
ಬೆಂಗಳೂರು (ನ.4): ಚುನಾವಣೆಗೂ ಮುನ್ನ ಬಡವರ ಬದುಕನ್ನು ಭಾಗ್ಯ ಮಾಡುತ್ತೇವೆ ಎನ್ನುವ ನಿಟ್ಟಿನಲ್ಲಿ ಐದು ಗ್ಯಾರಂಟಿಗಳನ್ನು ಸರ್ಕಾರ ಘೋಷಣೆ ಮಾಡಿತ್ತು. ಇದರ ಬೆನ್ನಲ್ಲಿಯೇ ವಿದ್ಯುತ್ ದರವನ್ನು ಏರಿಕೆ ಮಾಡಿದ್ದ ಹೊಸ ಸರ್ಕಾರ ಈಗ ಬಸ್ ಟಿಕೆಟ್ ದರವನ್ನು ಏರಿಕೆ ಮಾಡಲು ಸಜ್ಜಾಗಿದೆ. ಇದಕ್ಕಿಂತ ಹೆಚ್ಚು ಆತಂಕಕಾರಿ ಸುದ್ದಿ ಏನೆಂದರೆ, ವಿದ್ಯುತ್ ರೀತಿ ವರ್ಷಕ್ಕೊಮ್ಮೆ ಬಸ್ ಟಿಕೆಟ್ ದರ ಏರಿಕೆ ಮಾಡುವ ಪ್ರಸ್ತಾಪವನ್ನು ಸರ್ಕಾರ ಮಾಡಿದೆ. ಇದರೊಂದಿಗೆ ನೀರು, ವಿದ್ಯುತ್, ಹಾಲಿನ ಬೆಲೆಯಲ್ಲಿ ಏರಿಕೆ ಕಂಡಿದ್ದ ಜನಸಾಮಾನ್ಯನಿಗೆ ಶೀಘ್ರದಲ್ಲಿಯೇ ಬಸ್ ಟಿಕೆಟ್ ದರ ಏರಿಕೆ ಬಿಸಿ ತಟ್ಟಲಿದೆ. ಅದಲ್ಲದೆ, ಇನ್ನೂ ಪ್ರತಿ ವರ್ಷ ಕೂಡ ಬಸ್ ಟಿಕೆಟ್ ದರ ಏರಿಕೆ ಪ್ರಸ್ತಾಪ ಸರ್ಕಾರದ ಮುಂದೆ ಇರಲಿದೆ. ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಕಾಲಕಾಲಕ್ಕೆ ಪ್ರಯಾಣ ದರ ಹೆಚ್ಚಳಕ್ಕೆ ಆರ್ಥಿಕ ಇಲಾಖೆ ಸೂಚನೆ ನೀಡಿದೆ ಎನ್ನಲಾಗದೆ. ಈ ಕುರಿತು ಸಮಿತಿ ರಚಿಸಲು ಸಾರಿಗೆ ಇಲಾಖೆಗೆ ಆರ್ಥಿಕ ಇಲಾಖೆ ಸೂಚನೆ ನೀಡಿದೆ.
KERC ಮಾದರಿಯಲ್ಲೇ ಟಿಕೆಟ್ ದರವನ್ನು ಎಷ್ಟು ಏರಿಸಬೇಕು ಎನ್ನುವುದನ್ನು ನಿರ್ಧರಿಸಲು ಆಯೋಗವನ್ನು ರಚಿಸುವಂತೆ ಸಾರಿಗೆ ಇಲಾಖೆಗೆ ಸೂಚನೆ ನೀಡಲಾಗಿದೆ. ಡೀಸೆಲ್, ಬಿಡಿ ಭಾಗಗಳು ಸೇರಿದಂತೆ ನೌಕರರ ವೇತನ ಹೆಚ್ಚಳ ಇನ್ನಿತರ ಕಾರಣಗಳಿಂದಾಗಿ ನಿಗಮದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಹೀಗಾಗಿ ದರ ಪರಿಷ್ಕರಣೆಗೆ ಕರ್ನಾಟಕ ಸಾರಿಗೆ ನಿಗಮ ಮುಂದಾಗಿದೆ. ನಾಲ್ಕು ನಿಗಮಗಳಿಂದ ಸಾರಿಗೆ ಇಲಾಖೆ ಈವರೆಗೂ 4 ಸಾವಿರ ಕೋಟಿ ಸಾಲದಲ್ಲಿದೆ. ಹೀಗಾಗಿ ವಿದ್ಯುತ್ ದರದಂತೆ ಪ್ರಯಾಣ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ತಿಳಿಸಿದೆ.
ರಾಜ್ಯದಲ್ಲಿ ಪ್ರತಿ ವರ್ಷ ವಿದ್ಯುತ್ ದರ ಹೆಚ್ಚಳವಾಗುತ್ತಿದೆ. ಬೆಸ್ಕಾಂ ಸೇರಿದಂತೆ ಎಲ್ಲಾ ಐದು ಹೆಸ್ಕಾಂಗಳು ವಿದ್ಯುತ್ ಖರೀದಿ,ವೆಚ್ಚಕ್ಕೆ ತಕ್ಕಂತೆ ದರ ಏರಿಕೆ ಮಾಡಲು KERC ಗೆ ಪ್ರಸ್ತಾವನೆ ಸಲ್ಲಿಸುತ್ತದೆ. KERC ಎಲ್ಲಾ ಹೆಸ್ಕಾಂ ಗಳ ಆದಾಯ ಖರ್ಚು ಅಂದಾಜಿಸಿ ಬೆಲೆ ಏರಿಕೆ ಮಾಡುತ್ತದೆ. ಅದೇ ಮಾದರಿಯನ್ನು ಸಾರಿಗೆ ಇಲಾಖೆಯ ನಾಲ್ಕು ನಿಗಮಗಳಿಗೂ ಅಳವಡಿಸಲು ಆರ್ಥಿಕ ಇಲಾಖೆ ಸೂಚನೆ ನೀಡಿದೆ. ಪ್ರತಿ ವರ್ಷ ಸಾರಿಗೆ ಇಲಾಖೆಯು ನಾಲ್ಕು ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನು ಆಯೋಗದ ಮುಂದೆ ಇರಿಸಲಾಗುತ್ತದೆ. ಆರ್ಥಿಕ ಪರಿಸ್ಥಿತಿ ತಕ್ಕಂತೆ ಪ್ರಯಾಣ ದರ ಹೆಚ್ಚಳದ ಬಗ್ಗೆ ತೀರ್ಮಾನ ಮಾಡಲಾಗುತ್ತದೆ.
ಚಾಮರಾಜನಗರ: ಕೊಳ್ಳೇಗಾಲ ಬಸ್ ನಿಲ್ದಾಣ ಅನೈತಿಕ ಚಟುವಟಿಕೆ ತಾಣವಾಗ್ತಿದೆಯಾ?
ಸದ್ಯಕ್ಕೆ ದರ ಏರಿಕೆ ಇಲ್ಲ: ಬಸ್ ಪ್ರಯಾಣ ದರ ನಿಗದಿಗೆ ಪ್ರತ್ಯೇಕ ಆಯೋಗ ರಚನೆಯಾದರೂ, ಸದ್ಯಕ್ಕೆ ಪ್ರಯಾಣ ದರ ಹೆಚ್ಚಳ ಮಾಡದೇ ಇರುವ ನಿರ್ಧಾರವನ್ನು ರಾಜ್ಯ ಸ್ಕಾರ ಮಾಡಿದೆ. ಹಾಗೇನಾದರೂ ಈಗ ಟಿಕೆಟ್ ದರ ಏರಿಕೆ ಮಾಡಿದಲ್ಲಿ, ಲೋಕಸಭಾ ಚುನಾವಣೆಯ ವೇಳೆ ಜನರಿಂದ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಬಹುದು ಹಾಗೂ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎನ್ನುವ ಕಾರಣಕ್ಕೆ ಟಿಕೆಟ್ ದರ ಏರಿಕೆ ಪ್ರಸ್ತಾಪವನ್ನು ಸದ್ಯ ಮಾಡಿಲ್ಲ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಸಾರಿಗೆ ಇಲಾಖೆಯಲ್ಲಿ ಶೀಘ್ರ 8000 ಹುದ್ದೆಗಳಿಗೆ ನೇಮಕಾತಿ: ಸಚಿವ ರಾಮಲಿಂಗಾ ರೆಡ್ಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ