ರಾಜ್ಯದಲ್ಲಿ ಕೊರೋನಾ ಕೇಸ್‌ ಭಾರೀ ಇಳಿಕೆ! : 23 ಜಿಲ್ಲೆಗಳಲ್ಲಿ ಶೂನ್ಯ ಸಾವು

By Kannadaprabha NewsFirst Published Nov 18, 2020, 8:56 AM IST
Highlights

ರಾಜ್ಯದಲ್ಲಿ ಮಹಾಮಾರಿ ಕೊರೊನಾ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಹಲವು ಜಿಲ್ಲೆಗಳಲ್ಲಿ ಸಾವಿನ ಸಂಖ್ಯೆ ಶೂನ್ಯವಾಗಿದೆ

ಬೆಂಗಳೂರು (ನ.18):  ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ತಗ್ಗಿದ್ದು, ಕಳೆದ ಮೂರು ದಿನಗಳಿಂದ ಒಂದೂವರೆ ಸಾವಿರದ ಆಸುಪಾಸಿನಲ್ಲೇ ಹೊಸ ಸೋಂಕು ವರದಿಯಾಗಿವೆ. ರಾಜ್ಯದಲ್ಲಿ ಮಂಗಳವಾರ 1,336 ಹೊಸ ಪ್ರಕರಣ ವರದಿಯಾಗಿದ್ದರೆ, ಸೋಮವಾರ (ನ.16) 1157 ಪ್ರಕರಣ ಮಾತ್ರ ದಾಖಲಾಗಿತ್ತು. ಇನ್ನು ಭಾನುವಾರ (ನ.15) ದಂದು 1565 ಪ್ರಕರಣ ಪತ್ತೆಯಾಗಿದ್ದವು.

ಐದು ತಿಂಗಳ ಹಿಂದೆ ಅಂದರೆ ಕಳೆದ ಜುಲೈ ಮೊದಲ ವಾರದಲ್ಲಿ ದಿನವೊಂದರಲ್ಲಿ ಸೋಂಕು ಪ್ರಕರಣಗಳು ಒಂದೂವರೆ ಸಾವಿರದ ಆಸುಪಾಸಿನಲ್ಲಿ ದಾಖಲಾಗಿದ್ದವು. ಇದಾಗಿ ಐದು ತಿಂಗಳ ಬಳಿಕ ಸೋಂಕು ಪ್ರಕರಣಗಳ ಸಂಖ್ಯೆ ಒಂದೂವರೆ ಸಾವಿರಕ್ಕಿಂತ ಕಡಿಮೆಗೆ ಕುಸಿದಿದೆ. ಇದು ರಾಜ್ಯದಲ್ಲಿ ಕೊರೋನಾ ಸೋಂಕು ಹರಡುವಿಕೆ ನಿಧಾನಕ್ಕೆ ನಿಯಂತ್ರಣಕ್ಕೆ ಬರುತ್ತಿರುವುದನ್ನು ಸೂಚಿಸುತ್ತದೆ ಎನ್ನುತ್ತಾರೆ ತಜ್ಞರು.

ಮಂಗಳವಾರ ವರದಿಯಾಗಿರುವ 1,336 ಹೊಸ ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಈವರೆಗೆ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 8,64,140ಕ್ಕೆ ಏರಿಕೆಯಾಗಿದೆ. ಅಂತೆಯೆ ಒಂದೇ ದಿನ 2,100 ಮಂದಿ ಗುಣಮುಖರಾಗಿದ್ದು, ಈವರೆಗೆ ಗುಣಮುಖರಾದವ ಒಟ್ಟು ಸಂಖ್ಯೆ 8,27,241ಕ್ಕೆ ಏರಿಕೆಯಾಗಿದೆ. ಈ ನಡುವೆ 16 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 11,557ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇನ್ನೂ 25,323 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ 693 ಮಂದಿ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೋವ್ಯಾಕ್ಸಿನ್ 3ನೇ ಹಂತದ ಪ್ರಯೋಗದ ನಡುವೆ ಭಾರತ್ ಬಯೋಕೆಟ್‌ನಿಂದ ಮತ್ತೊಂದು ಸಿಹಿ ಸುದ್ದಿ!...

ಮಂಗಳವಾರ ರಾಜ್ಯದಲ್ಲಿ 13,392 ಮಂದಿಗೆ ರಾರ‍ಯಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ ಹಾಗೂ 61,992 ಮಂದಿಗೆ ಆರ್‌ಟಿಪಿಸಿಆರ್‌ ಟೆಸ್ಟ್‌ ಸೇರಿದಂತೆ ಒಟ್ಟು 75,384 ಮಂದಿಯನ್ನು ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಮೂಲಕ ಈವರೆಗೆ ರಾಜ್ಯದಲ್ಲಿ ಒಟ್ಟು ಕೊರೋನಾ ಪರೀಕ್ಷೆಗಳ ಸಂಖ್ಯೆ 96,44,009ಕ್ಕೆ ಏರಿಕೆಯಾಗಿದೆ.

23 ಜಿಲ್ಲೆಗಳಲ್ಲಿ ಸಾವು ಶೂನ್ಯ: ರಾಜ್ಯದ 30 ಜಿಲ್ಲೆಗಳ ಪೈಕಿ 23 ಜಿಲ್ಲೆಗಳಲ್ಲಿ ಒಂದೇ ಒಂದು ಸೋಂಕಿತರ ಸಾವಿನ ಪ್ರಕರಣ ವರದಿಯಾಗಿಲ್ಲ. ಉಳಿದಂತೆ ಬೆಂಗಳೂರು ನಗರ 9, ದಕ್ಷಿಣ ಕನ್ನಡ 2, ಬಳ್ಳಾರಿ, ಧಾರವಾಡ, ರಾಯಚೂರು, ತುಮಕೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ 1 ಸೋಂಕಿತರ ಸಾವಿನ ಪ್ರಕರಣ ವದಿಯಾಗಿದೆ. ರಾಜ್ಯದಲ್ಲಿ ಕೊರೋನಾ ಸೋಂಕು ಪರೀಕ್ಷೆಯ ಪೈಕಿ ಪಾಸಿಟಿವ್‌ ಪ್ರಮಾಣ ಶೇ.1.77ರಷ್ಟಿದೆ. ಸಾವಿನ ಪ್ರಮಾಣ ಶೇ.1.99ರಷ್ಟಿದೆ.

click me!