ಆನ್‌ಲೈನ್‌ ಜೂಜಾಟ ನಿಷೇಧ ಮಸೂದೆ ಪಾಸ್‌: ದೋಷಿಗಳಿಗೆ 3 ವರ್ಷ ಜೈಲು, 1 ಲಕ್ಷ ದಂಡ!

By Suvarna NewsFirst Published Sep 24, 2021, 8:03 AM IST
Highlights

* ಮೇಲ್ಮನೆಯಲ್ಲಿ ತಡರಾತ್ರಿವರೆಗೂ ಚರ್ಚೆ: ಅಂಗೀಕಾರ

* ಆನ್‌ಲೈನ್‌ ಜೂಜಾಟ ನಿಷೇಧ ಮಸೂದೆ ಪಾಸ್‌

* ಜೂಜಾಡಿ ಸಿಕ್ಕಿಬಿದ್ದರೆ 3 ವರ್ಷ ಜೈಲು, 1 ಲಕ್ಷ ದಂಡ

ವಿಧಾನಪರಿಷತ್(ಸೆ.24): ಆನ್‌ಲೈನ್‌ ಮೂಲಕ ಆಡುವ ಎಲ್ಲ ರೀತಿಯ ಜೂಜಾಟ(Online Gambling) ನಿಷೇಧಿಸುವ ಕರ್ನಾಟಕ ಪೊಲೀಸ್‌ ತಿದ್ದುಪಡಿ ವಿಧೇಯಕಕ್ಕೆ(Karnataka Police Amendment Bill 2021) ವಿಧಾನ ಪರಿಷತ್‌ ಅಂಗೀಕಾರ ನೀಡಿದೆ. ಇದರಿಂದ ಆನ್‌ಲೈನ್‌ ಜೂಜಾಟ ಆರೋಪ ಸಾಬೀತಾದರೆ 3 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರು.ವರೆಗೂ ದಂಡ ವಿಧಿಸಲಾಗುತ್ತದೆ. ಇದೇ ವೇಳೆ, ಸಿವಿಲ್‌ ಸೇವೆಗಳ ಮಸೂದೆ, ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಮಸೂದೆಗಳು ಕೂಡ ಪಾಸಾಗಿವೆ.

ತಡರಾತ್ರಿ ನಡೆದ ಕಲಾಪದ ಕೊನೆಯಲ್ಲಿ ವಿಧಾನಸಭೆಯಲ್ಲಿ ಅಂಗೀಕೃತ ರೂಪದಲ್ಲಿ ಇರುವ ವಿಧೇಯಕದ ಕುರಿತು ನಡೆದ ಚರ್ಚೆಯ ನಂತರ ವಿಧೇಯಕಕ್ಕೆ ಸದನ ಒಪ್ಪಿಗೆ ನೀಡಿತು.

ವಿಧೇಯಕದಲ್ಲಿ ಜೂಜು ನಿಷೇಧ ಪರಿಧಿಯಿಂದ ಕುದುರೆ ರೇಸ್‌ ಅನ್ನು ಹೊರತುಪಡಿಸಿರುವುದಕ್ಕೆ ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಮಸೂದೆಯ ಉದ್ದೇಶ ಉತ್ತಮವಾಗಿದೆ. ಆದರೆ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡದಿದ್ದರೆ ಉದ್ದೇಶ ಸಫಲವಾಗುವುದಿಲ್ಲ ಎಂದು ಇನ್ನೂ ಕೆಲವು ಸದಸ್ಯರು ಹೇಳಿದರು.

ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಕುದುರೆ ರೇಸ್‌ನಲ್ಲಿ ಕುದುರೆಗಳಿಗೆ ಹಿಂಸೆ ಕೊಡುತ್ತಾರೆ. ಆದರೆ ಈ ವಿಷಯ ಯಾರಿಗೂ ಗೊತ್ತಿಲ್ಲ ಎಂದರು. ಕೆಲವರು ಕುದುರೆ ರೇಸ್‌ ಇರಲಿ, ಬೆಟ್ಟಿಂಗ್‌ ಬೇಡ ಎಂದು ಹೇಳುತ್ತಾರೆ. ಆದರೆ ಬೆಟ್ಟಿಂಗ್‌ ಕಟ್ಟದಿದ್ದರೆ ಕುದುರೆಗಳು ಓಡುವುದೇ ಇಲ್ಲ ಎಂದರು.

ಜೂಜಾಟ ನಿಯಂತ್ರಿಸಲು ಪೊಲೀಸರಿಗೆ ಅಧಿಕಾರ ನೀಡಿದ್ದೀರಿ. ಆದರೆ ಇಲಾಖೆಯಲ್ಲಿ ಇರುವ ಕೆಲವು ಕೆಟ್ಟ ಪೊಲೀಸರು ಇದ್ದಾರೆ. ಬಾರ್‌ನಲ್ಲಿ ಏನು ಬೇಕಾದರೂ ಮಾಡಿಕೋ, ನಮಗೆ ಮಾತ್ರ ಮಾಮೂಲಿ ಕೊಡಿ ಎಂದು ಕೇಳುತ್ತಾರೆ. ಕೆಲವು ಪೊಲೀಸರು ಕೆಲವೊಂದು ಕ್ಲಬ್‌ಗಳನ್ನು ಫಿಕ್ಸ್‌ ಮಾಡಿಕೊಂಡಿರುತ್ತಾರೆ. ಯಾರೋ ಒಬ್ಬನ ಜೊತೆ ಆ ಪೊಲೀಸ್‌ ನಂಟು ಬೆಳೆಸಿಕೊಂಡಿರುತ್ತಾನೆ. ಅವನು ಫೋನ್‌ ಮಾಡಿ ಸರ್‌ ಒಳ್ಳೆಯ ಅಮೌಂಟ್‌ ಇದೆ ಬನ್ನಿ ಎಂದು ಹೇಳುತ್ತಾನೆ. ಪೊಲೀಸರು ರೈಡ್‌ ಮಾಡಿ ಲಕ್ಷಾಂತರ ರು. ಜಪ್ತಿ ಮಾಡುತ್ತಾರೆ ಎಂದರು. ಇದನ್ನೆಲ್ಲ ತಪ್ಪಿಸಬೇಕಾದರೆ ಪೊಲೀಸರಿಗೆ ಸರಿಯಾದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುವಂತೆ ವಿಧೇಯಕ ತನ್ನಿ ಎಂದು ಆಗ್ರಹಿಸಿದರು.

ವಿಧೇಯಕ ಬೆಂಬಲಿಸಿ ಮಾತನಾಡಿದ ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ(Laxman savadi), ಪ್ರತಿಯೊಂದು ಗ್ರಾಮದಲ್ಲಿ ಆಡುವ ಜೂಜಾಟದ ಹಿಂದೆ ರಾಜಕಾರಣಿಗಳು ಇರುತ್ತಾರೆ. ಜೂಜಾಟದ ಮಾಹಿತಿ ತಿಳಿದು ಪೊಲೀಸರು ದಾಳಿ ಮಾಡುತ್ತಾರೆ. ಆದರೆ ಜೂಜುಕೋರರನ್ನು ವಶಕ್ಕೆ ತೆಗೆದುಕೊಳ್ಳುವ ಮುಂಚೆ ರಾಜಕಾರಣಿಗಳು ಕರೆ ಮಾಡುತ್ತಾರೆ. ಅವರನ್ನು ಬಿಡದಿದ್ದರೆ ನೀನು ಏನು ಆಗುತ್ತಿಯಾ ಅಂತ ಕೇಳುತ್ತಾರೆ. ಇಂತಹ ಪರಿಸ್ಥಿತಿಯನ್ನು ಪೊಲೀಸರು ಎದುರಿಸುತ್ತಿದ್ದಾರೆ. ಹಾಗಾಗಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಾಗ ಮಾತ್ರ ಈ ವಿಧೇಯಕಕ್ಕೆ ಸಾರ್ಥಕತೆ ಬರುತ್ತದೆ ಎಂದರು. ಚರ್ಚೆಯಲ್ಲಿ ಬಿಜೆಪಿಯ ಭಾರತಿ ಶೆಟ್ಟಿ, ಡಾ. ತೇಜಸ್ವಿನಿಗೌಡ ಮುಂತಾದವರು ಭಾಗಿಯಾಗಿದ್ದರು.

ಅಂಗೀಕಾರಗೊಂಡ ಮಸೂದೆಗಳು:

ವಿಧಾನಸಭೆಯಿಂದ ಅಂಗೀಕಾರಗೊಂಡ ಹಲವು ವಿಧೇಯಕಗಳಿಗೆ ಗುರುವಾರ ವಿಧಾನ ಪರಿಷತ್‌ನಲ್ಲಿ ಅನುಮೋದನೆ ದೊರೆಯಿತು. ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ ವಿಧೇಯಕ, ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ತಿದ್ದುಪಡಿ ವಿಧೇಯಕ, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ತಿದ್ದುಪಡಿ ವಿಧೇಯಕ, ಕರ್ನಾಟಕ ಪೌರ ಸಭೆಗಳು ಮತ್ತು ಕೆಲವು ಇತರೆ ಕಾನೂನು ತಿದ್ದುಪಡಿ ವಿಧೇಯಕ, ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗಗಳ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ನೀಡಲಾಯಿತು.

ಕಡ್ಡಾಯ ವರ್ಗಾವಣೆ, ವಲಯ ವರ್ಗಾವಣೆಗೆ ಒಳಗಾಗಿದ್ದ ಶಿಕ್ಷಕರಿಗೆ ಅವರು ವರ್ಗಾವಣೆ ಪೂರ್ವದಲ್ಲಿ ಕೆಲಸ ನಿರ್ವಹಿಸಿದ್ದ ಸ್ಥಳಕ್ಕೆ ಒಂದು ಬಾರಿ ಮಾತ್ರ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸುವ 2021ನೇ ಸಾಲಿನ ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕಕ್ಕೆ ಗುರುವಾರ ವಿಧಾನ ಪರಿಷತ್‌ನಲ್ಲೂ ಅನುಮೋದನೆ ದೊರೆಯಿತು.

click me!