
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು (ಅ.07): ಅಬಕಾರಿ ಇಲಾಖೆಯ ಅರ್ಧ ವಾರ್ಷಿಕ ವಹಿವಾಟಿನ ಅಂಕಿ-ಸಂಖ್ಯೆಗಳ ಪ್ರಕಾರ ರಾಜ್ಯದಲ್ಲಿ ಮದ್ಯ ಮಾರಾಟ ಚೇತರಿಕೆ ಕಂಡಿಲ್ಲ. 2023 ಮತ್ತು 2024ಕ್ಕೆ ಹೋಲಿಸಿದರೆ ಮದ್ಯ ಮಾರಾಟದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಮದ್ಯದ ಮೇಲೆ ಅಬಕಾರಿ ಸುಂಕ ಹೆಚ್ಚಳವಾಗಿರುವುದು ಮಾರಾಟಕ್ಕೆ ಹೊಡೆತ ನೀಡಿದೆ. ಆದ್ದರಿಂದಲೇ ಮದ್ಯ ಮಾರಾಟ ಕಡಿಮೆಯಾಗಿದ್ದರೂ ಅಬಕಾರಿ ಇಲಾಖೆಯ ರಾಜಸ್ವಕ್ಕೆ ಮಾತ್ರ ಯಾವುದೇ ಕೊರತೆ ಉಂಟಾಗಿಲ್ಲ ಎಂದು ಮದ್ಯ ಮಾರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.
2023ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಒಟ್ಟಾರೆ 352.83 ಲಕ್ಷ ಬಾಕ್ಸ್ (ಒಂದು ಬಾಕ್ಸ್‌ಗೆ 8.64 ಲೀಟರ್) ಐಎಂಎಲ್ ಮದ್ಯ ಮಾರಾಟವಾಗಿದ್ದರೆ 2024ರ ಇದೇ ಅವಧಿಯಲ್ಲಿ 345.76 ಲಕ್ಷ ಬಾಕ್ಸ್‌ಗೆ ಇಳಿಕೆಯಾಗಿತ್ತು. 2025ರಲ್ಲಿ ಇದೇ ಅವಧಿಯವರೆಗೂ 342.93 ಲಕ್ಷ ಬಾಕ್ಸ್ ಮಾರಾಟವಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ 2.83 ಲಕ್ಷ ಬಾಕ್ಸ್ ಮಾರಾಟದಲ್ಲಿ ಕೊರತೆ ಕಂಡುಬಂದಿದೆ.
ಬಿಯರ್ ಬಿಕರಿ ಪಾತಾಳಕ್ಕೆ!: ಇನ್ನು, ಬಿಯರ್ ಮಾರಾಟ ಕಳೆದ ಸಾಲಿಗೆ ಹೋಲಿಸಿದರೆ ಭಾರೀ ಕುಸಿತ ಕಂಡಿದೆ. 2024ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಒಟ್ಟಾರೆ 242.73 ಲಕ್ಷ ಬಾಕ್ಸ್ (ಒಂದು ಬಾಕ್ಸ್‌ನಲ್ಲಿ 7.80 ಲೀಟರ್) ಬಿಯರ್ ಮಾರಾಟವಾಗಿತ್ತು. ಆದರೆ 2025ರ ಇದೇ ಅವಧಿಯಲ್ಲಿ ಕೇವಲ 195.27 ಲಕ್ಷ ಬಾಕ್ಸ್ ಮಾರಾಟವಾಗಿ ಗಣನೀಯ ಕುಸಿತವಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಬರೋಬ್ಬರಿ 47.46 ಲಕ್ಷ ಬಾಕ್ಸ್ ಮಾರಾಟ ಇಳಿಕೆಯಾಗಿದ್ದು, ಶೇ.19.55 ರಷ್ಟು ಕುಂಠಿತವಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ, ಪ್ರತಿ ತಿಂಗಳಿನಲ್ಲೂ ಬಿಯರ್ ಮಾರಾಟ ಕಡಿಮೆಯಾಗುತ್ತಲೇ ಬಂದಿದೆ.
ಮದ್ಯ ಮಾರಾಟದಲ್ಲಿ ಗಣನೀಯ ಇಳಿಕೆ ಕಂಡರೂ ಅಬಕಾರಿ ಇಲಾಖೆ ರಾಜಸ್ವ ಸಂಗ್ರಹದಲ್ಲಿ ಪ್ರಗತಿ ಸಾಧಿಸಿದೆ. 2024ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಮದ್ಯ ಮಾರಾಟದಿಂದ ಒಟ್ಟಾರೆ 17,702 ಕೋಟಿ ರು. ರಾಜಸ್ವ ಸಂಗ್ರಹವಾಗಿತ್ತು. ಪ್ರಸಕ್ತ ಸಾಲಿನ ಇದೇ ಅವಧಿಯಲ್ಲಿ ಮದ್ಯ ಮಾರಾಟ ಕುಸಿದಿದ್ದರೂ 19,571 ಕೋಟಿ ರು. ರಾಜಸ್ವ ಸಂಗ್ರಹವಾಗಿ ಹೆಚ್ಚುವರಿಯಾಗಿ 1869 ಕೋಟಿ ರು. ವಸೂಲಾಗಿದೆ. ಮದ್ಯದ ದರ ಹೆಚ್ಚಳ ಮಾಡಿದ್ದು ಅಧಿಕ ರಾಜಸ್ವ ಸಂಗ್ರಹಕ್ಕೆ ಮೂಲ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ