ಅಂಕಲ್ ಅಪ್ಪನಿಗೆ ಸಂಬಳ ಕೊಡಿ ಪ್ಲೀಸ್, ಮನೆಯಲ್ಲಿ ಹಬ್ಬವಿಲ್ಲ' ...

ರಾಜ್ಯ ಸರ್ಕಾರ ಮೂರು ತಿಂಗಳ ವೇತನ 634.50 ಕೋಟಿ ರು. (ಶೇ.75) ಬಿಡುಗಡೆ ಮಾಡಿದರೆ, ಉಳಿದ ಶೇ.25ರಷ್ಟನ್ನು ಆಯಾ ಸಾರಿಗೆ ನಿಗಮಗಳು ತಮ್ಮದೇ ಸಂಪನ್ಮೂಲ ಬಳಸಿಕೊಂಡು ಭರಿಸಲಿವೆ. ಮುಖ್ಯಮಂತ್ರಿಗಳ ಸ್ಪಂದನೆಯಿಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ನಿಗಮಗಳ ಸುಮಾರು 1.30 ಲಕ್ಷ ನೌಕರರಿಗೆ ವೇತನ ಪಾವತಿ ಸಾಧ್ಯವಾಗಲಿದೆ. ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳಿಗೆ ಸಾರಿಗೆ ನಿಗಮಗಳ ಪರವಾಗಿ ಕೃತಜ್ಞತೆ ಅರ್ಪಿಸುವುದಾಗಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಕೊರೋನಾದಿಂದ ಆದಾಯ ಇಲ್ಲದೆ ಸಾರಿಗೆ ನಿಗಮಗಳು ತೀವ್ರ ಸಂಕಷ್ಟಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ನವೆಂಬರ್‌ ಅರ್ಧ ತಿಂಗಳು ಕಳೆದರೂ ನೌಕರರಿಗೆ ಅಕ್ಟೋಬರ್‌ ತಿಂಗಳ ವೇತನ ಪಾವತಿ ಮಾಡಿರಲಿಲ್ಲ. ದೀಪಾವಳಿ ಆಚರಿಸಲು ವೇತನ ಇಲ್ಲ ಎಂದು ಸಾರಿಗೆ ನೌಕರರು ಬೇಸರ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದರು. ನೌಕರರ ಮಕ್ಕಳು ಸಹ ತಮ್ಮ ತಂದೆಯ ವೇತನ ಬಿಡುಗಡೆ ಮಾಡಿ ಎಂದು ಆಗ್ರಹಿಸಿದ್ದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು.

click me!