
ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜೂ.02): ಮಲೆನಾಡಿನಲ್ಲಿ ಅರಣ್ಯ ಇಲಾಖೆ ವಿರುದ್ಧ ಜನರು ನಡೆಸುತ್ತಿರುವ ಹೋರಾಟ ಸದ್ಯಕ್ಕೆ ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ಡೀಮ್ಡ್ ಫಾರೆಸ್ಟ್ , ಕಸ್ತೂರಿ ರಂಗನ್ ವರದಿ ಜಾರಿ ಬೆನ್ನಲ್ಲೆ ಇದೀಗ ಮತ್ತೊಂದು ಕಾಯ್ದೆ ಜಾರಿಗೆ ತರುವುದಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಮೊದಲೇ ಕಾಡು ಪ್ರಾಣಿಗಳ ಕಾಟದಿಂದ ಬೇಸತ್ತಿರುವ ಮಲೆನಾಡಿನ ಜನರಿಗೆ ಇಲಾಖೆ ನೀಡಿರುವ ನೋಟೀಸ್ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಅರಣ್ಯ ಒತ್ತುವರಿ ವಿರುದ್ದ ಸಮರ, ಕಸ್ತೂರಿ ರಂಗನ್ ಗೊಂದಲದಲ್ಲಿದ್ದೋರಿಗೆ ಈಗ ಮತ್ತೊಂದು ಶಾಕ್ ಎದುರಾಗಿದೆ.
ರಾಜ್ಯದಲ್ಲಿ ಅತಿಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಜಿಲ್ಲೆಗಳಲ್ಲಿ ಒಂದಾಗಿರುವ ಹಾಗೂ ಜಿಲ್ಲೆಯ ವಿಸ್ತೀರ್ಣದಲ್ಲಿ ಶೇ.60ರಷ್ಟು ಅರಣ್ಯವನ್ನು ಹೊಂದಿರುವ ಜಿಲ್ಲೆ ಎಂದರೆ ಎಂದರೆ ಅದು ಚಿಕ್ಕಮಗಳೂರು ಜಿಲ್ಲೆಯಾಗಿದೆ. ಇಲ್ಲಿ ದಟ್ಟ ಅರಣ್ಯದ ನಡುವೆ ಕಾಫಿ ತೋಟಗಳು ಹಾಗೂ ಕೃಷಿ ಜಮೀನುಗಳಿವೆ. ಈಗ ಮಲೆನಾಡಿಗರು ಒತ್ತುವರಿ, ಕಸ್ತೂರಿ ರಂಗನ್ ವರದಿ ಅತಂಕದಲ್ಲಿಯೇ ದಿನದೂಡುತ್ತಿರುವಾಗಲೇ ಸೆಕ್ಷನ್ 4(1), 17 (1) ಭೀತಿ ಅವರಿಸುತ್ತಿದೆ. ಅದರಲ್ಲಿಯೂ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಸೆಕ್ಷನ್ ಪೋರ್ ಓನ್, ಸೆವೆಟಿನ್ ಓನ್ ಭೀತಿ ಆವರಿಸಿದೆ. ಇನ್ನು ಉಳಿದಂತೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ಈ ಕಾಯ್ದೆ ಜಾರಿಗೆ ತರಲು ಇಲಾಖೆ ಮುಂದಾಗಿದೆ. ರೈತರ ಕಂದಾಯ ಭೂಮಿಯನ್ನು ಸೆಕ್ಷನ್ 4(1) ಸೇರ್ಪಡೆಯಾಗ್ತಿರೋ ಅತಂಕ ಎದುರಾಗಿದೆ.
ಇಲಾಖೆ ವಿರುದ್ದ ಜನರ ಆಕ್ರೋಶ :
ಸೆಕ್ಷನ್ 4(1), 17 (1) ಅನ್ನು ಜಾರಿ ಮಾಡೋಕೆ ಅರಣ್ಯ ಇಲಾಖೆ ಮುಂದಾಗಿದೆ ಸುಪ್ರಿಂಕೋರ್ಟ್ ಸೂಚನೆಯೂ ಅರಣ್ಯ ಉಳಿಸಿ ಅನ್ನೊದಿದೆ. ಈಗಾಗಲೇ ಅಲ್ದೂರು ಹೋಬಳಿ ಸೇರಿದಂತೆ ಹಲವೆಡೆ ನೋಟಿಸ್ ನೀಡಲಾಗಿದೆಇದು ಎಲ್ಲರನ್ನ ತಲ್ಲಣಗೊಳಿಸಿದೆ. ಕೇವಲ ಕೃಷಿ ಭೂಮಿ ಅಲ್ಲ. ಮನೆಗಳು ಇವಕ್ಕೆ ಸೇರ್ಪಡೆಯಾಗುತ್ತವೆ. ಸೆಕ್ಷನ್ 4(1), 17 (1) ಕಾಯ್ದೆ ಜಾರಿಯಿಂದ ರೈತರು ಕಂದಾಯ ಭೂಮಿಯಲ್ಲಿ ಮನೆ ಹಾಗೂ ಕೃಷಿ ಚಟುವಟಿಕೆ ಮಾಡುತ್ತಿದ್ದರೆ ಈ ಕಾಯ್ದೆ ಮೂಲಕ ಅದು ಕಂದಾಯ ಭೂಮಿ ಅಲ್ಲ ಅರಣ್ಯ ಭೂಮಿ ಎಂದು ಘೋಷಣೆ ಮಾಡುವ ಅಧಿಕಾರಿ ಇಲಾಖೆಯ ವ್ಯಾಪ್ತಿಗೆ ಬರಲಿದೆ. ಇದರಿಂದ ಆಕ್ರೋಶಗೊಂಡಿರುವ ಜನರು, ಶಾಸಕರು ಹಾಗೂ ಓರ್ವ ಸಂಸದರು ಸಭೆ ನಡೆಸಿ ನಂತರ ಸರ್ಕಾರದ ಮೂಲಕ ಮೇಲ್ಮನವಿ ಸಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಒಟ್ಟಾರೆ ನಾಡಿನ ಮಲೆನಾಡಿನಲ್ಲಿ ಒಂದಲ್ಲ ಒಂದು ಅರಣ್ಯ ಇಲಾಖೆಯ ಕಾಯ್ದೆಯಿಂದ ಅತಂಕದಲ್ಲೇ ಜೀವನ ನಡೆಸುವ ಪರಿಸ್ಥಿತಿ ಇಲ್ಲಿನ ಜನರಿಗೆ ಬಂದಿದೆ.ಈಗ ಅರಣ್ಯ ಅಂಚಿನ ಗ್ರಾಮಗಳೇ ಖಾಲಿ ಮಾಡುವ ಶಾಕ್ ಎದುರಾಗಿದೆ.ಇದನ್ನು ಸರ್ಕಾರ ಯಾವ ರೀತಿ ತೀರ್ಮಾನ ತೆಗೆದುಕೊಳ್ಳತ್ತೆ ಎನ್ನುವುದನ್ನು ಕಾದ್ದುನೋಡಬೇಕಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ