ಹತ್ತಿ ಬೆಳೆ ನೋಡಲು ಮೂವರು ಮಕ್ಕಳೊಂದಿಗೆ ಬೈಕ್ ಮೇಲೆ ಹೋದ ರೈತ ಅಪಘಾತಕ್ಕೆ ಬಲಿ; ಮಕ್ಕಳೂ ಸಾವು!

By Ravi JanekalFirst Published Nov 4, 2023, 1:44 PM IST
Highlights

ಈ ರಸ್ತೆಯಲ್ಲಿ ದಿನನಿತ್ಯ ನೂರಾರು ಜನರು ಸಂಚಾರ ಮಾಡ್ತಾರೆ. ಆದ್ರೆ ರಸ್ತೆ ಪಕ್ಕದಲ್ಲಿನ ಗಿಡಗಂಟೆಗಳು ಹೆಮ್ಮರದಂತೆ ಬೆಳೆದು ನಿಂತಿದ್ದು, ವಾಹನ ಸವಾರರ ಜೀವಕ್ಕೆ ಕುತ್ತು ತಂದಿವೆ. ಬೃಹದಾಕಾರದಲ್ಲಿ ರಸ್ತೆಗೆ ಅಡ್ಡಾದಿಡ್ಡಿ ಬೆಳೆದಿರುವ ಗಿಡಗಂಟೆಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಇದೀಗ ಇದೇ ರಸ್ತೆಯಲ್ಲಿ ಅಪಘಾತಕ್ಕೆ ಒಂದೇ ಕುಟುಂಬದ ಮೂವರು ಬಲಿಯಾಗಿರುವ ದುರಂತ ನಡೆದುಹೋಗಿದೆ.

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ನ.4): ಈ ರಸ್ತೆಯಲ್ಲಿ ದಿನನಿತ್ಯ ನೂರಾರು ಜನರು ಸಂಚಾರ ಮಾಡ್ತಾರೆ. ಆದ್ರೆ ರಸ್ತೆ ಪಕ್ಕದಲ್ಲಿನ ಗಿಡಗಂಟೆಗಳು ಹೆಮ್ಮರದಂತೆ ಬೆಳೆದು ನಿಂತಿದ್ದು, ವಾಹನ ಸವಾರರ ಜೀವಕ್ಕೆ ಕುತ್ತು ತಂದಿವೆ. ಬೃಹದಾಕಾರದಲ್ಲಿ ರಸ್ತೆಗೆ ಅಡ್ಡಾದಿಡ್ಡಿ ಬೆಳೆದಿರುವ ಗಿಡಗಂಟೆಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಇದೀಗ ಇದೇ ರಸ್ತೆಯಲ್ಲಿ ಅಪಘಾತಕ್ಕೆ ಒಂದೇ ಕುಟುಂಬದ ಮೂವರು ಬಲಿಯಾಗಿರುವ ದುರಂತ ನಡೆದುಹೋಗಿದೆ.

ಒಂದೇ ಕುಟುಂಬದ ಮೂವರು ಬಲಿ:

ಇಡೀ ಗ್ರಾಮಕ್ಕೆ ಗ್ರಾಮವೇ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಎಲ್ಲರ ಮಮ್ಮಲ‌ ಮರುಗಿದ್ದಾರೆ. ಸುಖ ಸಂಸಾರಕ್ಕೆ ಯಾರ ಕಣ್ಣು ಬಿತ್ತೊ ಇಡೀ ಬದುಕೇ ಬರ್ಬಾದ್ ಆಗಿದೆ. ಹೌದು ಅಂತದ್ದೊಂದು ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.

ತುಮಕೂರು: ಮರಳೂರು ಕೆರೆ ಏರಿ ಬಳಿ ಖಾಸಗಿ ಬಸ್- ಓಮಿನಿ ಕಾರು ಅಪಘಾತ, ಇಬ್ಬರ ಸಾವು

ತನ್ನ ಮೂರು ಜನ ಮಕ್ಕಳು, ಹೆಂಡತಿ ಹಾಗೂ ತಾಯಿಯೊಂದಿಗೆ ಸುಖವಾಗಿ ಬದುಕು ಸಾಗಿಸುತ್ತಿದ್ದ ರೈತ ಸಾಬಣ್ಣ. ನಿನ್ನೆ ಸಂಜೆ ವೇಳೆಗೆ ತನ್ನ ಜಮೀನಿನಲ್ಲಿನ ಹತ್ತಿ ಬೆಳೆ ನೋಡಲು ಮೂರು ಮಕ್ಕಳೊಂದಿಗೆ ಬೈಕ್ ನಲ್ಲಿ ಶಿವಪುರ ಗ್ರಾಮದ ಜಮೀನಿಗೆ ಹೋಗಿದ್ದಾನೆ. ಇಕ್ಕೆಲಗಳಲ್ಲಿ ಬೆಳೆದಿರುವ ಗಿಡಗಂಟೆಯಿಂದ ಬೈಕ್ ಹಾಗೂ ಬಸ್ ನಡುವೆ ಭೀಕರ ಅಪಘಾತ ನಡೆದು ಸ್ಥಳದಲ್ಲೇ  38 ವರ್ಷದ ಸಾಬಣ್ಣ ಹಾಗೂ ಆತನ  7 ವರ್ಷದ ಮನೋಜ್  ಮೃತಪಟ್ಟಿದ್ದಾರೆ. ಇನ್ನಿಬ್ಬರು ಹೆಣ್ಣುಮಕ್ಕಳು  9 ವರ್ಷದ ರಂಜಿತಾ ಮಾರ್ಗಮಧ್ಯೆ ಆಸ್ಪತ್ರೆಗೆ ದಾಖಲಿಸುವಾಗ ಉಸಿರು ಚೆಲ್ಲಿದ್ದಾಳೆ.  ಒಬ್ಬ ಮಗಳು ಜ್ಯೋತಿ ರಾಯಚೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ಕುಟುಂಬದ ಮೂವರ ದುರ್ಮರಣ ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದತಂತಾಗಿದೆ. ಜೊತೆಗೆ ಇಡೀ ಕುಟುಂಬಕ್ಕೆ  ಆಧಾರಸ್ತಂಭದಂತಿದ್ದ ಸಾಬಣ್ಣ ಹಾಗೂ ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.

ಯಮಸ್ವರೂಪಿಯಾದ ರಸ್ತೆ ಪಕ್ಕದ ಜಂಗಲ್

ಶಿವಪುರ ಗ್ರಾಮದ ಒಂದೇ ಕುಟುಂದ ಮೂವರ ಸಾವಿಗೆ ಯಮಸ್ವರೂಪಿ ರೀತಿಯಲ್ಲಿರುವ ರಸ್ತೆ ಪಕ್ಕದಲ್ಲಿ ಹೆಮ್ಮರದಂತೆ ಬೆಳೆದು ನಿಂತಿರುವ ಗಿಡಗಂಟೆ ಜಂಗಲ್ ಕಟಿಂಗ್ ಮಾಡದಿರುವುದೇ ಅಪಘಾತಕ್ಕೆ ಕಾರಣ ಅಂತ ಗ್ರಾಮಸ್ಥರ ಆರೋಪವಾಗಿದೆ. ಶಿವಪುರ ಗ್ರಾಮಸ್ಥರು ಗೋನಾಲ್ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಕಳೆದ ಕೆಲವು ದಿನಗಳಿಂದ ರಸ್ತೆ ಪಕ್ಕದ ಗಿಡಗಂಟೆ ಜಂಗಲ್ ಕಟ್ ಮಾಡುವಂತೆ ಮನವಿ ಮಾಡಿದ್ರು. ಆದ್ರೆ ಪಂಚಾಯತ್ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದರಿಂದಲೇ ಇಂತಹ ದುರಂತಕ್ಕೆ ಕಾರಣವಾಗಿದೆ. ಅಗ್ನಿಹಾಳ ಗ್ರಾಮದಿಂದ ವಡಗೇರಾ ಪಟ್ಟಣದವರೆಗೆ ಯಾವುದೇ ರೀತಿಯಲ್ಲಿ ಜಂಗಲ್ ಕಟಿಂಗ್ ಮಾಡಿಲ್ಲ. ಇದು ಸುಮಾರು 25 ಕಿ.ಮೀ ದೂರದ ಜಂಗಲ್ ಕಟಿಂಗ್ ರಸ್ತೆ ತುಂಬೆಲ್ಲಾ ಆವರಿಸಿ ಅರ್ಧ ರಸ್ತೆಯೇ ಮುಚ್ಚಿ ಹೋಗಿದೆ. ಇದರಿಂದಾಗಿ ರಸ್ತೆ ಟರ್ನಿಂಗ್ ಪಾಯಿಂಟ್ ನಲ್ಲಿ‌ ಮುಂಬರುವ ವಾಹನಗಳೇ ಕಾಣುವುದಿಲ್ಲ. ಹೀಗಾಗಿ ಮಕ್ಕಳೊಂದಿಗೆ ಜಮೀನಿಗೆ ತೆರಳುತ್ತಿದ್ದ ಸಾಬಣ್ಣ ಅಪಘಾತದಲ್ಲಿ ಪುಟಾಣಿ ಮಕ್ಕಳೊಂದಿಗೆ ಬಲಿಯಾಗಿದ್ದಾನೆ‌. 

ಕಲಬುರಗಿ: ಭೀಕರ ರಸ್ತೆ ಅಪಘಾತ ನೇಪಾಳ ಮೂಲದ ಒಂದೇ ಕುಟುಂಬದ ಐವರು ಸಾವು!

ಗ್ರಾಮ ಪಂಚಾಯತ್ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮೂರು ಬಡ ಜೀವಗಳು ಬಲಿಯಾಗಿವೆ. ಸಾಬಣ್ಣನನ್ನು ಕಳೆದುಕೊಂಡ ಕುಟುಂಬ ಅನಾಥವಾಗಿದೆ. ಮೂವರ ಸಾವಿಗೆ ಯಾರು ಹೊಣೆಗಾರರು ಅಂತ ಗ್ರಾಮಸ್ಥರು ಆಕ್ರೋಶ  ವ್ಯಕ್ಯಪಡಿಸಿದ್ದಾರೆ. ಈ ಅಪಘಾತವು  ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಡೆದಿದ್ದು, ಸಾಬಣ್ಣನ ಕುಟುಂಬಕ್ಜೆ ಸೂಕ್ತ ಪರಿಹಾರ ನೀಡಿ ಸರ್ಕಾರ ನೆರವಾಗಬೇಕು ಅಂತ ಗ್ರಾಮಸ್ಥರು ಒತ್ತಾಯ ಮಾಡ್ತಿದ್ದಾರೆ. 

ಒಟ್ಟಿನಲ್ಲಿ ತನ್ನ ಪಾಡಿಗೆ ಸಂಸಾರ ನಡೆಸುತ್ತಿದ್ದ ಸಾಬಣ್ಣ ಹಾಗೂ ಇಬ್ಬರು ಮುದ್ದಾದ ಮಕ್ಕಳ ಸಾವು ಎಲ್ಲರ ಕರುಳು ಕಿತ್ತಿದಂತಾಗಿದೆ. ಹೀಗಾದ್ರು ಪಂಚಾಯತ್ ಅಧಿಕಾರಿಗಳು ಭೀಕರ ಅಪಘಾತಕ್ಕೆ ಕಾರಣವಾದ ರಸ್ತೆ ಪಕ್ಕದ ಜಂಗಲ್ ಕಟಿಂಗ್ ಮಾಡಿ ಅಗತ್ಯ ಕ್ರಮ ವಹಿಸಬೇಕಾಗಿದೆ.

click me!