ಸದ್ಯದಲ್ಲೇ ಸಿದ್ದು ಹಿಂದ ಹೋರಾಟ| ಈಶ್ವರಪ್ಪ ಕುರುಬ ಹೋರಾಟ ಆಯ್ತು| ಕುರುಬರು, ಶೋಷಿತ ವರ್ಗಗಳ ಪರ 2 ತಿಂಗಳು ಸಿದ್ದರಾಮಯ್ಯ ಆಂದೋಲನ| 4 ಸಮಾವೇಶ, ಪ್ರಮುಖ ಜಿಲ್ಲೆಗಳಲ್ಲಿ ಹೋರಾಟ ನಡೆಸಲು ಸಿದ್ದು ಬಳಗ ಸಿದ್ಧತೆ| ಈಶ್ವರಪ್ಪಗೆ ಸಡ್ಡು: ಹಿಂದುಳಿದ ವರ್ಗಗಳ ನಾಯಕನನ್ನಾಗಿ ಸಿದ್ದು ಬಿಂಬಿಸಲೆತ್ನ| ಸಮಾವೇಶದ ಬಳಿಕ ಮೋದಿ ಭೇಟಿಯಾಗಿ ಮೀಸಲಿಗೆ ಮೊರೆ ಇಡಲೂ ಚಿಂತನೆ| ದಸಂಸ ಸೇರಿ ಹಲ ಸಂಘಟನೆ ಭಾಗಿ: ಒಂದು ವಾರದಿಂದ ಸಿದ್ದು ಟೀಂ ತಯಾರಿ
ಎಸ್.ಗಿರೀಶ್ ಬಾಬು
ಬೆಂಗಳೂರು(ಫೆ.09): ಕುರುಬ ಸಮುದಾಯದ ಪರಿಶಿಷ್ಟಪಂಗಡ (ಎಸ್‌ಟಿ) ಮೀಸಲಾತಿ ಹೋರಾಟ ಮಾಚ್‌ರ್‍ನಲ್ಲಿ ಮತ್ತೊಂದು ಮಜಲು ಮುಟ್ಟಲಿದ್ದು, ಈ ಹೋರಾಟದ ಅಖಾಡಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇರ ಪ್ರವೇಶ ಮಾಡಲಿದ್ದಾರೆ.
ಕುರುಬ ಸಮುದಾಯದ ಪ್ರಶ್ನಾತೀತ ನೇತಾರ ಎನಿಸಿರುವ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಸವಾಲು ಎಸೆಯುವಂತೆ ಸಚಿವ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಎಸ್ಟಿಹೋರಾಟ ಸಮಿತಿಯು ಇತ್ತೀಚೆಗೆ ಬೃಹತ್ ಕುರುಬ ಸಮಾವೇಶವನ್ನು ಆಯೋಜಿಸಿತ್ತು. ಇದಕ್ಕೆ ಪರೋಕ್ಷ ಉತ್ತರವೆಂಬಂತೆ, ಕರ್ನಾಟಕ ಪ್ರದೇಶ ಕುರುಬರ ಸಂಘದ ಆಶ್ರಯದಲ್ಲಿ ರಾಜ್ಯದ ನಾಲ್ಕು ವಿಭಾಗಗಳಲ್ಲಿ ನಾಲ್ಕು ಸಮಾವೇಶ ಮತ್ತು ಪ್ರಮುಖ ಜಿಲ್ಲೆಗಳಲ್ಲಿ ಬೃಹತ್ ಹೋರಾಟ ಆಯೋಜನೆಗೊಳ್ಳಲಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯ ನೇರವಾಗಿ ಪಾಲ್ಗೊಳ್ಳಲಿದ್ದಾರೆ!
ಅಂದಹಾಗೆ, ಈ ಹೋರಾಟ ಕುರುಬ ಜನಾಂಗವನ್ನು ಪರಿಶಿಷ್ಟಪಂಗಡಕ್ಕೆ ಸೇರಿಸುವ ಹಕ್ಕೊತ್ತಾಯಕ್ಕೆ ಸೀಮಿತವಾಗುವುದಿಲ್ಲ. ಇತರ ಶೋಷಿತ ಸಮುದಾಯಗಳಾದ ಉಪ್ಪಾರ, ನಾಯಕ, ಈಡಿಗ, ತಿಗಳ, ಕ್ಷೌರಿಕದಂತಹ ಜನಾಂಗಗಳಿಗೂ ಜನಸಂಖ್ಯೆ ಆಧಾರಿತ ಮೀಸಲಾತಿ ಕಲ್ಪಿಸಬೇಕು ಎಂಬ ಆಗ್ರಹವನ್ನೂ ಒಳಗೊಂಡಿರುತ್ತದೆ. ಒಟ್ಟಾರೆ, ಕುರುಬ ಸಮುದಾಯದ ನಾಯಕತ್ವಕ್ಕೆ ಸವಾಲು ಹಾಕಿದ ಈಶ್ವರಪ್ಪ ಅವರಿಗೆ ಸಿದ್ದರಾಮಯ್ಯ ಕುರುಬ ಸಮುದಾಯದ ಅವಿಚ್ಛಿನ್ನ ಬೆಂಬಲ ಹೊಂದಿರುವ ಹಿಂದುಳಿದ ವರ್ಗಗಳ ನೇತಾರ ಎಂದು ನಿರೂಪಿಸುವಂತೆ ಈ ಸಮಾವೇಶ ಆಯೋಜಿಸಲು ಸಿದ್ದರಾಮಯ್ಯ ಆಪ್ತ ಬಳಗ ಸಜ್ಜಾಗಿದೆ.
ಹೀಗಾಗಿ ಪ್ರದೇಶ ಕುರುಬ ಸಂಘ ಮಾತ್ರವಲ್ಲದೆ, ಹಿಂದುಳಿತ ಜಾತಿಗಳ ಒಕ್ಕೂಟ, ದಲಿತ ಸಂಘರ್ಷ ಸಮಿತಿಯಂತಹ ಸಂಘಟನೆಗಳು ಸಕ್ರಿಯವಾಗಿ ಪಾಲ್ಗೊಳ್ಳಲಿವೆ. ಈ ಸಮಾವೇಶಗಳ ಸಿದ್ಧತೆಗಾಗಿ ಸಿದ್ದರಾಮಯ್ಯ ಅವರ ಬೆಂಬಲಿಗ ಪಡೆ ಕಳೆದ ಒಂದು ವಾರದಿಂದ ಸರಣಿ ಸಭೆ ನಡೆಸಿದ್ದು, ಸಮಾವೇಶಗಳ ರೂಪರೇಷೆ ಸಿದ್ಧಪಡಿಸಿದೆ ಎಂದು ಮೂಲಗಳು ಹೇಳಿವೆ.
ಪ್ರಧಾನಿ ಭೇಟಿಗೂ ಸಿದ್ದು ಸಜ್ಜು!:
ಕುರುಬ ಸಮುದಾಯಕ್ಕೆ ಎಸ್ಟಿಮೀಸಲು ಹಾಗೂ ಉಳಿದ ಹಿಂದುಳಿದ ಜಾತಿಗಳಿಗೆ ಅವುಗಳ ಜನಸಂಖ್ಯೆ ಆಧರಿಸಿ ಸೂಕ್ತ ಮೀಸಲಾತಿ ಕಲ್ಪಿಸುವಂತೆ ನಡೆಯುವ ಈ ಹೋರಾಟ ಸರಿಸುಮಾರು ಎರಡು ತಿಂಗಳ ಕಾಲ ನಿರಂತರವಾಗಿ ನಡೆಯಲಿದೆ. ಈ ಹೋರಾಟದ ಅಂತ್ಯದ ವೇಳೆಗೆ ಹಿಂದುಳಿದ ನಾಯಕರ ನಿಯೋಗದೊಂದಿಗೆ ಸಿದ್ದರಾಮಯ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮೀಸಲಾತಿಗೆ ಆಗ್ರಹಿಸುವ ಮೂಲಕ ತಾರ್ಕಿಕ ಅಂತ್ಯ ಮುಟ್ಟಿಸುವ ಯೋಜನೆಯೂ ಇದೆ ಎಂದು ತಿಳಿದುಬಂದಿದೆ.
ಕುರುಬ ಸಮುದಾಯವನ್ನು ಎಸ್ಟಿಪಟ್ಟಿಗೆ ಸೇರಿಸಿದರಷ್ಟೇ ಸಾಲದು ಈ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ದೊರೆಯಬೇಕು. ಇದಕ್ಕಾಗಿ ಎಸ್ಟಿಗೆ ಇರುವ ಮೀಸಲು ಪ್ರಮಾಣವೇ ಹೆಚ್ಚಾಗಬೇಕು ಎಂಬ ಆಗ್ರಹವೂ ಈ ಹೋರಾಟದ ಭಾಗವಾಗಿರಲಿದೆ ಎಂದು ಈ ಹೋರಾಟದ ಸಂಘಟನೆಯಲ್ಲಿ ಸಕ್ರಿಯವಾಗಿರುವ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಹೇಳುತ್ತಾರೆ.
ಪ್ರಸ್ತುತ ಎಸ್ಟಿಗೆ ಶೇ.3ರಷ್ಟುಮೀಸಲಾತಿಯಿದೆ. ನಾಗಮೋಹನ ದಾಸ್ ಆಯೋಗದ ಶಿಫಾರಸು ಜಾರಿಯಾದ ನಂತರ ಈ ಪ್ರಮಾಣ ಶೇ.7ಕ್ಕೆ ಹೆಚ್ಚಳವಾಗಬಹುದು. ಆದರೆ, ಸುಮಾರು 45 ಲಕ್ಷ ಜನಸಂಖ್ಯೆಯಿರುವ ಕುರುಬ ಸಮುದಾಯ ಎಸ್ಟಿಮೀಸಲು ಪಟ್ಟಿಗೆ ಬಂದಾಗಲೂ ಮೀಸಲು ಪ್ರಮಾಣ ಶೇ.7ರಷ್ಟೇ ಇದ್ದರೆ ಪ್ರಯೋಜನವಾಗುವುದಿಲ್ಲ. ಹೀಗಾಗಿ ಎಸ್ಟಿಮೀಸಲು ಪ್ರಮಾಣವನ್ನು ಜನಸಂಖ್ಯೆ ಆಧಾರದ ಮೇಲೆ ಶೇ.16ಕ್ಕೆ ಹೆಚ್ಚಳ ಮಾಡಬೇಕು. ಅದರಲ್ಲಿ ಶೇ. 7ರಷ್ಟನ್ನು ಕುರುಬ ಸಮುದಾಯಕ್ಕೆ, ಶೇ.3ರಿಂದ 4ರಷ್ಟನ್ನು ನಾಯಕ ಸಮುದಾಯಕ್ಕೆ ನೀಡಬೇಕು. ಹೀಗೆ ಸಮುದಾಯಗಳ ಜನಸಂಖ್ಯೆ ಆಧಾರದಲ್ಲಿ ಮೀಸಲು ನಿಗದಿಯಾಗಬೇಕು ಎಂದು ಹೋರಾಟ ನಡೆಸಲಾಗುತ್ತದೆ.
ಅಸೆಂಬ್ಲಿ ಚುನಾವಣೆಗೆ ಸಿದ್ದು ಭರ್ಜರಿ ತಯಾರಿ?
ಈ ಸಮಾವೇಶಗಳ ಜತೆಗೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕುರುಬ, ಉಪ್ಪಾರ, ಈಡಿಗ ಸೇರಿದಂತೆ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಸಮುದಾಯದ ಗ್ರಾಮ ಪಂಚಾಯ್ತಿ ಸದಸ್ಯರ ಸನ್ಮಾನ ಕಾರ್ಯಕ್ರಮ ಕೂಡ ಜರುಗಲಿದೆ. ತನ್ಮೂಲಕ ಈ ಸಮಾವೇಶಗಳು ಮುಂದಿನ ವಿಧಾನಸಭಾ ಚುನಾವಣೆಗೆ ಸಿದ್ದರಾಮಯ್ಯ ತಂಡದ ಸಿದ್ಧತೆ ಯಾತ್ರೆಯೂ ಆಗಿರಲಿದೆ. ಒಂದು ವೇಳೆ ಪಕ್ಷದ ವೇದಿಕೆಯಾಗಿದ್ದರೆ ಕಾಂಗ್ರೆಸ್‌ನ ಇತರ ನಾಯಕರನ್ನು ಅನಿವಾರ್ಯವಾಗಿ ಆಹ್ವಾನಿಸಬೇಕಿತ್ತು. ಇದನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಸಂಘಟನೆಗಳ ಹೆಸರಿನಲ್ಲಿ ಈ ಸಮಾವೇಶ ಆಯೋಜನೆಗೊಳ್ಳುತ್ತಿದೆ ಎನ್ನಲಾಗಿದೆ