ಮತ್ತೆ 14 ತಾಲೂಕು ಬರ ಪೀಡಿತ ಪಟ್ಟಿಗೆ

By Web DeskFirst Published Oct 16, 2018, 9:15 AM IST
Highlights

ಈಗಾಗಲೇ ರಾಜ್ಯದ 23 ಜಿಲ್ಲೆಗಳ 86 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದ್ದ ರಾಜ್ಯ ಸರ್ಕಾರ ಸೋಮವಾರ ಮತ್ತೆ 14 ತಾಲೂಕುಗಳನ್ನು ಬರಪೀಡಿತ ಎಂದು ಪ್ರಕಟಿಸಿದೆ.

ಬೆಂಗಳೂರು: ತೀವ್ರ ಮಳೆ ಕೊರತೆ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ 23 ಜಿಲ್ಲೆಗಳ 86 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದ್ದ ರಾಜ್ಯ ಸರ್ಕಾರ ಸೋಮವಾರ ಮತ್ತೆ 14 ತಾಲೂಕುಗಳನ್ನು ಬರಪೀಡಿತ ಎಂದು ಪ್ರಕಟಿಸಿದೆ. 2018 -  19 ನೇ ಸಾಲಿನ ಮುಂಗಾರು ಹಂಗಾಮಿಗೆ ಈಗಾಗಲೇ 23 ಜಿಲ್ಲೆಗಳ 86 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. 

ತೀವ್ರ ಮಳೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಮತ್ತೆ ಹೊಸದಾಗಿ 14 ಬರಪೀಡಿತ ತಾಲೂಕುಗಳನ್ನು ಘೋಷಿಸಿದೆ.  ವಾಡಿಕೆಗಿಂತ ಶೇ. 60 ರಷ್ಟು ಮಳೆ ಕೊರತೆ ಅಥವಾ ಸತತ ಮೂರು ವಾರ ಅಥವಾ ಅಧಿಕ ಶುಷ್ಕ ವಾತಾವರಣ, ತತ್ಪರಿಣಾಮ ಮಾನದಂಡಗಳಾದ ತೇವಾಂಶ ಕೊರತೆ, ಅಂತರ್ಜಲ ಕುಸಿತ ಸೂಚ್ಯಂಕಗಳನ್ನು ಪರಿಗಣಿಸಿ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗುತ್ತದೆ.

14 ತಾಲೂಕುಗಳು: ಬೆಂಗಳೂರು ನಗರ ಜಿಲ್ಲೆಯ ಆನೇಕಲ್, ಬೆಂ.ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ತುಮಕೂರಿನ ತುರುವೇಕೆರೆ, ಹೊಳಲ್ಕೆರೆ, ಹೊಸದುರ್ಗ, ದಾವಣಗೆರೆ ಜಿಲ್ಲೆಯ ದಾವಣಗೆರೆ, ಜಗಳೂರು, ಮಂಡ್ಯದ ಪಾಂಡವಪುರ, ಬೀದರ್ ಜಿಲ್ಲೆಯ ಔರಾದ್, ಬೆಳಗಾವಿ ಜಿಲ್ಲೆಯ ಅಥಣಿ, ಬಾಗಲಕೋಟೆ ಜಿಲ್ಲೆಯ ಬೀಳಗಿ ಮತ್ತು ಮುಧೋಳ ತಾಲೂಕು ಗಳನ್ನು ಬರಪೀಡಿತ ವೆಂದು ಸರ್ಕಾರ ಘೋಷಿಸಿದೆ.

ಬರದ ತೀವ್ರತೆಯನ್ನು ಅಂದಾಜಿಸಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಬರಪೀಡಿತ ತಾಲೂಕುಗಳಲ್ಲಿ ಬೆಳೆ ಹಾನಿ ಬಗ್ಗೆ ಕೂಡಲೇ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ಸೂಚನೆ ನೀಡಿದೆ. ಬರಪೀಡಿತ ತಾಲೂಕುಗಳಲ್ಲಿ ಭೂ ರಹಿತ ಕಾರ್ಮಿಕರು, ಸಣ್ಣ ಮತ್ತು ಅತಿ  ಸಣ್ಣ ರೈತರಿಗೆ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಒದಗಿಸುವ ಕ್ರಮ, ಕುಡಿಯುವ ನೀರು ಸರಬರಾಜು, ಮೇವು ಸರಬರಾಜು ಮತ್ತು ಜಾನುವಾರು ಸಂರಕ್ಷಣೆ ಸೇರಿದಂತೆ ಬರ ಪರಿಹಾರ ಕಾರ್ಯಕ್ರಮಗಳನ್ನು ಎಸ್ ಡಿಆರ್‌ಎಫ್, ಎನ್‌ಡಿಆರ್‌ಎಫ್ ಪ್ರಕಾರ ಕೈಗೊಳ್ಳುವಂತೆ ಸೂಚನೆ ನೀಡಿದೆ.

click me!