71000 ಕೋಟಿ ಸಾಲಕ್ಕೆ ರಾಜ್ಯ ಸರ್ಕಾರ ನಿರ್ಧಾರ

By Web DeskFirst Published Jan 17, 2019, 9:09 AM IST
Highlights

 ಮೂಲಸೌಕರ್ಯ ಅಭಿವೃದ್ಧಿಗೆ ಎಐಐಬಿಯಿಂದ ಭಾರಿ ಸಾಲ| ಎಚ್‌ಡಿಕೆ ನೇತೃತ್ವದ ಸಭೆಯಲ್ಲಿ ಬ್ಯಾಂಕ್‌ ಮುಂದೆ ಪ್ರಸ್ತಾವನೆ

ಬೆಂಗಳೂರು[ಜ.17]: ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯದ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಸುಮಾರು 71 ಸಾವಿರ ಕೋಟಿ ರು. (ಸಾವಿರ ಕೋಟಿ ಅಮೆರಿಕನ್‌ ಡಾಲರ್‌) ಸಾಲ ಪಡೆಯಲು ಮುಂದಾಗಿದೆ.

ಈ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಬುಧವಾರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮುಂದಿನ ಐದು ವರ್ಷಗಳಿಗೆ ರಾಜ್ಯದಲ್ಲಿ ವಿವಿಧ ಇಲಾಖೆಗಳಿಂದ ಕೈಗೊಳ್ಳುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗಾಗಿ ಸುಮಾರು 71 ಸಾವಿರ ಕೋಟಿ ರು. ಹಣಕಾಸಿನ ನೆರವು ಬೇಕಾಗುತ್ತದೆ ಎಂದು ಪ್ರಾಥಮಿಕ ಪ್ರಸ್ತಾವನೆಯನ್ನು ಏಷಿಯನ್‌ ಇನಾ್ೊ್ರಸ್ಟ್ರಕ್ಚರ್‌ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ (ಎಐಐಬಿ) ಪ್ರತಿನಿಧಿಗಳ ಮುಂದೆ ಮಂಡಿಸಲಾಗಿದೆ.

ಇದಕ್ಕೆ ಇಲಾಖಾವಾರು ಪ್ರಸ್ತಾವನೆ ಸಲ್ಲಿಸುವಂತೆ ಬ್ಯಾಂಕ್‌ನ ಪ್ರತಿನಿಧಿಗಳು ಮನವಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಆಯಾ ಇಲಾಖಾ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾಗಿರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಬಗ್ಗೆ ಹಾಗೂ ಅದಕ್ಕೆ ತಗಲುವ ವೆಚ್ಚದ ಬಗ್ಗೆ ಪ್ರತ್ಯೇಕ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸಭೆಯಲ್ಲಿ ಹಾಜರಿದ್ದ ಎಲ್ಲ ಇಲಾಖೆಗಳ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಕುಡಿಯುವ ನೀರು, ಮೂಲಸೌಕರ್ಯ, ಗ್ರಾಮೀಣಾಭಿವೃದ್ಧಿ, ಸಾರಿಗೆ ಸೌಲಭ್ಯ, ರಸ್ತೆ ಅಭಿವೃದ್ಧಿ ಸೇರಿದಂತೆ ಒಟ್ಟಾರೆಯಾಗಿ ರಾಜ್ಯದಲ್ಲಿ ಎಲ್ಲೆಲ್ಲಿ ಯಾವ್ಯಾವ ಮೂಲಸೌಕರ್ಯಗಳ ಅಭಿವೃದ್ಧಿಗೆ ಮುಂದಿನ ಐದು ವರ್ಷದಲ್ಲಿ ಎಷ್ಟೆಷ್ಟುಹಣಕಾಸಿನ ಅವಶ್ಯಕತೆ ಇದೆ ಎಂದು ಸಭೆಯಲ್ಲಿ ಸರ್ಕಾರದಿಂದ ಪ್ರಾತ್ಯಕ್ಷಿಕೆ ನೀಡಿದ್ದಾರೆ. ಇದರ ಒಟ್ಟಾರೆ ಪ್ರಸ್ತಾವನೆ ಮೊತ್ತ 71 ಸಾವಿರ ಕೋಟಿ ರು. ನಷ್ಟಾಗಲಿದೆ. ಈ ಸಂಬಂಧ ಇಲಾಖಾವಾರು ಅವಶ್ಯವಿರುವ ಹಣಕಾಸಿನ ಅಂದಾಜು ಸಿದ್ಧಪಡಿಸಿ ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಬೇಕು. ಜೊತೆಗೆ ಎಐಐಬಿ ಬ್ಯಾಂಕ್‌ ಜೊತೆ ಸಂಪರ್ಕದಲ್ಲಿದ್ದು, ಅಗತ್ಯ ಅನುದಾನದ ಸಾಲ ಪಡೆಯಲು ಹಂತ ಹಂತವಾಗಿ ಕ್ರಮವಹಿಸಬೇಕು ಎಂದು ಮುಖ್ಯಮಂತ್ರಿ ಅವರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರಿಗೆ ಬಹುಪಾಲು:

ಬಿಬಿಎಂಪಿ, ಬೆಂಗಳೂರು ಜಲಮಂಡಳಿ, ಬಿಡಿಎ ಸೇರಿದಂತೆ ಒಟ್ಟಾರೆ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಂದಲೇ ರಾಜಧಾನಿಯ ಮೂಲಸೌಕರ್ಯ ಅಭಿವೃದ್ಧಿಗೆ ಸುಮಾರು 30ರಿಂದ 40 ಸಾವಿರ ಕೋಟಿ ರು. ಹಣಕಾಸಿನ ಅಗತ್ಯವಿದೆ ಎಂದು ಪ್ರಸ್ತಾವನೆ ಇಡಲಾಗಿದೆ.

ಇದು ಪ್ರಾಥಮಿಕ ಪ್ರಸ್ತಾವನೆಯಾಗಿದ್ದು, ಇನ್ನೂ ಹಲವು ಹಂತಗಳ ಚರ್ಚೆ ಬಾಕಿ ಇದೆ. ಬಂಡವಾಳ ಹೂಡುವ ಬಗ್ಗೆ ಇನ್ನೂ ಅಧಿಕೃತ ಒಪ್ಪಂದ ಆಗಿಲ್ಲ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್‌ ಸೇರಿದಂತೆ ವಿವಿಧ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಜರಿದ್ದರು ಎಂದು ಗೊತ್ತಾಗಿದೆ.

click me!