ನಟ ದರ್ಶನ್‌ಗೆ ವಿಶೇಷ ಸೌಲಭ್ಯ ಪ್ರಕರಣ ಬೆನ್ನಲ್ಲೇ ಅಕ್ರಮ ಚಟುವಟಿಕೆಗಳಿಗೆ ಶಾಶ್ವತವಾಗಿ ಕಡಿವಾಣ ಹಾಕುವ ನಿಟ್ಟಿನಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನು ಮೂರು ಕಾರಾಗೃಹಗಳಾಗಿ ವಿಭಜಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಗಿರೀಶ್ ಮಾದೇನಹಳ್ಳಿ
ನಟ ದರ್ಶನ್‌ಗೆ ವಿಶೇಷ ಸೌಲಭ್ಯ ಪ್ರಕರಣ ಬೆನ್ನಲ್ಲೇ ಅಕ್ರಮ ಚಟುವಟಿಕೆಗಳಿಗೆ ಶಾಶ್ವತವಾಗಿ ಕಡಿವಾಣ ಹಾಕುವ ನಿಟ್ಟಿನಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನು ಮೂರು ಕಾರಾಗೃಹಗಳಾಗಿ ವಿಭಜಿಸಲು ರಾಜ್ಯ ಸರ್ಕಾರ ಮುಂದಾಗಿದೆ.
undefined
ಏಳೆಂಟು ತಿಂಗಳ ಹಿಂದೆಯೇ ಪರಪ್ಪನ ಅಗ್ರಹಾರ ಕಾರಾಗೃಹದ ವಿಭಜನೆ ಸಂಬಂಧ ರಾಜ್ಯ ಬಂದೀಖಾನೆ ಮತ್ತು ಸುಧಾರಣಾ ಸೇವೆ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆಗೆ ದರ್ಶನ್ ಪ್ರಕರಣದ ಪರಿಣಾಮ ರಾಜ್ಯ ಸರ್ಕಾರ ಸಮ್ಮತಿಸುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಈ ಕುರಿತು ಮುಖ್ಯಮಂತ್ರಿಗಳ ಅಭಿಪ್ರಾಯ ಪಡೆಯಲು ಗೃಹ ಇಲಾಖೆ ಮುಂದಾಗಿದೆ.
ಹೀಗಾಗಿ ಈ ಬಗ್ಗೆ ಇನ್ನೆರೆಡು ದಿನಗಳಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದು ಅಂತಿಮ ತೀರ್ಮಾನ ಹೊರಬರಲಿದೆ. ಸರ್ಕಾರವು ಹಸಿರು ನಿಶಾನೆ ತೋರಿದರೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಕೈದಿ, ವಿಚಾರಣಾಧೀನ ಕೈದಿ ಹಾಗೂ ಮಹಿಳಾ ಕೈದಿಗಳ ಕಾರಾಗೃಹಗಳಾಗಿ ವಿಂಗಡಣೆಯಾಗಲಿದೆ.
ಅಲ್ಲದೆ ರಾಜ್ಯದ ಬಹುದೊಡ್ಡ ಜೈಲು ಮೂರು ಹೋಳಾಗುವುದರಿಂದ ಅಧಿಕಾರಿ ಮತ್ತು ಸಿಬ್ಬಂದಿ ಪ್ರತ್ಯೇಕವಾಗಲಿದ್ದು, ಇದು ಜೈಲಿನ ಭದ್ರತೆ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಪರಪ್ಪನ ಅಗ್ರಹಾರ ಕಾರಾಗೃಹವು ಹಣವಂತ ಕೈದಿಗಳ ಪಾಲಿಗೆ ಸ್ವರ್ಗ ಎಂಬ ಕುಖ್ಯಾತಿ ಪಡೆದಿದೆ. ಅಲ್ಲದೆ ಪದೇ ಪದೇ ಹಣ ನೀಡಿದರೆ ಡ್ರಗ್ಸ್, ಮೊಬೈಲ್ ಹಾಗೂ ವಿಶೇಷ ಭೋಜನ ಸೇರಿದಂತೆ ರಾಜ್ಯಾತಿಥ್ಯ ಸಿಗಲಿದೆ ಎಂಬ ಟೀಕೆಗಳಿಗೆ ಪೂರಕವಾಗಿ ವಿಶೇಷ ಸೌಲಭ್ಯ ಪ್ರಕರಣಗಳು ಬಯಲಾಗುತ್ತಿವೆ. ಇದಕ್ಕೆ ದರ್ಶನ್ ಪ್ರಕರಣವು ಹೊಸ ಎಪಿಸೋಡ್ ಆಗಿದೆ. ಈ ಆರೋಪಗಳ ಹಿನ್ನಲೆಯಲ್ಲಿ ಸೆಂಟ್ರಲ್ ಜೈಲು ವಿಭಜನೆಗೆ ಬಂದೀಖಾನೆ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು.
ಕೈದಿಗಳ ನಡುವೆ ಗೋಡೆಗಳ ನಿರ್ಮಾಣ:
ಪರಪ್ಪನ ಅಗ್ರಹಾರ ಕಾರಾಗೃಹವು ಕೈದಿಗಳು, ವಿಚಾರಣಾಧೀನ ಕೈದಿಗಳು ಹಾಗೂ ಮಹಿಳಾ ಕೈದಿಗಳು ಸೇರಿದಂತೆ ಒಟ್ಟು 5300 ಕೈದಿಗಳನ್ನು ಬಂಧಿಸುವ ಸಾಮರ್ಥ್ಯ ಹೊಂದಿದೆ. ಈ ಕಾರಾಗೃಹಕ್ಕೆ ಮುಖ್ಯ ಅಧೀಕ್ಷಕ, ಅಧೀಕ್ಷಕ ಹಾಗೂ ನಾಲ್ವರು ಸಹಾಯಕ ಅಧೀಕ್ಷಕರು ಸೇರಿದಂತೆ 800 ಅಧಿಕಾರಿ ಮತ್ತು ಸಿಬ್ಬಂದಿ ಹುದ್ದೆಗಳು ಮಂಜೂರಾತಿ ಇದ್ದು, ಇದರಲ್ಲಿ ಅರ್ಧದಷ್ಟು ಹುದ್ದೆಗಳು ಖಾಲಿ ಇವೆ. ಪ್ರಸುತ್ತ ಮುಖ್ಯ ಅಧೀಕ್ಷಕ ಹಾಗೂ ಅಧೀಕ್ಷಕ ಸೇರಿದಂತೆ 400 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೈದಿಗಳ ವಿಭಾಗಕ್ಕೆ ಸಹಾಯಕ ಅಧೀಕ್ಷಕರು ಭದ್ರತಾ ಹೊಣೆ ಹೊತ್ತಿದ್ದಾರೆ. ಹೀಗಾಗಿ ಸಿಬ್ಬಂದಿ ಕೊರತೆ ಹಾಗೂ ಕಾರ್ಯದೊತ್ತಡವು ಭದ್ರತಾ ಲೋಪಕ್ಕೆ ಕಾರಣಗಳಲ್ಲೊಂದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಸುತ್ತ ಕೈದಿಗಳು, ವಿಚಾರಣಾಧೀನ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಬ್ಯಾರೆಕ್‌ಗಳಿವೆ. ಆದರೆ ಆಸ್ಪತ್ರೆ, ಅಡುಗೆ ಮನೆ (ಊಟ) ಹಾಗೂ ಸಂದರ್ಶನ ಕೋಣೆಗಳು ಒಂದೇ ಆಗಿವೆ. ಹಾಗಾಗಿ ಆ ವಿಭಾಗಗಳಿಗೆ ಕೈದಿಗಳು ಬಂದಾಗ ಸುಲಭವಾಗಿ ಪರಸ್ಪರ ಭೇಟಿಯಾಗಬಹುದು. ಈಗ ಪರಪ್ಪನ ಅಗ್ರಹಾರದಲ್ಲಿ 4,500 ಕೈದಿಗಳಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಹಿನ್ನಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರವು ವಿಭಜನೆಯಾದರೆ ವಿಚಾರಣಾಧೀನ ಕೈದಿಗಳ ವಿಭಾಗಕ್ಕೆ ಮುಖ್ಯ ಅಧೀಕ್ಷಕ ಮತ್ತು ಕೈದಿ ಹಾಗೂ ಮಹಿಳಾ ವಿಭಾಗಗಳಿಗೆ ಅಧೀಕ್ಷಕ (ಎಸ್ಪಿ ದರ್ಜೆ ಅಧಿಕಾರಿ)ರು ಮುಖ್ಯಸ್ಥರಾಗಲಿದ್ದಾರೆ. ಈ ಮೂವರು ಅಧಿಕಾರಿಗಳ ಮೇಲೆ ಡಿಐಜಿ ಉಸ್ತುವಾರಿ ಇರಲಿದೆ. ಅಲ್ಲದೆ ಆಯಾ ಜೈಲಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಳಹಂತದ ಅಧಿಕಾರಿ ಮತ್ತು ಸಿಬ್ಬಂದಿ ಸಹ ಪ್ರತ್ಯೇಕವಾಗಲಿದ್ದಾರೆ. ಹಾಗೇ ವಿಭಾಗಕ್ಕೆ ಆಸ್ಪತ್ರೆ, ಸಂದರ್ಶನ ಕೋಣೆ ಹಾಗೂ ಅಡುಗೆ ಕೋಣೆಗಳು ರೂಪಗೊಳ್ಳಲಿವೆ. ಇದಕ್ಕಾಗಿ ಸದ್ಯ ಇರುವ ಮೂರು ವಿಭಾಗಗಳ ನಡುವೆ ಬೃಹತ್ ಗೋಡೆಗಳನ್ನು ನಿರ್ಮಿಸಿ ಜೈಲುಗಳನ್ನಾಗಿ ಪರಿವರ್ತಿಸಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಜೈಲಿನಲ್ಲಿ ದರ್ಶನ್ ಐಷಾರಾಮಿ ಜೀವನ: ಪತ್ನಿ ವಿಜಯಲಕ್ಷ್ಮಿಗೆ ಶಾಕ್, ಇಂದು ಭೇಟಿ ಇಲ್ಲ
ಕೈದಿಗಳ ಭೇಟಿಗೆ ಅವಕಾಶ
ಪ್ರತಿ ದಿನ ಬೆಳಗ್ಗೆ 7 ಗಂಟೆಗೆ ಉಪಾಹಾರಕ್ಕೆ ಬ್ಯಾರಕ್‌ಗಳಿಂದ ಕೈದಿಗಳನ್ನು ಹೊರಬಿಟ್ಟು 9 ಗಂಟೆಗೆ ಅವರನ್ನು ಮತ್ತೆ ಕೂಡಿ ಹಾಕಲಾಗುತ್ತದೆ. ಬೆಳಗ್ಗೆ 11 ಗಂಟೆಗೆ ಬ್ಯಾರಕ್‌ಗಳಲ್ಲಿ ಅಧಿಕಾರಿಗಳ ತಪಾಸಣೆ ಇರುತ್ತದೆ. ಈ ತಪಾಸಣೆ ಮುಗಿದ ನಂತರ ಮಧ್ಯಾಹ್ನದ ಊಟಕ್ಕೆ ಕೈದಿಗಳನ್ನು ಬಿಡಲಾಗುತ್ತದೆ. ಇದಾದ ನಂತರ ರಾತ್ರಿ 7 ಗಂಟೆಗೆ ಕೈದಿಗಳಿಗೆ ಊಟ ಕೊಡುವ ಕಾರಣ ಮಧ್ಯಾಹ್ನ 4 ಗಂಟೆಗೆ ಕೈದಿಗಳನ್ನು ಹೊರಬಿಡಲಾಗುತ್ತದೆ. ಊಟ ವಿತರಣೆ ನಂತರ ಬ್ಯಾರಕ್‌ಗಳಿಗೆ ಬೀಗ ಬೀಗ ಹಾಕಲಾಗುತ್ತದೆ. ಊಟ ವಿತರಣೆ ನಂತರ 7.30ಕ್ಕೆ ಪ್ರತಿ ಬ್ಯಾರಕ್‌ಗೆ ತೆರಳಿ ಕೈದಿಗಳ ಹಾಜರಾತಿ ಪಡೆಯಲಾಗುತ್ತದೆ. ಈ ಊಟ ಮತ್ತು ಉಪಾಹಾರದ ವೇಳೆ ಕೈದಿಗಳು ಕಲೆತು ಮಾತನಾಡಲು ಅವಕಾಶವಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.