
ಬೆಂಗಳೂರು (ಅ.07): ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸುವ ಸಲುವಾಗಿ, ಸರ್ಕಾರಿ ಮತ್ತು ಅನುದಾನಿತ (Aided) ಶಾಲೆಗಳ ವಿದ್ಯಾರ್ಥಿಗಳಿಗೆ ದಸರಾ ರಜೆಯನ್ನು ಅಕ್ಟೋಬರ್ 18 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ಶಾಲಾ ಶಿಕ್ಷಕರ ಸಂಘದಿಂದ ಸಿಎಂ ಭೇಟಿ ಮಾಡಿ ಸರ್ಕಾರದ ಜಾತಿ ಸಮೀಕ್ಷೆ ಮತ್ತು ಶಾಲೆಗೆ ಹಾಜರಾಗಿ ಪಾಠ ಬೋಧನೆ ಮಾಡುವುದು ಎರಡೂ ಕೆಲಸಗಳು ಹೊರೆ ಆಗಲಿವೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿ ಒಂದು ಕೆಲಸಕ್ಕೆ ನಿಯೋಜನೆ ಮಾಡುವಂತೆ ಮನವಿ ಸಲ್ಲಿಕೆ ಮಾಡಿದ್ದರು. ಶಿಕ್ಷಕರ ಸಂಘದ ಮನವಿ ಸ್ವೀಕರಿಸಿದ ಬೆನ್ನಲ್ಲಿಯೇ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮೀಕ್ಷಾ ಕಾರ್ಯದಲ್ಲಿ ಹೆಚ್ಚಿನ ಶಿಕ್ಷಕರು ತೊಡಗಿಸಿಕೊಂಡಿರುವುದರಿಂದ ದಸರಾ ರಜೆಯ ಅವಧಿಯನ್ನು ಮತ್ತಷ್ಟು ವಿಸ್ತರಣೆ ಮಾಡಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಮೀಕ್ಷೆ ಕಾರ್ಯವು ಸೆಪ್ಟೆಂಬರ್ 22 ರಿಂದ ಆರಂಭಗೊಂಡಿತ್ತು. ಇದನ್ನು ಅಕ್ಟೋಬರ್ 7 ರೊಳಗೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ, ಸಮೀಕ್ಷೆಯ ಪ್ರಗತಿ ನಿರೀಕ್ಷಿಸಿದಷ್ಟು ಆಗಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ರಾಜ್ಯದಾದ್ಯಂತ ನಮ್ಮ ನಿರೀಕ್ಷೆಗೆ ತಕ್ಕಂತೆ ಸರ್ವೇ ಪೂರ್ಣಗೊಂಡಿಲ್ಲ. ಕೊಪ್ಪಳದಂತಹ ಕೆಲವು ಜಿಲ್ಲೆಗಳಲ್ಲಿ ಶೇ. 97ರಷ್ಟು ಪ್ರಗತಿ ಸಾಧಿಸಿದ್ದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೇವಲ ಶೇ. 60ರಷ್ಟು ಮಾತ್ರ ಆಗಿದೆ. ಅಕ್ಟೋಬರ್ 7 ಕೊನೆಯ ದಿನವಾಗಿದ್ದರೂ, ಎಲ್ಲ ಜಿಲ್ಲೆಗಳಲ್ಲಿ ಸಂಪೂರ್ಣ ಸರ್ವೇ ಪೂರ್ಣವಾಗುವುದು ಅಸಾಧ್ಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸಮೀಕ್ಷಾ ಕಾರ್ಯದಲ್ಲಿ ರಾಜ್ಯದಾದ್ಯಂತ ಸುಮಾರು 1.20 ಲಕ್ಷ ಶಿಕ್ಷಕರು ಹಾಗೂ 40 ಸಾವಿರ ಇತರ ಸಿಬ್ಬಂದಿ ಸೇರಿ ಒಟ್ಟು 1.60 ಲಕ್ಷ ಜನರು ಭಾಗಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಶಿಕ್ಷಕರ ಸಂಘಟನೆಗಳು ಸಮೀಕ್ಷೆ ಪೂರ್ಣಗೊಳಿಸಲು ಕನಿಷ್ಠ 10 ದಿನಗಳ ಹೆಚ್ಚುವರಿ ಕಾಲಾವಕಾಶ ಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಈ ಮನವಿಯನ್ನು ಪುರಸ್ಕರಿಸಿದ ಸರ್ಕಾರವು, ಶಾಶ್ವತ ಹಿಂದುಳಿದ ಆಯೋಗದ ಜೊತೆ ಚರ್ಚಿಸಿ ಶಿಕ್ಷಣ ಇಲಾಖೆಯ ಮೂಲಕ ರಜೆ ವಿಸ್ತರಿಸಿ ಆದೇಶ ನೀಡಿದೆ. ನಾಳೆಯಿಂದ (ಅ.08) ಆರಂಭಗೊಂಡು ಅಕ್ಟೋಬರ್ 18 ರವರೆಗೆ (ಸುಮಾರು 6 ವರ್ಕಿಂಗ್ ಡೇಸ್) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ರಜೆ ಮುಂದುವರೆಯಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆ ಇರುವ ಶಿಕ್ಷಕರಿಗೆ ವಿನಾಯಿತಿ:
ಸಮೀಕ್ಷೆ ನಡೆಯುತ್ತಿರುವ ಕಾರಣ ರಜೆ ವಿಸ್ತರಣೆ ಮಾಡಲಾಗಿದೆ. ಆದರೆ, ಪ್ರಸ್ತುತ ದ್ವಿತೀಯ ಪಿಯುಸಿ ಮದ್ಯಂತರ ಪರೀಕ್ಷೆಗಳಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ಸಮೀಕ್ಷಾ ಕಾರ್ಯದಿಂದ ವಿನಾಯಿತಿ ನೀಡಲಾಗಿದೆ. ಈ ಶಿಕ್ಷಕರು ಪರೀಕ್ಷಾ ಕರ್ತವ್ಯಗಳನ್ನು ಮುಂದುವರೆಸಲಿದ್ದಾರೆ. ಉಳಿದ ಶಿಕ್ಷಕರು ರಜೆ ಅವಧಿಯಲ್ಲೂ ಸಮೀಕ್ಷೆ ಕಾರ್ಯವನ್ನು ಸಮರ್ಪಕವಾಗಿ ಪೂರ್ಣಗೊಳಿಸುವ ಜವಾಬ್ದಾರಿ ಹೊಂದಿರುತ್ತಾರೆ. ಈ ನಿರ್ಧಾರದಿಂದ ಸಮೀಕ್ಷೆ ಕಾರ್ಯಕ್ಕೆ ವೇಗ ದೊರೆಯುವ ನಿರೀಕ್ಷೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ