33 ಸಾವಿರ ಕೋಟಿ ರೂಪಾಯಿ ಸಾಲಕ್ಕೆ ರಾಜ್ಯ ನಿರ್ಧಾರ!

By Kannadaprabha NewsFirst Published Sep 16, 2020, 7:30 AM IST
Highlights

33 ಸಾವಿರ ಕೋಟಿ ಸಾಲಕ್ಕೆ ರಾಜ್ಯ ನಿರ್ಧಾರ| ಕೊರೋನಾದಿಂದ ರಾಜ್ಯದ ಬೊಕ್ಕಸಕ್ಕೆ ಆದಾಯ ನಷ್ಟ| ಹೀಗಾಗಿ ಸಾಲ ಪಡೆಯಲು ಸಂಪುಟ ಸಭೆ ಮಹತ್ವದ ನಿರ್ಧಾರ

ಬೆಂಗಳೂರು(ಸೆ. 16): ಕೋವಿಡ್‌ನಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆದಾಯ ನಿರೀಕ್ಷಿತ ಮಟ್ಟದಲ್ಲಿ ಬಾರದ ಹಿನ್ನೆಲೆಯಲ್ಲಿ ವಿವಿಧ ಮೂಲಗಳಿಂದ 33 ಸಾವಿರ ಕೋಟಿ ರು. ಸಾಲ ಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ವಿಧಾನಸೌಧದಲ್ಲಿ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ಆರ್ಥಿಕ ವಿತ್ತೀಯ ಕೊರತೆಯ ಇತಿಮಿತಿಯಲ್ಲಿಯೇ ಸಾಲ ಪಡೆಯಲು ಸರ್ಕಾರ ನಿರ್ಧರಿಸಿದೆ.

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ‘ಕೋವಿಡ್‌ನಿಂದಾಗಿ ರಾಜ್ಯ ಆರ್ಥಿಕ ಪರಿಸ್ಥಿತಿಗೆ ಪೆಟ್ಟು ಬಿದ್ದಿದ್ದು, ಅದನ್ನು ಸರಿದೂಗಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಕೋವಿಡ್‌ ಪರಿಣಾಮ ರಾಜ್ಯದ ಬೊಕ್ಕಸಕ್ಕೆ ಬರುತ್ತಿದ್ದ ಆದಾಯ ಕಡಿಮೆಯಾಗಿದೆ. ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಹಣ ಕಲ್ಪಿಸುವ ಉದ್ದೇಶದಿಂದ 33 ಸಾವಿರ ಕೋಟಿ ರು. ಸಾಲ ಪಡೆಯಲು ತೀರ್ಮಾನಿಸಲಾಗಿದೆ. ಹೊಸ ಸಾಲ ಪಡೆಯಲು ಅನುಕೂಲವಾಗಲು ಆರ್ಥಿಕ ಹೊಣೆಗಾರಿಕೆ ಅಧಿನಿಯಮಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ’ ಎಂದು ಹೇಳಿದರು.

‘ಕೋವಿಡ್‌ನಿಂದಾಗಿ ಸರ್ಕಾರಕ್ಕೆ ವಿವಿಧ ಮೂಲಗಳಿಂದ ಬರಬೇಕಾಗಿದ್ದ ಆದಾಯ ನಿರೀಕ್ಷಿತ ಮಟ್ಟದಲ್ಲಿ ಸಂಗ್ರಹಣೆಯಾಗಿಲ್ಲ. ಅಲ್ಲದೇ, ಕೇಂದ್ರ ಸರ್ಕಾರ ನೀಡಬೇಕಿದ್ದ ಜಿಎಸ್‌ಟಿ ಅನುದಾನದಲ್ಲಿ ಕೊರತೆಯಾಗಿದೆ. ಆರ್ಥಿಕ ಹೊಣೆಗಾರಿಕೆ ಅಧಿನಿಯಮದಡಿ ವಿತ್ತೀಯ ಕೊರತೆ ಮಿತಿಯೊಳಗೆ ಜಿಎಸ್‌ಡಿಪಿಯ ಶೇ.3ರಷ್ಟುಸಾಲ ಪಡೆಯಲು ಈವರೆಗೆ ಅವಕಾಶ ಇತ್ತು. ಈಗ ಕೋವಿಡ್‌ನಿಂದಾಗಿ ಸಂಕಷ್ಟದಿಂದ ಹೊರಬರಲು ಶೇ.2ರಷ್ಟುಅಧಿಕ ಸಾಲ ಪಡೆದುಕೊಳ್ಳಲು ಕೇಂದ್ರ ಅನುವು ಮಾಡಿಕೊಟ್ಟಿದೆ. ಆ ಕಾರಣಕ್ಕಾಗಿ ಶೇ.3ರಿಂದ ಶೇ.5ಕ್ಕೆ ಹೆಚ್ಚಳ ಮಾಡಿಕೊಂಡು 33 ಸಾವಿರ ಕೋಟಿ ರು. ಸಾಲ ಪಡೆದುಕೊಳ್ಳಲಾಗುವುದು. ಜಿಎಸ್‌ಟಿ ಪರಿಹಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ 11 ಸಾವಿರ ಕೋಟಿ ರು. ಒದಗಿಸಬೇಕು ಎಂಬ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಮುಂದಿಡಲಾಗಿದೆ. ಜಿಎಸ್‌ಡಿಪಿ ಮತ್ತು ವಿತ್ತೀಯ ಕೊರತೆಯ ಮಿತಿಯೊಳಗೆ ಸರ್ಕಾರ ವಾರ್ಷಿಕವಾಗಿ ತೆಗೆದುಕೊಳ್ಳುವ ಸಾಲವಾಗಿದೆ’ ಎಂದು ತಿಳಿಸಿದರು.

ಇದೇ ವೇಳೆ, ‘ಕರ್ನಾಟಕ ಸಾದಿಲ್ವಾರು ನಿಧಿ (ತಿದ್ದುಪಡಿ) ವಿಧೇಯಕಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದ್ದು, ಸಾದಿಲ್ವಾರು ನಿಧಿಯನ್ನು 80 ಕೋಟಿ ರು. ನಿಂದ 500 ಕೋಟಿ ರು.ಗೆ ಹೆಚ್ಚಳ ಮಾಡಲಾಗಿದೆ. ಅಲ್ಲದೇ, ಸರ್ಕಾರಿ ಆಸ್ಪತ್ರೆಯಲ್ಲಿನ ಎಕ್ಸ್‌ರೇ ಘಟಕಗಳಲ್ಲಿ ಎಇಆರ್‌ಟಿ ಸುರಕ್ಷತಾ ಘಟಕ ಅಳವಡಿಕೆಗೆ ತೀರ್ಮಾನಿಸಲಾಗಿದೆ. 583 ಎಕ್ಸ್‌ರೇ ಘಟಕಗಳಿಗೆ ಸುರಕ್ಷತಾ ಘಟಕ ಅಳವಡಿಸಲು 11.66 ಕೋಟಿ ರು. ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ. ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಎಸ್ಕಾಂಗಳ ಆರ್ಥಿಕ ಪರಿಸ್ಥಿತಿ ಏರುಪೇರಾಗಿರುವ ಹಿನ್ನೆಲೆಯಲ್ಲಿ ಸಾಲ ಪಡೆದುಕೊಳ್ಳಲು ಸರ್ಕಾರ ಖಾತ್ರಿ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. 5575 ಕೋಟಿ ರು. ದೀರ್ಘಾವಧಿ ಸಾಲ ಪಡೆದುಕೊಳ್ಳಲು ಒಪ್ಪಿಗೆ ನೀಡಲಾಗಿದೆ’ ಎಂದರು.

click me!