ಮಸ್ಕಿ ತಾಲೂಕಿನ 17 ಕೆರೆಗಳಿಗೆ ಕೃಷ್ಣಾ ನದಿಯ ನೀರು ತುಂಬಿಸಲು 457 ಕೋಟಿ ರು. ಕಾಮಗಾರಿ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಸಚಿವ ಸಂಪುಟದ ಒಪ್ಪಿಗೆ ನೀಡಿದೆ.
ಬೆಂಗಳೂರು (ಮಾ.04): ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಬೆಂಗಳೂರಲ್ಲಿ ಹಾಸ್ಟೆಲ್ ನಿರ್ಮಾಣ, ಮಸ್ಕಿ ತಾಲೂಕಿನ 17 ಕೆರೆಗಳಿಗೆ ಕೃಷ್ಣಾ ನದಿಯ ನೀರು ತುಂಬಿಸಲು 457 ಕೋಟಿ ರು. ಕಾಮಗಾರಿ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಸಚಿವ ಸಂಪುಟದ ಅನುಮೋದನೆ ದೊರಕಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉನ್ನತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೆಂಗಳೂರಿಗೆ ಬರುವ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಇಲ್ಲಿನ ಎಚ್.ಎಸ್.ಆರ್.ಬಡಾವಣೆಯಲ್ಲಿ 59 ಕೋಟಿ ರು. ವೆಚ್ಚದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಸಂಪುಟ ಅನುಮೋದನೆ ನೀಡಿದೆ. ಕಳೆದ ತಿಂಗಳು ಯುವ ಜನ ಸಬಲೀಕರಣ ಮತ್ತು ಸಾಂಖ್ಯಿಕ ಸಚಿವ ಡಾ.ನಾರಾಯಣಗೌಡ ಅವರು ಈ ಸಂಬಂಧ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಪುರುಷ ಹಾಗೂ ಮಹಿಳಾ ವಿದ್ಯಾರ್ಥಿಗಳಿಗೆ ಒಟ್ಟು 400 ಜನರ ವಾಸ್ತವ್ಯಕ್ಕೆ ಪ್ರತ್ಯೇಕವಾಗಿ ವಸತಿ ನಿಲಯ ನಿರ್ಮಿಸುವುದಾಗಿ ಹೇಳಿದ್ದರು. ಇದಕ್ಕೆ ಈಗ ಸಂಪುಟದ ಅನುಮೋದನೆ ದೊರಕಿದೆ.
ಸಣ್ಣ ನೀರಾವರಿ ಇಲಾಖೆಯಿಂದ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಸುಮಾರು 17 ಕೆರೆಗಳಿಗೆ ಕುಡಿಯುವ ನೀರು ಹಾಗೂ ಅಂತರ್ಜಲ ಅಭಿವೃದ್ಧಿಗೆ ಕೃಷ್ಣಾ ನದಿಯಿಂದ ಏತ ನೀರಾವರಿ ಮೂಲಕ ನೀರನ್ನು ತುಂಬಿಸಲು 457.18 ಕೋಟಿ ರು. ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ದೊರಕಿದೆ.
ಇಂದಿನ (ಬುಧವಾರ) ಸಚಿವ ಸಂಪುಟ ಸಭೆಯ ಮಹತ್ವದ ನಿರ್ಧಾರಗಳು
ಸುಪ್ರೀಂಕೋರ್ಟ್ ಆದೇಶದಂತೆ ಈಗಾಗಲೇ ಬೆಂಗಳೂರಿನ 774 ಪೊಲೀಸ್ ಠಾಣೆಗಳಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದು, ಉಳಿದ 281 ಠಾಣೆಗಳಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲು 18.50 ಕೋಟಿ ರು.ಗಳನ್ನು ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು.
ವಿವಿಧ ವಿಧೇಯಕಗಳಿಗೆ ಒಪ್ಪಿಗೆ: ಕರ್ನಾಟಕ ಜಲಸಾರಿಗೆ ಮಂಡಳಿ (ತಿದ್ದುಪಡಿ) ಮಸೂದೆ 2021ಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಇನ್ನು ಮುಂದೆ ಮುಖ್ಯಕಾರ್ಯದರ್ಶಿ ಬದಲು ಮುಖ್ಯಮಂತ್ರಿಗಳು ಮಂಡಳಿ ಅಧ್ಯಕ್ಷರಾಗಿರುತ್ತಾರೆ. ಮಂಡಳಿ ಅಧ್ಯಕ್ಷರು ಇನ್ನು ಮುಂದೆ ಉಪಾಧ್ಯಕ್ಷರಾಗಿರುತ್ತಾರೆ ಎಂದು ಬೊಮ್ಮಾಯಿ ತಿಳಿಸಿದರು.
ಅದೇ ರೀತಿ, ನಾಗರಿಕ ಸೇವೆಯ ನೇಮಕಾತಿಯಲ್ಲಿ ಬಹುತೇಕ ಅಭ್ಯರ್ಥಿಗಳು ಕಂಪ್ಯೂಟರ್ ಜ್ಞಾನ ಹೊಂದಿರುತ್ತಾರೆ. ಹಾಗಾಗಿ ಕರ್ನಾಟಕ ನಾಗರಿಕ ಸೇವಾ ( ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ) ತಿದ್ದುಪಡಿ ನಿಯಮಗಳು 2021ರ ಮೂಲಕ ಕಂಪ್ಯೂಟರ್ ಜ್ಞಾನ ಕಡ್ಡಾಯ ನಿಯಮ ಕೈಬಿಡಲಾಗಿದೆ.
ಕೆಳ ಹಂತದ ನ್ಯಾಯಾಲಯಗಳ ಸಿಬ್ಬಂದಿಗೆ 2009ರಿಂದ ಅನ್ವಯಿಸಿ ವೇತನ ಪರಿಷ್ಕರಿಸಲು ಸಂಪುಟ ಒಪ್ಪಿಗೆ ನೀಡಿದ್ದು, ಈ ಸಂಬಂಧ ‘ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರೆ ಹುದ್ದೆಗಳು) (ನೇಮಕಾತಿ) (ತಿದ್ದುಪಡಿ) ನಿಯಮಗಳು- 2020’ಕ್ಕೆ ಅನುಮೋದನೆ. ಸರ್ಕಾರಿ, ಅನುದಾನಿತ ಆಯುಷ್ ಮಹಾವಿದ್ಯಾಲಯಗಳ ಬೋಧಕರಿಗೆ ಎಐಸಿಟಿ ವೇತನ ಶ್ರೇಣಿ ಪರಿಷ್ಕರಿಸಲು ಒಪ್ಪಿಗೆ, ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣ ಕಾಮಗಾರಿಯ 18.48 ರು. ಕೋಟಿ ರು. ಅಂದಾಜು ಪರಿಷ್ಕರಣಾ ವೆಚ್ಚ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸಲವನಹಳ್ಳಿ ಹೊಸಕೊಪ್ಪ ಮತ್ತು ಇತರೆ 59 ಜನವಸತಿಗಳಿಗೆ ಜಲ ಜೀವನ್ ಯೋಜನೆಯಡಿ ಕುಡಿಯುವ ನೀರು ಪೂರೈಕೆಗೆ 69.26 ಕೋಟಿ ರು.ಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು ಎಂದು ಸಚಿವರು ವಿವರಿಸಿದರು.