ಅರಣ್ಯ ನಿಗಮದಿಂದ ಶತಕೋಟಿ ರು. ಸಾಧನೆ: ತಾರಾ ಅನುರಾಧ

By Govindaraj SFirst Published Jun 25, 2022, 10:36 PM IST
Highlights

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವಾರ್ಷಿಕ ನಿಶ್ಚಿತ ಠೇವಣಿಯು ಕೇವಲ ಒಂದೂವರೆ ವರ್ಷದಲ್ಲಿ 67.35 ಕೋಟಿ ರು.ನಿಂದ 100 ಕೋಟಿ ರು.ಗೆ ಏರಿಕೆಯಾಗಿದೆ ಎಂದು ನಿಗಮದ ಅಧ್ಯಕ್ಷೆ ತಾರಾ ಅನೂರಾಧ ತಿಳಿಸಿದರು.

ಬೆಂಗಳೂರು (ಜೂ.25): ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವಾರ್ಷಿಕ ನಿಶ್ಚಿತ ಠೇವಣಿಯು ಕೇವಲ ಒಂದೂವರೆ ವರ್ಷದಲ್ಲಿ 67.35 ಕೋಟಿ ರು.ನಿಂದ 100 ಕೋಟಿ ರು.ಗೆ ಏರಿಕೆಯಾಗಿದೆ ಎಂದು ನಿಗಮದ ಅಧ್ಯಕ್ಷೆ ತಾರಾ ಅನೂರಾಧ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಲಗಿರಿ ಬೆಳೆಯುವುದಕ್ಕೆ 2017ರಲ್ಲಿ ನಿಷೇಧವೇರಿದ ನಂತರ ನಿಗಮದ ಆರ್ಥಿಕ ಪರಿಸ್ಥಿತಿ ಕ್ಷೀಣಿಸುತ್ತಾ ಬಂದಿತ್ತು. ಬ್ಯಾಂಕುಗಳಲ್ಲಿದ್ದ ಠೇವಣಿಯನ್ನು ಹಿಂಪಡೆದು ನಿಗಮವನ್ನು ನಿರ್ವಹಿಸಬೇಕಾಗಿದ್ದ ಪರಿಸ್ಥಿತಿಯಿತ್ತು. ಜನವರಿ 2021ರಲ್ಲಿ ನಾನು ನಿಗಮದ ಅಧ್ಯಕ್ಷ ಸ್ಥಾನ ವಹಿಸಿಕೊಂಡಾಗ ನಿಶ್ಚಿತ ಠೇವಣಿ 67.35 ಕೋಟಿ ರು. ಇತ್ತು. 

ಕೋವಿಡ್‌ ಸಾಂಕ್ರಾಮಿಕ ಹಾಗೂ ನೀಲಗಿರಿ ಬೆಳೆಯ ನಿಷೇಧದ ನಡುವೆಯೂ ಸರ್ಕಾರದ ಯಾವುದೇ ಅನುದಾನವಿಲ್ಲದೆ ವಿವಿಧ ರೀತಿಯಾದ ಆರ್ಥಿಕ ಶಿಸ್ತು ಮೂಡಿಸಿ, ಆಡಳಿತಾತ್ಮಕ, ನಿಯಂತ್ರಣಾತ್ಮಕ ಕ್ರಮಗಳಿಂದ ಕೇವಲ 18 ತಿಂಗಳುಗಳಲ್ಲಿ ನಿಶ್ಚಿತ ಠೇವಣಿಯನ್ನು 100 ಕೋಟಿ ರು.ಗೆ ಹೆಚ್ಚಿಸಲಾಗಿದೆ ಎಂದರು. ನಿಗಮದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ 100 ಕೋಟಿ ರು. ಮೈಲಿಗಲ್ಲು ಸಾಧನೆಯಾಗಿರುವುದು ಹರ್ಷ ತಂದಿದೆ. ಪ್ರಸ್ತುತ ನಿಗಮಕ್ಕೆ ಮಾಸಿಕ 5 ಕೋಟಿ ರು. ಆದಾಯ ಬರುತ್ತಿದ್ದು, ಎಲ್ಲ ಖರ್ಚುಗಳನ್ನು ಕಳೆದರೆ ಸುಮಾರು 2 ಕೋಟಿ ರು. ಉಳಿತಾಯವಾಗುತ್ತಿದೆ. 

ಉಡುಪಿ: ಇಲ್ಲಿ ದೇವಿಗೆ ಯಕ್ಷಗಾನ ಹರಕೆ ತೀರಿಸಲು 2043ರವರೆಗೂ ಕಾಯಬೇಕು!

ಮುಂದೆ ಯಾವುದೇ ಕಾರಣಕ್ಕೂ ಬ್ಯಾಂಕ್‌ನ ನಿಶ್ಚಿತ ಠೇವಣಿಯನ್ನು ಹಿಂದಕ್ಕೆ ಪಡೆಯದಂತೆ, ಪ್ರಸ್ತುತ 100 ಕೋಟಿ ರು. ಸ್ಥಿರ ಠೇವಣಿಯನ್ನಾಗಿಸುವ ಬಗ್ಗೆ ನಿಗಮದ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುತ್ತದೆ. ವಾರ್ಷಿಕ ಆದಾಯ ಹೆಚ್ಚಳಕ್ಕೆ ರಬ್ಬರ್‌ಗೆ ಹೆಚ್ಚಿನ ಒಲವು ತೋರಿಸಲಾಗುತ್ತಿದೆ ಎಂದು ಹೇಳಿದರು. ನಿಗಮದ ಸುವರ್ಣ ಸಂಭ್ರಮದಲ್ಲಿ ತುಟ್ಟಿಭತ್ಯೆ, ವೇತನ ಬಡ್ತಿ, ರಜಾ ವೇತನ, ರಜೆಗಳು, ಮುಂಬಡ್ತಿ, ಎಲ್ಲ ಸೌಲಭ್ಯಗಳನ್ನು ನಿಗಮದಿಂದ ನೌಕರರಿಗೂ ಕೂಡ ನೀಡಲಾಗುತ್ತಿದೆ. ಅರಣ್ಯ, ಪರಿಸರ, ಕಾಡು ಹಾಗೂ ಅರಣ್ಯ ಪ್ರದೇಶ ಒತ್ತುವರಿಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಕ್ತದಾನ ಹಾಗೂ ಸಿಬ್ಬಂದಿಗಳಿಗಾಗಿ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸರ್ಕಾರದಿಂದ ಅನುದಾನ ಪಡೆಯದೆ ಲಾಭ: ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರಾಧಾದೇವಿ ಮಾತನಾಡಿ, ನಿಗಮದ ರಬ್ಬರ್‌ ಹಾಗೂ ಮೆದುಮರಗಳಿಗೆ ಒಳ್ಳೆಯ ದರ ಲಭಿಸುತ್ತಿದ್ದು, ನಿಗಮ ಪ್ರತಿ ತಿಂಗಳು ಸುಮಾರು 2 ಕೋಟಿ ರು. ಲಾಭ ಗಳಿಸುತ್ತಿದೆ. ಹೀಗಾಗಿ, ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಪಡೆಯದೆ, ಬಾಹ್ಯ ಆರ್ಥಿಕ ಬೆಂಬಲವನ್ನೂ ಇಲ್ಲದೆ ಸತತವಾಗಿ ಲಾಭ ಗಳಿಸಲಾಗುತ್ತಿದೆ. ನಿಗಮವು ಉತ್ಪಾದಿಸುವ ಮೆದುಮರ ಮತ್ತು ರಬ್ಬರ್‌ ಕಚ್ಚಾ ಸಾಮಗ್ರಿಗಳಿಂದ ಉತ್ಪನ್ನಗಳನ್ನು ತಯಾರಿಸುವ ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.

ಹೊಟ್ಟೆ ಕೊಯ್ದು ಹಾಗೆ ಬಿಟ್ಟ ವೈದ್ಯ, ದಾವಣಗೆರೆ ಡಾಕ್ಟರ್ ಯಡವಟ್ಟಿಗೆ ವೃದ್ಧೆ ನರಳಾಟ

ಪರ್ಯಾಯ ಜಾತಿಯ ಮರ ಬೆಳೆಸಲು ಕ್ರಮ: ನೀಲಗಿರಿ ಬೆಳೆಸುವುದನ್ನು ನಿಷೇಧಿಸಿದ ನಂತರ ನಿಗಮದ ವತಿಯಿಂದ ಕ್ಯಾಸುರಿನ, ಹೆಬ್ಬೇವು ಮತ್ತು ಸುಬಾಬುಲ್‌ಗಳಂತಹ ಪರ್ಯಾಯ ಜಾತಿಯ ಮರಗಳನ್ನು ಬೆಳೆಸುವ ಕ್ರಮಗಳನ್ನು ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ. ನಿಗಮದ ಅಡಿಯಲ್ಲಿ 40 ಸಾವಿರ ಹೆಕ್ಟೇರ್‌ ಅರಣ್ಯ ಭೂಮಿಯಿದ್ದು, ಇನ್ನೂ 10 ಸಾವಿರ ಹೆಕ್ಟೇರ್‌ ಭೂಮಿಯನ್ನು ಅರಣ್ಯ ಇಲಾಖೆಯಿಂದ ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅರಣ್ಯ ಹೆಚ್ಚಿಸುವ ಹಾಗೂ ಒತ್ತುವರಿಯನ್ನು ತಡೆಯುವ ನಿಟ್ಟಿನಲ್ಲಿ ಪ್ರಮುಖವಾದ ಪಾತ್ರವನ್ನು ನಿಗಮ ವಹಿಸುತ್ತಿದೆ. ಅರಣ್ಯದ ಅಂಚಿನ ಭೂಮಿಯಲ್ಲಿ ಮರಗಳನ್ನು ನೆಡುವುದು ಹಾಗೂ ಅವುಗಳಿಂದ ಬರುವ ಉತ್ಪನ್ನಗಳ ಮೂಲಕ ಆರ್ಥಿಕ ಚಟುವಟಿಕೆಯನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು ಹೇಳಿದರು.

click me!