
ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಸುಪ್ರೀಂಕೋರ್ಟ್ ತಡೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡುವ ಸಂಬಂಧ ಕಠಿಣ ನಿಯಮಗಳನ್ನು ರೂಪಿಸಲು ಸಾರಿಗೆ ಇಲಾಖೆ ಮುಂದಾಗಿದೆ.
ಬೈಕ್ ಟ್ಯಾಕ್ಸಿ ಸೇವೆ ನೀಡುವ ಬೈಕ್‌ಗಳಿಗೆ ಹಳದಿ ಫಲಕ (ಯೆಲ್ಲೋ ಬೋರ್ಡ್) ಕಡ್ಡಾಯಗೊಳಿಸುವುದು, ಹಳದಿ ಫಲಕದ ಬೈಕ್ ಟ್ಯಾಕ್ಸಿಗಳಿಗೆ ತೆರಿಗೆ ವಿಧಿಸುವುದು, ಚಾಲಕರಿಗೆ ಬೈಕ್ ಟ್ಯಾಕ್ಸಿ ಪರವಾನಗಿ ಕಡ್ಡಾಯಗೊಳಿಸುವುದು, ಪರವಾನಗಿ ಪಡೆದವರಿಗೆ ಮತ್ತು ಕರ್ನಾಟಕದ ನಿವಾಸಿಗಳಿಗಷ್ಟೇ ಬೈಕ್ ಟ್ಯಾಕ್ಸಿ ಸೇವೆ ನೀಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ.
ರಾಜ್ಯದಲ್ಲಿ ತ್ರಿಚಕ್ರ ಮೇಲ್ಪಟ್ಟ ವಾಹನಗಳಿಗೆ ಹಳದಿ ಫಲಕವಿದೆ. ಆದರೆ ಬೈಕ್‌ಗಳಿಗೆ ಹಳದಿ ಫಲಕ ನೀಡಲಾಗುತ್ತಿಲ್ಲ. ಒಂದು ವೇಳೆ, ಬೈಕ್ ಟ್ಯಾಕ್ಸಿಗೆ ಹಳದಿ ಫಲಕ ಕಡ್ಡಾಯಗೊಳಿಸಿದರೆ, ದ್ವಿಚಕ್ರ ವಾಹನಗಳಿಗೂ ಹಳದಿ ಫಲಕ ವಿತರಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕಾಗುತ್ತದೆ.
ಪ್ರಯಾಣಿಕರ ಸುರಕ್ಷತೆ ಸೇರಿ ಮತ್ತಿತರ ಕಾರಣವನ್ನಿಟ್ಟುಕೊಂಡು ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿಗೆ ಅನುಮತಿ ನಿರಾಕರಿಸಿತ್ತು. ಆದರೆ, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳು ರಾಜ್ಯ ಸರ್ಕಾರದ ನಿರ್ಧಾರಕ್ಕೆ ವ್ಯತಿರಿಕ್ತವಾಗಿ ಆದೇಶಿಸಿವೆ. ಅದರಿಂದ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯ. ಹೀಗಾಗಿಯೇ ಬೈಕ್ ಟ್ಯಾಕ್ಸಿಗೆ ಅನುಮತಿಸುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ರೂಪಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಆಟೋ ರಿಕ್ಷಾಗೆ ಅನುಮತಿಸುವ ಮಾದರಿಯಲ್ಲೇ ಬೈಕ್ ಟ್ಯಾಕ್ಸಿಗೆ ಅನುಮತಿಸುವ ನಿಯಮ ರೂಪಿಸಲು ಇಲಾಖೆ ನಿರ್ಧರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ