ಶರಾವತಿ ಸಂತ್ರಸ್ತರಿಗೆ ಭೂಮಿ ನೀಡಲು ಸಿಎಂ ಬೊಮ್ಮಾಯಿ ಸಭೆ

Kannadaprabha News   | Asianet News
Published : Sep 24, 2021, 07:51 AM IST
ಶರಾವತಿ ಸಂತ್ರಸ್ತರಿಗೆ ಭೂಮಿ ನೀಡಲು ಸಿಎಂ ಬೊಮ್ಮಾಯಿ ಸಭೆ

ಸಾರಾಂಶ

*   ಅರಣ್ಯ ರಕ್ಷಣೆ ಕಾಯ್ದೆಯಡಿ ಪೂರ್ಣ ಮಾಹಿತಿ ನೀಡಲು ಸೂಚನೆ *   ಶಿವಮೊಗ್ಗ ಜಿಲ್ಲೆ ಇನ್ನಿತರ ಸಮಸ್ಯೆಗಳ ಬಗ್ಗೆಯೂ ಶಾಸಕರ ಜತೆ ಚರ್ಚೆ *   ಸಂತ್ರಸ್ತರಿಗೆ ಪುನರ್‌ ವಸತಿ ಕಲ್ಪಿಸಲು ಹೊಸ ಸಮೀಕ್ಷೆ   

ಬೆಂಗಳೂರು(ಸೆ.24): ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಹಕ್ಕು ನೀಡುವ ಸಂಬಂಧ 1978ರ ಅರಣ್ಯ ಸಂರಕ್ಷಣೆ ಕಾಯ್ದೆ ಅನ್ವಯ ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯಲು ಸಂಪೂರ್ಣ ಮಾಹಿತಿ ಸಂಗ್ರಹಿಸಿ ಕಳುಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸೂಚಿಸಿದ್ದಾರೆ.

ಗುರುವಾರ ಶಿವಮೊಗ್ಗ(Shivamogga) ಜಿಲ್ಲೆಗೆ ಸಂಬಂಧಿಸಿದಂತೆ ಶರಾವತಿ ಮುಳುಗಡೆಗೆ ಒಳಗಾದ ರೈತರ ಸಮಸ್ಯೆಗಳು, ಶರಾವತಿ ಅಭಯಾರಣ್ಯ, ಅರಣ್ಯ ಕಾಯ್ದೆ ಹಾಗೂ ಸಿ ಡಿ ಭೂಮಿಯ ಕುರಿತಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಸಂಬಂಧ ಹೈಕೋರ್ಟ್‌ ತಡೆಯಾಜ್ಞೆ ನೀಡಿ ಸೂಚಿಸಿರುವಂತೆ ಅನುಸೂಚಿತ ಮೀಸಲು ಅರಣ್ಯ ಪ್ರದೇಶ ಡಿನೋಟಿಫಿಕೇಷನ್‌ ನಿರ್ಧಾರ ಕೈಗೊಳ್ಳುವ ಮುನ್ನ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿಗಳು ರಚಿಸಿದ್ದ ಟಾಸ್ಕ್‌ಫೋರ್ಸ್‌ ಕ್ರಿಯಾಶೀಲಗೊಳಿಸಲು ಟಾಸ್ಕ್‌ಫೋರ್ಸ್‌ ಅಧಿಕಾರಿಗಳನ್ನು ನೇಮಿಸಲಾಗುವುದು. ಸಂತ್ರಸ್ತರಿಗೆ ಪುನರ್‌ ವಸತಿ ಕಲ್ಪಿಸಲು ಹೊಸ ಸಮೀಕ್ಷೆ ನಡೆಸಬೇಕಿದ್ದು, ಈ ಕಾರ್ಯವನ್ನು ನಾಲ್ಕೈದು ತಿಂಗಳೊಳಗಾಗಿ ಮುಕ್ತಾಯ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಇದಕ್ಕಾಗಿ ವಿಶೇಷ ಜಿಲ್ಲಾಧಿಕಾರಿ, ಅರಣ್ಯ ವ್ಯವಸ್ಥಾಪನಾಧಿಕಾರಿಗಳನ್ನು ತಕ್ಷಣವೇ ನೇಮಿಸಲಾಗುವುದು ಎಂದು ತಿಳಿಸಿದರು.

3 ವರ್ಷವಾದ್ರೂ ಪೂರ್ಣಗೊಳ್ಳದ ಇನ್ಫೋಸಿಸ್ ಮನೆಗಳು, ಮನೆಗಾಗಿ ಕಾಯುತ್ತಿದ್ದಾರೆ ಸಂತ್ರಸ್ತರು.!

ಕುವೆಂಪು ವಿಶ್ವವಿದ್ಯಾಲಯದ ಅರಣ್ಯ ಭೂಮಿ ಗುತ್ತಿಗೆ ನವೀಕರಣಕ್ಕೆ ಅರಣ್ಯ ಮತ್ತು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಕ್ರಮ ಜರುಗಿಸುವಂತೆ ಇದೇ ವೇಳೆ ಅಧಿಕಾರಿಗಳಿಗೆ ಸೂಚಿಸಿದರು. ಕಲ್ಲು ಗಣಿಗಾರಿಕೆ ಸ್ಥಗಿತಗೊಂಡಿರುವುದರಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿದೆ ಎಂದು ಜಿಲ್ಲೆಯ ಶಾಸಕರ ಮನವಿಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ ಅವರು, ಜಿಲ್ಲೆಯಲ್ಲಿ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬಾರದ ಪರವಾನಗಿ ಹೊಂದಿರುವ ಕಲ್ಲು ಗಣಿಕಾರಿಕೆಗಳನ್ನು ಪ್ರಾರಂಭಿಸಲು ಅನುಮತಿ ನೀಡುವಂತೆ ಸೂಚಿಸಿದರು. ವಾರದೊಳಗೆ ಸಾಧ್ಯವಿರುವಲ್ಲಿ ಕಲ್ಲು ಗಣಿಗಾರಿಕೆಯನ್ನು ಪ್ರಾರಂಭಿಸಲು ಅನುಮತಿ ನೀಡಲು ಅವರು ಸೂಚಿಸಿದರು.

ಸಂರಕ್ಷಿತ ಅರಣ್ಯಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಅರ್ಜಿಗಳನ್ನು ಆದ್ಯತೆ ಮೇರೆಗೆ ಇತ್ಯರ್ಥಗೊಳಿಸಬೇಕು. ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸಭೆ ನಡೆಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದರು.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವರಾದ ಶಿವರಾಮ್‌  ಹೆಬ್ಬಾರ್‌, ಆರಗ ಜ್ಞಾನೇಂದ್ರ, ಉಮೇಶ್‌ ಕತ್ತಿ, ಸುನೀಲ್‌ ಕುಮಾರ್‌, ಎಂಎಸ್‌ಐಎಲ್‌ ಅಧ್ಯಕ್ಷ ಹರತಾಳು ಹಾಲಪ್ಪ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಇದ್ದರು.

ಶಿವಮೊಗ್ಗ ನಗರದ ಪ್ರಮುಖ ಭಾಗಗಳು ಸೇರಿದಂತೆ ಜನವಸತಿ ಹಾಗೂ ಸರ್ಕಾರಿ ಕಟ್ಟಡಗಳಿರುವ ಪ್ರದೇಶಗಳು ಅಭಯಾರಣ್ಯದ ವ್ಯಾಪ್ತಿಗೆ ಬರುತ್ತಿದ್ದು, ಗಡಿ ಪುನರ್‌ ನಿಗದಿಪಡಿಸುವುದರಿಂದ ಸಮಸ್ಯೆ ಬಗೆಹರಿಸಬಹುದು. ಇನ್ನು ಶಿವಮೊಗ್ಗ, ಶಿಕಾರಿಪುರ -ರಾಣೆಬೆನ್ನೂರು ಹೊಸ ರೈಲ್ವೆ ಮಾರ್ಗದ ಅರಣ್ಯ ಇಲಾಖೆ ಯೋಜನೆಗಳ ಪ್ರಗತಿಯ ವೇಗ ಹೆಚ್ಚಿಸುವ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ತಿಳಿಸಿದ್ದಾರೆ.  
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌
ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ