ಮನೆ ಖರೀದಿದಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ

By Kannadaprabha News  |  First Published Sep 4, 2021, 7:41 AM IST
  • ನಿವೇಶನ, ಮನೆ ಖರೀದಿದಾರರಿಗೆ ಸರ್ಕಾರ ಸಿಹಿ ಸುದ್ದಿ ನೀಡಲು ಮುಂದಾಗಿದೆ
  • ಕೋವಿಡ್‌ನಿಂದಾಗಿ ಆರ್ಥಿಕ ಚಟುವಟಿಕೆಗಳು ಕುಸಿದಿರುವ ಕಾರಣ ರಾಜ್ಯದಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರವನ್ನು ಪರಿಷ್ಕರಣೆ ಮಾಡಲು ತೀರ್ಮಾನ

 ಬೆಂಗಳೂರು (ಸೆ.04): ನಿವೇಶನ, ಮನೆ ಖರೀದಿದಾರರಿಗೆ ಸರ್ಕಾರ ಸಿಹಿ ಸುದ್ದಿ ನೀಡಲು ಮುಂದಾಗಿದ್ದು, ಕೋವಿಡ್‌ನಿಂದಾಗಿ ಆರ್ಥಿಕ ಚಟುವಟಿಕೆಗಳು ಕುಸಿದಿರುವ ಕಾರಣ ರಾಜ್ಯದಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರವನ್ನು ಪರಿಷ್ಕರಣೆ ಮಾಡಲು ತೀರ್ಮಾನಿಸಿದೆ.

ಡಿಸೆಂಬರ್‌ ತಿಂಗಳ ವೇಳೆಗೆ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಸಂಬಂಧ ವರದಿ ತಯಾರಿಸಲು ಅಧಿಕಾರಿಗಳಿಗೆ ಕಂದಾಯ ಸಚಿವ ಆರ್‌.ಅಶೋಕ್‌ ಸೂಚಿಸಿದ್ದಾರೆ.

Tap to resize

Latest Videos

ವಿಧಾನಸೌಧದಲ್ಲಿ ಶುಕ್ರವಾರ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‌ನಿಂದ ರಿಯಲ್‌ ಎಸ್ಟೇಟ್‌ ವ್ಯಾಪಾರದ ಮೇಲೆ ಭಾರಿ ಹೊಡೆತ ಬಿದ್ದಿದೆ. ರಾಜ್ಯದಲ್ಲಿ ಸ್ಥಿರಾಸ್ತಿ ನೋಂದಣಿ ಕುಸಿದಿದ್ದು, ಬಹಳಷ್ಟುಮಂದಿ ಜಿಪಿಎ ಪತ್ರಗಳ ಮೂಲಕ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಸ್ಥಿರಾಸ್ತಿಗಳ ನೋಂದಣಿಯ ಮಾರ್ಗಸೂಚಿ ದರ ಕಡಿಮೆ ಮಾಡುವಂತೆ ಹಲವು ಸಂಘ ಸಂಸ್ಥೆಗಳು ಮನವಿ ಮಾಡಿವೆ. ಹೀಗಾಗಿ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲು ತೀರ್ಮಾನಿಸಲಾಗಿದೆ. ಜನರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರು; ಆಸ್ತಿ ತೆರಿಗೆ ವಿನಾಯಿತಿ, ಸಚಿವ ಡಾ. ಸಿಎನ್ ಅಶ್ವತ್ಥನಾರಾಯಣ ಗುಡ್ ನ್ಯೂಸ್

ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಕೈಗಾರಿಕಾ ಕಾರಿಡಾರ್‌ಗಳ ಸುತ್ತಮುತ್ತಲಿನ ಪ್ರದೇಶದಲ್ಲಿನ ಆಸ್ತಿಗಳ ಮಾರ್ಗಸೂಚಿ ದರವನ್ನು ಹೆಚ್ಚಳ ಮಾಡಲಾಗುವುದು. ಆದರೆ, ಇತರೆಡೆಗಳಲ್ಲಿನ ಮಾರ್ಗಸೂಚಿ ದರವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ರಾಜ್ಯಾದ್ಯಂತ ಅಧ್ಯಯನ ನಡೆಸಿ ಡಿಸೆಂಬರ್‌ ವೇಳೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸರ್ವೇಯರ್‌ಗಳ ನೇಮಕ:

ರಾಜ್ಯದಲ್ಲಿ ಸರ್ವೇ ಕೆಲಸಗಳು 8-10 ತಿಂಗಳ ಕಾಲ ಸಮಯ ತೆಗೆದುಕೊಳ್ಳುತ್ತಿದೆ. ಸಿಬ್ಬಂದಿಯ ಕೊರತೆಯಿಂದಾಗಿ ಎರಡು ಲಕ್ಷಕ್ಕೂ ಹೆಚ್ಚು ಅರ್ಜಿಗಳು ಇತ್ಯರ್ಥವಾಗದೆ ಬಾಕಿ ಉಳಿದೆ. ಹೀಗಾಗಿ 820 ಸರ್ವೇಯರ್‌ಗಳನ್ನು ನೇಮಕ ಮಾಡಲು ಆದೇಶ ಹೊರಡಿಸಲಾಗಿದೆ. ಡಿಸೆಂಬರ್‌ ವೇಳೆಗೆ ಹೆಚ್ಚುವರಿಯಾಗಿ 600 ಸರ್ವೇಯರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಇದರಿಂದ ಬಾಕಿ ಉಳಿದಿರುವ ಅರ್ಜಿಗಳ ಇತ್ಯರ್ಥಕ್ಕೆ ಸಹಕಾರಿಯಾಗಲಿದೆ. 3-4 ತಿಂಗಳಲ್ಲಿ ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಕುರುಬರು, ಬಂಜಾರರು ನೆಲೆಸಿರುವ ಹಾಡಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ. ಇದರಿಂದ ಹಕ್ಕಿಪಿಕ್ಕಿ ಜನಾಂಗದವರು ವಸಲೆ ಹೋಗುವುದನ್ನು ತಪ್ಪಿಸಲು ಕಂದಾಯ ಗ್ರಾಮಗಳೆಂದು ಘೋಷಣೆ ಮಾಡಿ ಸೌಲಭ್ಯ ಕಲ್ಪಿಸಲಾಗುವುದು. ಅಲ್ಲದೇ, ಅವರಿಗೆ ಶಾಶ್ವತವಾಗಿ ನೆಲೆ ಕಲ್ಪಿಸಿದಂತಾಗಲಿದೆ ಎಂದು ತಿಳಿಸಿದರು.

ಗೈಡೆನ್ಸ್‌ ವ್ಯಾಲ್ಯು ಪರಿಷ್ಕರಣೆ ಏಕೆ?

ಕೋವಿಡ್‌ನಿಂದ ರಿಯಲ್‌ ಎಸ್ಟೇಟ್‌ ವ್ಯಾಪಾರದ ಮೇಲೆ ಭಾರಿ ಹೊಡೆತ ಬಿದ್ದಿದೆ. ರಾಜ್ಯದಲ್ಲಿ ಸ್ಥಿರಾಸ್ತಿ ನೋಂದಣಿ ಕುಸಿದಿದ್ದು, ಬಹಳಷ್ಟುಮಂದಿ ಜಿಪಿಎ ಪತ್ರಗಳ ಮೂಲಕ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಸ್ಥಿರಾಸ್ತಿಗಳ ನೋಂದಣಿಯ ಮಾರ್ಗಸೂಚಿ ದರ ಕಡಿಮೆ ಮಾಡುವಂತೆ ಹಲವು ಸಂಘ ಸಂಸ್ಥೆಗಳು ಮನವಿ ಮಾಡಿವೆ. ಹೀಗಾಗಿ ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲು ತೀರ್ಮಾನಿಸಲಾಗಿದೆ.

click me!