
ಬೆಂಗಳೂರು (ಮೇ 30): ರಾಜ್ಯದಲ್ಲಿ ಈಗಾಗಲೇ ಸರ್ಕಾರಿ ನೌಕರರಿಗೆ ಶೇ.4 ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿದ ರಾಜ್ಯ ಸರ್ಕಾರ ಈಗ ನೌಕರರ ವರ್ಗಾವಣೆಗೂ ಚಾಲನೆಯನ್ನು ನೀಡಿ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ತುಟ್ಟಿಭತ್ಯೆ ಶೇ.4 ಹೆಚ್ಚಳ ಮಾಡಿ ಸಿಹಿ ಸುದ್ದಿಯನ್ನು ನೀಡಿದೆ. ಈಗ ಹಲವು ವರ್ಷಗಳಿಂದ ವರ್ಗಾವಣೆಗೆ ಕಾದು ಕುಳಿತಿದ್ದ ನೌಕರರಿಗೆ ಅನುಕೂಲ ಆಗುವಂತೆ ವರ್ಗಾವಣೆಗೂ ಚಾಲನೆಯನ್ನು ನೀಡಲಾಗಿದೆ. ಜೂನ್ 1 ರಿಂದ 15 ರವರೆಗೆ ವರ್ಗಾವಣೆ ಮಾಡಲು ಸೂಚನೆ ನೀಡಲಾಗಿದೆ. ಮುಖ್ಯವಾಗಿ ಸರ್ಕಾರಿ ನೌಕರರ ವರ್ಗಾವಣೆ ಜವಾಬ್ದಾರಿಯನ್ನು ಸಂಪೂರ್ಣವಾಗಿ ಆಯಾ ಸಂಬಂಧಿತ ಇಲಾಖಾ ಸಚಿವರಿಗೆ ಅಧಿಕಾರ ನೀಡಲಾಗಿದೆ.
ಕರ್ನಾಟಕ ಸರ್ಕಾರಿ ನೌಕರರಿಗೆ ಶೇ.4 ತುಟ್ಟಿಭತ್ಯೆ ಹೆಚ್ಚಳ: ಜನವರಿಯಿಂದ ಪೂರ್ವಾನ್ವಯ
ಸರ್ಕಾರದ 2023-24ನೇ ಸಾಲಿನಲ್ಲಿ ಮಾಡಲಾಗುತ್ತಿರುವ ಸರ್ಕಾರಿ ನೌಕರರ ವರ್ಗಾವಣೆಗೆ ಕೆಲವು ಮಾರ್ಗಸೂಚಿಗಳನ್ನು ಕೂಡ ನೀಡಲಾಗಿದೆ. ಪ್ರತಿ ವರ್ಷ ಮೇ ಮತ್ತು ಜೂನ್‌ನಲ್ಲಿ ಮಾರ್ಗಸೂಚಿಗಳ ಷರತ್ತಿಗೊಳಪಟ್ಟು ವರ್ಗಾವಣೆಗಳನ್ನು ಮಾಡಬಹುದಾಗಿದೆ. ರಾಜ್ಯದಲ್ಲಿ 2023-24ನೇ ಸಾಲಿಗೆ ಗ್ರೂಪ್ ಎ, ಗ್ರೂಪ್-ಬಿ, ಗ್ರೂಪ್-ಸಿ ಮತ್ತು ಗ್ರೂಪ್ ಡಿ ವರ್ಗದ ಅಧಿಕಾರಿ/ನೌಕರರಿಗೆ ಅನ್ವಯವಾಗುವಂತೆ ಒಂದು ಜ್ಯೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇಕಡಾ 6ರಷ್ಟನ್ನು ಮೀರದಂತೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ ಪ್ರತ್ಯಾಯೋಜಿಸಲು ನಿರ್ಧರಿಸಲಾಗಿದೆ.
ಇಲಾಖಾ ಸಚಿವರಿಗೆ ಸಂಪೂರ್ಣ ಅಧಿಕಾರ: ಸರ್ಕಾರಿ ಆದೇಶದಲ್ಲಿ ನಮೂದಿಸಿರುವ ಷರತ್ತುಗಳಿಗೊಳಪಟ್ಟು, ರಾಜ್ಯದಲ್ಲಿ 2023-24ನೇ ಸಾಲಿಗೆ ಗ್ರೂಪ್ ಎ, ಬಿ, ಗ್ರೂಪ್-ಸಿ ಮತ್ತು ಗ್ರೂಪ್ ಡಿ ವರ್ಗದ ಅಧಿಕಾರಿ/ನೌಕರರಿಗೆ ಅನ್ವಯವಾಗುವಂತೆ ಒಂದು ಜ್ಯೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇಕಡಾ 6ರಷ್ಟನ್ನು ಮೀರದಂತೆ ದಿನಾಂಕ: 01.06.2023 (ಜೂನ್ 1) ರಿಂದ ದಿನಾಂಕ: 15.06.2023 (ಜೂ.15) ರವರೆಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ ಪ್ರಾಯೋಜಿಸಲಾಗಿದೆ.
ಸರ್ಕಾರಿ ನೌಕರರು ಆಯ್ತು, ರೈತರಿಗೆ ಗುಡ್ ನ್ಯೂಸ್ ಕೊಟ್ಟ ಕಾಂಗ್ರೆಸ್ ಸರ್ಕಾರ: ಅಮೃತ ಮಳಿಗೆ ಆರಂಭ
ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅಮೃತ ಮಳಿಗೆ ಆರಂಭ: ಬೆಂಗಳೂರು (ಮೇ 30): ರಾಜ್ಯದಲ್ಲಿ ರೈತರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲ ಆಗುವಂತೆ ರಾಜ್ಯಾದ್ಯಂತ ಇರುವ ನಂದಿನಿ ಮಿಲ್ಕ್ ಪಾರ್ಲರ್‌ಗಳ ಪಕ್ಕದಲ್ಲಿಯೇ ಅಮೃತ ಮಳಿಗೆಯನ್ನು ಆರಂಭಿಸಲಾಗುತ್ತದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಕುರಿತು ಕೃಷಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ ಕೃಷಿ ಸಚಿವರು ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ನಂದಿನಿ ಮಿಲ್ಕ್ ಪಾರ್ಲರ್ ಪಕ್ಕದಲ್ಲೇ ಅಮೃತ ಮಳಿಗೆ ಆರಂಭ ಮಾಡುತ್ತೇವೆ. ಈ ಅಮೃತ ಮಳಿಗೆಯಲ್ಲಿ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಾಗುತ್ತದೆ. ರಾಜ್ಯದ ಎಲ್ಲಾ ನಂದಿನಿ ಪಾರ್ಲರ್‌ಗಳ ಪಕ್ಕದಲ್ಲಿ ನಿರ್ಮಿಸಲು ಚಿಂತನೆ ಮಾಡಲಾಗಿದೆ. ಕೃಷಿ ಇಲಾಖೆ ಜವಾಬ್ದಾರಿ ನೀಡಿದ ಬಳಿಕ ಮೊದಲ ಬಾರಿಗೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದೇನೆ ಎಂದು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ