
ಬೆಂಗಳೂರು (ಮೇ.5): ದೇಶದ 75ನೇ ಸ್ವಾತಂತ್ರ್ಯ ಮಹೋತ್ಸವದ (75th independence day) ನೆನಪಿಗೆ ಕಳೆದ ವರ್ಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಘೋಷಿಸಿದ್ದ ‘ಅಮೃತ ಗ್ರಾಮ ಪಂಚಾಯಿತಿ ಯೋಜನೆ’ಯ (Amrutha Grama Panchayath Yojane) ಮೊದಲ ಹಂತ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹೊಸದಾಗಿ 750 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿ, ಸಮಗ್ರ ಅಭಿವೃದ್ಧಿ ಮಾಡಲು ಉದ್ದೇಶಿಸಲಾಗಿದೆ.
ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿಗಳಲ್ಲಿ ಬೀದಿ ದೀಪಗಳು/ಸೋಲಾರ್ ಬೀದಿ ದೀಪಗಳು, ಪ್ರತಿ ಮನೆಗೆ ಕುಡಿಯುವ ನೀರಿನ ನಳ ಸಂಪರ್ಕ, ಶೇ. 100 ರಷ್ಟು ಘನತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಸರ್ಜಿಸುವುದು, ಗ್ರಾ.ಪಂ. ಕಟ್ಟಡಗಳಲ್ಲಿ ಸೌರ ವಿದ್ಯುತ್ ಅಳವಡಿಕೆ, ಅಮೃತ ಉದ್ಯಾನವನ, ಗ್ರಾ.ಪಂ. ಗ್ರಂಥಾಲಯದ ಡಿಜಿಟಲೀಕರಣ, ಶಾಲೆ/ಅಂಗನವಾಡಿಗಳಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಶಾಲೆಗಳಲ್ಲಿ ಆಟದ ಮೈದಾನ ಮತ್ತು ಆವರಣ ಗೋಡೆಗಳನ್ನು ನಿರ್ಮಾಣ, ಕೆರೆಗಳು ಮತ್ತು ಕಲ್ಯಾಣಿಗಳ ಪುನಶ್ಚೇತನಗೊಳಿಸಲಾಗುವುದು, ಜತೆಗೆ ಗ್ರಾಮಗಳ ಇತರ ಮೂಲಭೂತ ಸೌಕರ್ಯ ಅಭಿವೃದ್ಧಿಗೊಳಿಸಲಾಗುವುದು.
25 ಲಕ್ಷ ರು. ಪ್ರೋತ್ಸಾಹ ಧನ: ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿಗಳು ಸರ್ಕಾರದ ವಿವಿಧ ಯೋಜನೆ, ಕಾರ್ಯಕ್ರಮ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದ್ದಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ರಾಜ್ಯ ಸರ್ಕಾರ 25 ಲಕ್ಷ ರು. ಪ್ರೋತ್ಸಾಹ ಧನ ನೀಡುವುದು ಯೋಜನೆ ವಿಶೇಷತೆಯಾಗಿದೆ.
725 ಗ್ರಾಮ ಪಂಚಾಯಿತಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಮಿತಿ ಆಯ್ಕೆ ಮಾಡಲಿದ್ದು, ಉಳಿದ 25 ಗ್ರಾಮ ಪಂಚಾಯಿತಿಗಳನ್ನು ಸರ್ಕಾರದ ಮಟ್ಟದಲ್ಲಿ ಆಯ್ಕೆ ಮಾಡಲಾಗುವುದು. ಸಮಿತಿ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿದ ನಂತರ ಆಯಾ ಗ್ರಾಮ ಪಂಚಾಯಿತಿಗಳು ಕ್ರಿಯಾ ಯೋಜನೆ ಸಿದ್ಧಪಡಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸುತ್ತವೆ.
ಯಾವ ಜಿಲ್ಲೆಯಲ್ಲಿ ಎಷ್ಟುಗ್ರಾಮ?: ಬಾಗಲಕೋಟೆ ಜಿಲ್ಲೆಯ 24 ಗ್ರಾಮ ಪಂಚಾಯಿತಿ, ಬಳ್ಳಾರಿ-12, ಬೆಳಗಾವಿ-61, ಬೆಂಗಳೂರು ನಗರ-10, ಬೆಂಗಳೂರು ಗ್ರಾಮೀಣ-12, ಬೀದರ್-23, ಚಾಮರಾಜನಗರ-16, ಚಿಕ್ಕಬಳ್ಳಾಪುರ-19, ಚಿಕ್ಕಮಗಳೂರು-28, ಚಿತ್ರದುರ್ಗ-23, ದಕ್ಷಿಣ ಕನ್ನಡ-27, ದಾವಣಗೆರೆ-18, ಗದಗ-15, ಹಾಸನ-33, ಹಾವೇರಿ-27, ಕಲಬುರಗಿ-32, ಕೊಡಗು-13, ಕೋಲಾರ-13, ಕೊಪ್ಪಳ-19, ಮಂಡ್ಯ-28, ಮೈಸೂರು-31, ರಾಯಚೂರು-22, ರಾಮನಗರ-15, ಶಿವಮೊಗ್ಗ-32, ತುಮಕೂರು-40, ಉಡುಪಿ-19, ಉತ್ತರಕನ್ನಡ-28, ವಿಜಯಪುರ-26, ಯಾದಗಿರಿ-15 ಹಾಗೂ ವಿಜಯನಗರ ಜಿಲ್ಲೆ 17 ಗ್ರಾಮ ಪಂಚಾಯಿತಿಗಳನ್ನು ಅಭಿವೃದ್ಧಿಗೊಳಿಸಲು ಉದ್ದೇಶಿಸಲಾಗಿದೆ.
ಮಾನದಂಡ: ಆಯ್ಕೆ ಸಮಿತಿ 2500ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಗ್ರಾಮ.ಪಂಚಾಯಿತಿಗಳನ್ನು ಆಯ್ಕೆ ಮಾಡಬೇಕು, ಪರಿಶಿಷ್ಟಜಾತಿ, ಪಂಗಡ ಹೆಚ್ಚಿರುವ ಗ್ರಾಮಗಳಿಗೆ ಆದ್ಯತೆ ನೀಡಬೇಕು, ಜಲಜೀವನ ಮಿಷನ್ ಯೋಜನೆ ಅನುಷ್ಠಾನಗೊಳಿಸುತ್ತಿರುವ,ಘನ ಮತ್ತು ತ್ಯಾಜ್ಯ ನಿರ್ವಹಣೆ ಅಳವಡಿಸಲು ಕ್ರಮ ಕೈಗೊಳ್ಳುತ್ತಿರುವ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲು ಸೂಚಿಸಲಾಗಿದೆ.
ಎಲ್‌ಐಸಿಯ ಷೇರು ಮಾರಾಟ ಜನರ ವಿಶ್ವಾಸಕ್ಕೆ ನೀಡಿದ ಆಘಾತ!
ನರೇಗಾ, ಜಲಜೀವನ್ ಮಿಷನ್, ಸ್ವಚ್ಛ ಭಾರತ್ ಮಿಷನ್, 15ನೇ ಹಣಕಾಸು ಯೋಜನೆ, ಶಿಕ್ಷಣ ಇಲಾಖೆ ಮೂಲಕ ನೀಡುವ ಅನುದಾನ, ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನ, ಕಾರ್ಪೋರೇಟ್ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಸೇರಿದಂತೆ ವಿವಿಧ ಮೂಲಗಳ ನೆರವಿನೊಂದಿಗೆ ಯೋಜನೆ ಅನುಷ್ಠಾನಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
ಉದ್ಯೋಗವನ್ನು ಭ್ರಷ್ಟರಿಗೆ ಮಾರುವ ಅಂಗಡಿ ಕೆಪಿಎಸ್‌ಸಿ: ಎಎಪಿ ಆರೋಪ
ಸಿಎಂ ಬಸವರಾಜ ಬೊಮ್ಮಾಯಿ ಅವರು ಕಳೆದ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಈ ‘ಅಮೃತ ಪಂಚಾಯ್ತಿ‘ ಯೋಜನೆಯನ್ನು ಘೋಷಣೆ ಮಾಡಿದ್ದರು. ಅಮೃತ ಮಹೋತ್ಸವದ ನೆನಪಿಗಾಗಿ ಈ ಯೋಜನೆಯನ್ನು ಘೋಷಿಸಿದ್ದರು. ಇದನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಚಾಲನೆ ನೀಡಿದ್ದರು,. ಆ ಮೂಲಕ ಅಮೃತ ಗ್ರಾ.ಪಂ. ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿತ್ತು. ಆಯ್ಕೆಯಾದ ಗ್ರಾಮ ಪಂಚಾಯ್ತಿಗಳನ್ನು ಮುಂದಿನ ಬಜೆಟ್ ಒಳಗೆ ಸಮಗ್ರ ಅಭಿವೃದ್ಧಿ ಪಡಿಸಲು ಸರ್ಕಾರ ಮುಂದಾಗಿತ್ತು,
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ